ಮೈಸೂರು, ಮೇ 29(ಪಿಎಂ)- ಕೇಂದ್ರ ಸರ್ಕಾರ 2003ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದು ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸಲು ಮುಂದಾಗಿದೆ. ಈ ನಿರ್ಧಾರದಿಂದ ಕೂಡಲೇ ಹಿಂದೆ ಸರಿಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕಾಯ್ದೆಗೆ ತಿದ್ದುಪಡಿ ತರಲು 2020ರ ಕರಡುಪ್ರತಿ ಪ್ರಕಟಿಸ ಲಾಗಿದೆ. ರಾಜ್ಯ ಸರ್ಕಾರ ತಕ್ಷಣ ಸಂಪುಟ ಸಭೆ ನಡೆಸಿ, ತಿದ್ದುಪಡಿಗೆ ಸಮ್ಮತಿ ನೀಡುವುದಿಲ್ಲ ಎಂದು ನಿರ್ಧರಿಸ ಬೇಕು ಎಂದು ಆಗ್ರಹಿಸಿದರು. ತಿದ್ದುಪಡಿ ತಂದರೆ ರೈತರು, ಸಣ್ಣ ಉದ್ಯಮಿಗಳು, ಬಿಪಿಎಲ್ ಗ್ರಾಹಕರಿಗೆ ಕಷ್ಟವಾಗ ಲಿದೆ. ಸೇವಾ ಕ್ಷೇತ್ರ ಖಾಸಗಿಗೆ ವಹಿಸುವುದು ಸರಿಯಲ್ಲ. ರೈತರ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡುವ ವ್ಯವಸ್ಥೆ ಮೇಲೂ ಪರಿಣಾಮ ಬೀರಲಿದೆ ಎಂದರು.
ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಆಕ್ಷೇಪ ಸಲ್ಲಿಸಲಾಗು ವುದು. ಬಳಿಕ ರಾಜ್ಯದಲ್ಲಿ ಪಂಪ್‍ಸೆಟ್ ಹೊಂದಿರುವ 22 ಲಕ್ಷ ರೈತರನ್ನು ಸಂಘಟಿಸಿ ಬೀದಿಗಿಳಿದು ಹೋರಾಡ ಲಾಗುವುದು. ಇದಕ್ಕೂ ಸ್ಪಂದಿಸದಿದ್ದರೆ ಜೈಲ್ ಭರೋ, ಜನಪ್ರತಿನಿಧಿಗಳ ಮನೆಗೆ ಮುತ್ತಿಗೆ ಸೇರಿದಂತೆ ವಿವಿಧ ರೀತಿಯ ಹೋರಾಟ ನಡೆಸಲಾಗುವುದು. ಶಾಂತಿಯುತ ಅಸಹಕಾರ ಚಳವಳಿ ಉದ್ದೇಶವೂ ಇದೆ ಎಂದರು.
ಕೇಂದ್ರ ಸರ್ಕಾರ ಎಲ್ಲಾ ಉತ್ಪಾದನಾ ವಲಯಗಳನ್ನು ಖಾಸಗೀಕರಣ ಮಾಡುತ್ತಿದೆ. ಯೋಜನಾ ಆಯೋಗ ಮುಚ್ಚಲಾಗಿದೆ. ಚುನಾವಣಾ ಆಯೋಗವನ್ನು ಹಲ್ಲಿಲ್ಲದ ಹಾವಿನಂತೆ ಮಾಡಲಾಗಿದೆ. ಸಂವಿಧಾನದ ಎಲ್ಲಾ ಅಂಗ ಗಳನ್ನು ಬಲಹೀನಗೊಳಿಸಿ, ಪ್ರಶ್ನಿಸುವ ಜನಪರ ಹೋರಾಟ ಗಾರರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಸಂಸತ್ತು ಹಾಗೂ ವಿಧಾನಸಭೆಗಳನ್ನು ಯಾವಾಗ ಮಾರಾಟ ಮಾಡುತ್ತೀರಿ? ಎಂದು ಪ್ರಶ್ನಿಸಿದರು. ಸ್ವದೇಶಿ ಪ್ರೇಮದ ಆರ್‍ಎಸ್‍ಎಸ್, ಹಿಂದೂಪರ ಸಂಘಟನೆಗಳು ಕೇಂದ್ರ ಸರ್ಕಾರದ ಖಾಸಗೀ ಕರಣ ನಡೆ ಕುರಿತು ಮಾತನಾಡಬೇಕು ಎಂದರು.
ಮಿಡತೆ ಹಾವಳಿ: ಮಿಡತೆಗಳು ವಿವಿಧ ರಾಜ್ಯಗಳಲ್ಲಿ ರೈತರ ಬೆಳೆ ಹಾಳು ಮಾಡುತ್ತಿವೆ. ರಾಜ್ಯಕ್ಕೂ ದಾಳಿಯಿ ಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ ರೋಗಕ್ಕೆ ತುತ್ತಾಗಿರುವ ಸಣ್ಣ ಈರುಳ್ಳಿ ಬೆಳೆಗೆ ಪರಿಹಾರ ನೀಡಬೇಕು ಎಂದು ಕೋರಿದರು.