ಹೊಂದಾಣಿಕೆ ಬಗ್ಗೆ ಬಿಎಸ್‍ವೈ  ನನ್ನೊಂದಿಗೆ ಮಾತನಾಡಿದ್ದಾರೆ
ಮೈಸೂರು

ಹೊಂದಾಣಿಕೆ ಬಗ್ಗೆ ಬಿಎಸ್‍ವೈ ನನ್ನೊಂದಿಗೆ ಮಾತನಾಡಿದ್ದಾರೆ

December 6, 2021

ಮೈಸೂರು,ಡಿ.5(ಪಿಎಂ)-ಸ್ಥಳೀಯ ಸಂಸ್ಥೆಗಳ ಪರಿಷತ್ ಚುನಾವಣೆ ಹೊಂದಾಣಿಕೆ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ನನ್ನ ನಡುವೆ ವೈಯಕ್ತಿಕ ಮಾತು ಕತೆ ಆಗಿದ್ದು, ಯಾವುದನ್ನೂ ಸೋಮವಾರ (ಡಿ.6) ಘೋಷಣೆ ಮಾಡಲಿದ್ದೇನೆ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಭಾನು ವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಕ್ಷಣದವರೆಗೆ ಹೊಂದಾಣಿಕೆÉ (ಬೆಂಬಲ) ಬಗ್ಗೆ ಮುಕ್ತ ಮತ್ತು ಅಧಿಕೃತ ಚರ್ಚೆ ಯಾಗಿಲ್ಲ. ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಇಲ್ಲದ ಕ್ಷೇತ್ರಗಳಲ್ಲಿ ಜೆಡಿಎಸ್ ಮತದಾರರು ನಮಗೆ ಮತ ನೀಡುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪನವರು ಓಪನ್ ಆಗಿಯೇ ಹೇಳಿದ್ದಾರಲ್ಲದೆ, ಅವರೊ ಬ್ಬರೇ ನನ್ನೊಂದಿಗೆ ಮಾತನಾಡಿ ಈ ಸಂಬಂಧ ಮನವಿ ಮಾಡಿದ್ದಾರೆ ಎಂದು ಹೇಳಿದರು.

ಆದರೆ ಈ ಸಂಬಂಧ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಮತ್ತು ಬಿಜೆಪಿ ನಾಯಕರು, ಅದು ಅವರಿಬ್ಬರ ವೈಯಕ್ತಿಕ ಎನ್ನುವಂತೆ ಮಾತ ನಾಡಿದ್ದಾರೆ. ಇನ್ನು ಕಾಂಗ್ರೆಸ್‍ನವರು ನಮಗೆ ಬೆಂಬಲ ಅಗತ್ಯವಿಲ್ಲ ಎಂದು ಓಪನ್ ಆಗಿಯೇ ಹೇಳಿದ್ದಾರೆ. ಆದ್ದರಿಂದ ಯಾವ ತೀರ್ಮಾನ ಮಾಡಬೇಕೆಂದು ಚಿಂತಿಸಿ, ಸೋಮವಾರ ಘೋಷಣೆ ಮಾಡಲಿದ್ದೇನೆ ಎಂದು ತಿಳಿಸಿದರು.

ಚುನಾವಣಾ ಮೈತ್ರಿ (ಬೆಂಬಲ) ಸಂಬಂಧ ಕುಮಾರಸ್ವಾಮಿ ನಿರ್ಧಾರ ಮಾಡುತ್ತಾರೆಂದು ಈಗಾಗಲೇ ಹೆಚ್.ಡಿ.ದೇವೇಗೌಡರು ಸಹ ಹೇಳಿ ದ್ದಾರೆ. ನಾಳೆ ಇದರ ಬಗ್ಗೆ ನಿರ್ಣಯ ಮಾಡುತ್ತೇನೆ. ಕಾಂಗ್ರೆಸ್‍ನವರು ನಮ್ಮನ್ನು ಬೆಂಬಲ ಕೇಳಿಲ್ಲ. ಸ್ಥಳೀಯ ಮಟ್ಟದಲ್ಲೂ ಕೇಳಿಲ್ಲ. ರಾಜ್ಯ ಮಟ್ಟದಲ್ಲೂ ಗೌರವಯುತ ವಾಗಿ ನಡೆಸಿಕೊಂಡಿಲ್ಲ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಎಂದರು.

ಚುನಾವಣಾ ಪ್ರಚಾರ ಸಂಬಂಧ ವೀಕ್ಷಕರು, ಆಯಾಯ ತಾಲೂಕಿನ ಪದಾಧಿಕಾರಿ ಗಳು, ಪಕ್ಷದ ಮುಖಂಡರು ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಂಬಂಧ ಸಂಪೂರ್ಣ ಮಾಹಿತಿಯನ್ನು ಪ್ರತಿಯೊಂದು ಕ್ಷೇತ್ರದ ವೀಕ್ಷಕರು ಕೊಟ್ಟಿದ್ದಾರೆ. 2023ರ ಚುನಾವಣೆ ಹಿನ್ನೆಲೆಯಲ್ಲಿ ನಾನು ಕಾರ್ಯಾಗಾರ ಮಾಡಿದ್ದೆ. ಕಾರ್ಯಾಗಾರದಲ್ಲಿ ನೀಡಿದ ಸಲಹೆಗಳನ್ನು ಈ ಚುನಾವಣಾ ಪ್ರಚಾರದಲ್ಲೂ ಅಳವಡಿಸಿದ್ದಾರೆ. ಇದು ಮುಂದಿನ ವಿಧಾನಸಭಾ ಚುನಾವಣೆಗೆ ಅನುಕೂಲವಾಗಲಿದೆ. ಮೈಸೂರಿನಲ್ಲೂ ಮತದಾರರನ್ನು ಮುಟ್ಟಿದ್ದೇವೆ ಎಂದರು.

6 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇದ್ದು, ಇನ್ನುಳಿದ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಸ್ಪರ್ಧೆ ಇದೆ. 6 ಕ್ಷೇತ್ರಗಳನ್ನೂ ಗೆಲ್ಲಲೇಬೇಕೆಂದು ಗಂಭೀರವಾಗಿ ತೆಗೆದುಕೊಂಡಿದ್ದು, ಇದರಲ್ಲಿ ಯಶಸ್ವಿಯಾದರೆ, ರಾಜ್ಯದಲ್ಲಿ ಜೆಡಿಎಸ್ ಅಳಿಸಲು ಸಾಧ್ಯವಿಲ್ಲವೆಂಬ ಸಂದೇಶ ರವಾನೆಯಾಗಲಿದೆ. ಇದರಿಂದ 2023ರ ಚುನಾವಣೆಯಲ್ಲಿ ಜೆಡಿಎಸ್‍ಗೆ ಜನ ಬೆಂಬಲ ಪಡೆಯಲು ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದರು. ಈ ಕ್ಷೇತ್ರದಲ್ಲಿ 2ನೇ ಪ್ರಾಶಸ್ತ್ಯ ಮತ ಕಾಂಗ್ರೆಸ್ ಮತ್ತು ಬಿಜೆಪಿ ಅಭಿಮಾನಿಗಳಿಂದ ನಮಗೆ ದೊರೆಯಲಿದೆ. ವರುಣ ವಿಧಾನಸಭಾ ಕ್ಷೇತ್ರದ ಮತದಾರರ ಸಭೆಯೂ ಯಶಸ್ವಿಯಾಗಿದೆ ಎಂದು ತಿಳಿಸಿದರು.

Translate »