ಕೃಷಿ ಚಟುವಟಿಕೆ, ಗ್ರಾಮೀಣ ಬದುಕಿನ ಬಗ್ಗೆ  ಮಾಹಿತಿ ನೀಡಲು ‘ಅಗ್ರಿ ಟೂರಿಸಂ’ಗೆ ಚಿಂತನೆ
ಮೈಸೂರು

ಕೃಷಿ ಚಟುವಟಿಕೆ, ಗ್ರಾಮೀಣ ಬದುಕಿನ ಬಗ್ಗೆ ಮಾಹಿತಿ ನೀಡಲು ‘ಅಗ್ರಿ ಟೂರಿಸಂ’ಗೆ ಚಿಂತನೆ

March 16, 2021

ಮೈಸೂರು, ಮಾ.15- ಕೃಷಿ ಪ್ರಧಾನ ರಾಷ್ಟ್ರ ಭಾರತ ಕೃಷಿ ಚಟುವಟಿಕೆಯನ್ನು ವಿದೇಶಿಗರೂ ಸೇರಿದಂತೆ ಪ್ರವಾಸಿಗರಿಗೆ ಮನದಟ್ಟು ಮಾಡಿಕೊಡುವುದರೊಂದಿಗೆ ಪ್ರವಾಸೋದ್ಯಮದಲ್ಲಿ ಕೃಷಿ ಕ್ಷೇತ್ರದ ಮಹತ್ವ ಹಾಗೂ ಗ್ರಾಮೀಣ ಬದುಕಿನ ಅನಾ ವರಣಗೊಳಿಸುವ ನಿಟ್ಟಿನಲ್ಲಿ ಮೈಸೂ ರಲ್ಲಿ `ಅಗ್ರಿ ಟೂರಿಸಂ’ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಚಿಂತನೆ ನಡೆಸಿದೆ.

ಮೈಸೂರು ಪ್ರವಾಸೋದ್ಯಮವನ್ನು ಕೇಂದ್ರೀಕರಿಸಿ ರಾಜ್ಯ ಪ್ರವಾಸೋದ್ಯಮ ಇಲಾಖೆ ವಿವಿಧ ಕಾರ್ಯಕ್ರಮ ಜಾರಿ ಗೊಳಿಸಲು ಮುಂದಾಗಿರುವ ಬೆನ್ನಲ್ಲೇ ಕೆಎಸ್‍ಟಿಡಿಸಿ `ಅಗ್ರಿ ಟೂರಿಸಂ’ ಸ್ಥಾಪನೆಗೆ ಮುಂದಾಗಿದೆ. ಆ ಮೂಲಕ ಪ್ರವಾ ಸೋದ್ಯಮದೊಂದಿಗೆ ಕೃಷಿ ಹಾಗೂ ಗ್ರಾಮೀಣ ಬದುಕಿನ ವಿವರಣೆ ಪ್ರವಾಸಿ ಗರಿಗೆ ದೊರಕಿಸಿ ದೇಶದ ಅಭಿವೃದ್ಧಿಯಲ್ಲಿ ಕೃಷಿ ಹಾಗೂ ರೈತರ ಪಾತ್ರ ಮತ್ತು ಮಹತ್ವ ವನ್ನು ತಿಳಿಸುವುದು ಇದರ ಉದ್ದೇಶ.
`ಅಗ್ರಿ ಟೂರಿಸಂ’ನಲ್ಲಿ: ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ `ಅಗ್ರಿ ಟೂರಿಸಂ’ಗೆ ಕ್ರಮ ಕೈಗೊಳ್ಳಲಾಗಿದೆ. ಮೈಸೂರು-ಶ್ರೀರಂಗ ಪಟ್ಟಣದ ನಡುವೆ ಅಥವಾ ಕೆಆರ್‍ಎಸ್ ಹಿನ್ನೀರಿನ ಪ್ರದೇಶದಲ್ಲಿ `ಅಗ್ರಿ ಟೂರಿಸಂ’ ನಿರ್ಮಿಸಲು ಉದ್ದೇಶಿಸಲಾಗಿದ್ದು, ಸುಮಾರು 10-15 ಎಕರೆ ಪ್ರದೇಶದಲ್ಲಿ ಈ ಹೊಸ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಅದರಲ್ಲಿ ಭತ್ತ ಗದ್ದೆ, ವಿವಿಧ ಫಸಲಿನ ಬೆಳೆ, ಕೆಸರು ಗದ್ದೆ ಓಟ, ಗುಡಿಸಲು ಮಾದರಿ ಯಲ್ಲಿ ವಾಸ್ತವ್ಯಕ್ಕೆ ಕೊಠಡಿ ನಿರ್ಮಿಸಲಾಗುತ್ತದೆ.

ದೇಸಿ ಸಂಸ್ಕøತಿ: ನಿರ್ಮಿಸಲುದ್ದೇಶಿಸಿ ರುವ ಅಗ್ರಿ ಟೂರಿಸಂಗೆ ಬರುವ ಪ್ರವಾಸಿ ಗರನ್ನು ಪ್ರವೇಶ ದ್ವಾರದಿಂದ ಎತ್ತಿನ ಗಾಡಿ ಅಥವಾ ಕುದುರೆ ಗಾಡಿಯಲ್ಲಿ ಕರೆದೊಯ್ಯ ಲಾಗುತ್ತದೆ. ಗ್ರಾಮೀಣ ಸೊಗಡಿನಂತೆ ಬಂದ ಅತಿಥಿಗಳಿಗೆ ಸತ್ಕರಿಸಲಾಗುತ್ತದೆ. ಗುಡಿಸಲಿ ನಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲು ಈ ಯೋಜನೆಯಲ್ಲಿ ಚಿಂತಿಸಲಾಗಿದೆ.

ಸ್ಥಳೀಯ ಆಹಾರ ಪದ್ಧತಿ: ಬಂದ ಪ್ರವಾಸಿ ಗರಿಗೆ ಸ್ಥಳೀಯ ಆಹಾರ ಪದ್ಧತಿಯಂತೆ ಊಟ, ತಿಂಡಿ ನೀಡಲಾಗುತ್ತದೆ. ಈ ಭಾಗ ದಲ್ಲಿ ರಾಗಿ ಮುದ್ದೆ, ಉಪ್ಸಾರು, ಮಸ್ಸೊಪ್ಪಿನ ಸಾರು ಹಾಗೂ ಸೊಪ್ಪಿನ ಸಾಂಬರ್ ಸಾಂಪ್ರ ದಾಯಿಕ ಆಹಾರ ಪದ್ಧತಿಯಾಗಿದ್ದು, ಅದರ ಪರಿಚಯ ಹಾಗೂ ರುಚಿಯನ್ನು ಪ್ರವಾಸಿಗರಿಗೆ ಉಣ ಬಡಿಸಲಾಗುತ್ತದೆ.

ಸಂಜೆ ವೇಳೆ ಸಾಂಸ್ಕøತಿಕ ಕಾರ್ಯಕ್ರಮ: ಮುಂದಿನ 6 ತಿಂಗಳೊಳಗೆ ಅಗ್ರಿ ಟೂರಿಸಂ ನಿರ್ಮಿಸಲು ಉದ್ದೇಶಿಸಲಾಗಿದ್ದು, ಬಳಿಕ ಪ್ರತಿದಿನ ಪ್ರವಾಸಿಗರ ಆಕರ್ಷಣೆಗಾಗಿ ಅಗ್ರಿ ಟೂರಿಸಂನಲ್ಲಿ ಜಾನಪದ ಕಲೆ ಹಾಗೂ ವಿವಿಧ ಸಾಂಸ್ಕøತಿಕ ಚಟುವಟಿಕೆ ಹಮ್ಮಿಕೊಳ್ಳ ಲಾಗುತ್ತದೆ. ಇದರಿಂದ ಸ್ಥಳೀಯ ಕಲಾವಿದ ರಿಗೆ ಉತ್ತೇಜನ ನೀಡುವುದರೊಂದಿಗೆ ಬೇರೆ ಬೇರೆ ಪ್ರದೇಶದಿಂದ ಬಂದ ಪ್ರವಾಸಿಗರಿಗೂ ಸ್ಥಳೀಯ ಸಂಸ್ಕøತಿ, ಆಚಾರ-ವಿಚಾರಗಳ ಬಗ್ಗೆ ಪರಿಚಯ ಮಾಡಿಕೊಟ್ಟಂತಾಗುತ್ತದೆ. ಈ ಹಿನ್ನೆಲೆ ಯಲ್ಲಿ ಕೆಎಸ್‍ಟಿಡಿಸಿ ಮಹತ್ತರ ಹೆಜ್ಜೆ ಇಡಲು ಮುಂದಾಗಿದೆ.

ರಾಜಸ್ಥಾನದ ಮಾದರಿಯಲ್ಲಿ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷೆ, ಚಿತ್ರನಟಿ ಶ್ರುತಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಮೈಸೂರು ಪ್ರವಾಸೋದ್ಯಮ ಅಭಿವೃದ್ದಿಗೆ ಪ್ರವಾಸೋದ್ಯಮ ಸಚಿವರು ವಿವಿಧ ಕಾರ್ಯಕ್ರಮ ಜಾರಿ ಗೊಳಿಸಲು ಮುಂದಾಗಿದ್ದಾರೆ. ಇದಕ್ಕೆ ಪೂಕರವಾಗಿ ಕೆಎಸ್‍ಟಿಡಿಸಿ ವತಿಯಿಂದ `ಅಗ್ರಿ ಟೂರಿಸಂ’ ನಿರ್ಮಿಸಲು ಉದ್ದೇಶಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ. ಈ ಹಿಂದೆ ಇದ್ದಂತೆ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸಲು ಪ್ರವಾಸೋದ್ಯಮ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ವಿದೇಶಿ ಪ್ರವಾಸಿಗರಿಗೆ ಅಗ್ರಿ ಟೂರಿಸಂ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಲಿದೆ. ಇದರೊಂದಿಗೆ ವಿವಿಧ ರಾಜ್ಯಗಳ ಹಾಗೂ ರಾಜ್ಯದ ಪ್ರವಾಸಿಗರಿಗೂ ಹೊಸ ಅನುಭವ ನೀಡಲಿದೆ ಎಂದರು.

ರಾಜಸ್ಥಾನದಲ್ಲಿ ಪ್ರತಿ ಗ್ರಾಮಗಳನ್ನೂ ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅದೇ ಮಾದರಿಯಲ್ಲಿ ಅಗ್ರಿ ಟೂರಿಸಂ ಅನ್ನು ನಿಗದಿತ ಸ್ಥಳದಲ್ಲಿ ನಿರ್ಮಿಸಲಾಗುತ್ತದೆ. ವಿದೇಶಿ ಪ್ರವಾಸಿ ಗರು ಹಾಗೂ ದೇಶದ ವಿವಿಧ ರಾಜ್ಯಗಳ ಪ್ರವಾಸಿಗರು ಮೈಸೂರಿಗೆ ಬಂದಾಗ ಸ್ಟಾರ್ ಕ್ಯಾಟಗರಿಯ ಹೋಟೆಲ್‍ಗಳಲ್ಲಿ ವಾಸ್ತವ್ಯ ಹೂಡುವುದಕ್ಕಿಂತ ಗ್ರಾಮೀಣ ಸೊಗಡಿನ ಗುಡಿಸಲಿನ ಮಾದರಿ ಕೊಠಡಿಯಲ್ಲಿ ವಾಸ್ತವ್ಯ ಹೂಡುವುದು ವಿಭಿನ್ನ ಅನುಭವ ನೀಡಲಿದೆ. ಅಲ್ಲದೆ ಸ್ಥಳೀಯ ಸಂಸ್ಕøತಿ, ರೈತರ ಪರಿಶ್ರಮದ ಮಹತ್ವವನ್ನು ಎಲ್ಲರಿಗೂ ಮನವರಿಕೆಯಾಗಲಿದೆ. ಅಗ್ರಿ ಟೂರಿಸಂ ನಿರ್ಮಾಣ ಅನುದಾನಕ್ಕೆ ಮನವಿ ಸಲ್ಲಿಸ ಲಾಗುವುದು. ಕೆಆರ್‍ಎಸ್ ಹಿನ್ನೀರಿನ ಪ್ರದೇಶದಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಗೆ ಸೇರಿದ 19 ಎಕರೆ ಜಾಗವಿದೆ. ಅಲ್ಲಿ ಅಥವಾ ಮೈಸೂರು-ಬೆಂಗಳೂರು ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಸ್ಥಳದಲ್ಲಿ ಜಾಗ ಗುರುತಿಸಿ, ಅಗ್ರಿ ಟೂರಿಸಂ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಅನುದಾನ ದೊರೆತರೆ 6 ತಿಂಗಳಲ್ಲಿ ಅಗ್ರಿ ಟೂರಿಸಂ ನಿರ್ಮಿಸಲು ಕಾರ್ಯಯೋಜನೆ ರೂಪಿಸಲಾಗುವುದು ಎಂದು ಶ್ರುತಿ ತಿಳಿಸಿದರು.

Translate »