15 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ
ಮೈಸೂರು

15 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ

December 6, 2021

ಮೈಸೂರು,ಡಿ.5(ಎಸ್‍ಬಿಡಿ)- ಸ್ಥಳೀಯ ಸಂಸ್ಥೆ ಗಳಿಂದ ವಿಧಾನಪರಿಷತ್‍ಗೆ ನಡೆಯುತ್ತಿರುವ ಚುನಾ ವಣೆಯಲ್ಲಿ ಮೈಸೂರು-ಚಾಮರಾಜನಗರ ಜಿಲ್ಲಾ ಕ್ಷೇತ್ರದ ಅಭ್ಯರ್ಥಿ ರಘು ಕೌಟಿಲ್ಯ ಸೇರಿದಂತೆ 15 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿ ಸುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೇಳಿದರು.

ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಕಲಾಮಂದಿರದಲ್ಲಿ ಬಿಜೆಪಿ ಮೈಸೂರು ನಗರ ಹಾಗೂ ಗ್ರಾಮಾಂತರ(ಜಿಲ್ಲೆ) ಘಟಕಗಳ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮೈಸೂರು-ಚಾಮರಾಜನಗರ ಜಿಲ್ಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಅವರಿಗೆ ಮತ ಚಲಾವಣೆ ಮಾಡುವ ವಿಧಾನವನ್ನು ಪ್ರದರ್ಶಿಸಿ, ಅವರ ಪರ ಮತಯಾಚಿಸಿ ಮಾತನಾಡಿದರು.

ರಾಜ್ಯದ ಜನರ ಪ್ರೀತಿ-ವಿಶ್ವಾಸ ನಮ್ಮ ಮೇಲಿದೆ. ಈ ಭಾಗದ ಕಾರ್ಯಕರ್ತರ ಉತ್ಸಾಹ ನೋಡಿದರೆ ರಘು ಕೌಟಿಲ್ಯ ಅವರ ಗೆಲುವು ನಿಶ್ಚಿತ. ಮೊದಲ ಸುತ್ತಿನ ಮತ ಎಣಿಕೆಯಲ್ಲೇ ಹೆಚ್ಚು ಅಂತರದಿಂದ ಗೆಲುವು ನೀಡುವುದು ನಮ್ಮ ನಿಮ್ಮೆಲ್ಲರ ಉದ್ದೇಶ. ಈ ನಿಟ್ಟಿ ನಲ್ಲಿ ಇನ್ನುಳಿದ ನಾಲ್ಕು ದಿನಗಳಲ್ಲಿ ಪ್ರತಿ ಮತದಾ ರರನ್ನು ಭೇಟಿ ಮಾಡಿ, ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಕೈಜೋಡಿಸಿ ಬೇಡಿಕೊಳ್ಳಬೇಕು. ಮಹಿಳಾ ಕಾರ್ಯಕರ್ತರು ತಂಡ ರೂಪಿಸಿಕೊಂಡು ಮತ ಯಾಚಿಸಬೇಕು. ಮೈಸೂರು-ಚಾಮರಾಜನಗರ ಜಿಲ್ಲಾ ಕ್ಷೇತ್ರ ಸೇರಿದಂತೆ ನಮ್ಮ ಅಭ್ಯರ್ಥಿಗಳು ಕಣದಲ್ಲಿರುವ ಯಾವ ಕ್ಷೇತ್ರದಲ್ಲೂ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಜೆಡಿಎಸ್ ಸ್ಪರ್ಧಿಸ ದಿರುವ ಕ್ಷೇತ್ರಗಳಲ್ಲಿ ಬೆಂಬಲ ನೀಡುವಂತೆ ಮಾತ್ರ ಕೇಳಲಾಗಿದೆ. ಹೊಂದಾಣಿಕೆ ಭ್ರಮೆಯಲ್ಲಿರುವವರಿಗೆ ಮತದಾನದ ಮೂಲಕ ಉತ್ತರ ನೀಡಬೇಕು ಎಂದು ತಿಳಿಸಿದರು.

ಕೊರೊನಾ ಸಂದರ್ಭದಲ್ಲಿ ಸಾರ್ವಜನಿಕ ಕಾರ್ಯದಲ್ಲಿ ತೊಡಗಿದ್ದ ರಘು ಕೌಟಿಲ್ಯ, ಆ ಸಂದರ್ಭದಲ್ಲಿ ಅವರ ಶ್ರೀಮತಿಯನ್ನು ಕಳೆದುಕೊಳ್ಳಬೇಕಾಯಿತು. ಯಾವ ಪ್ರಯತ್ನ ದಿಂದಲೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಅತ್ಯಂತ ನೋವಿನಿಂದ ಹೇಳುತ್ತಿದ್ದೇನೆ. ಪಕ್ಷದ ಸರ್ವಸಮ್ಮತ ಅಭ್ಯರ್ಥಿ ರಘು ಕೌಟಿಲ್ಯ, ಈಗಾಗಲೇ ಎಲ್ಲಾ ಗ್ರಾಪಂ ಕ್ಷೇತ್ರಕ್ಕೂ ಭೇಟಿ ನೀಡಿ, ಮತಯಾಚಿಸಿರುವ ಏಕೈಕ ಮುಖಂಡ. ಡಿ.10ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಯಾವ ಕಾರಣದಿಂದಲೂ ತಡ ಮಾಡದೆ ಮೊದಲ ತಾಸಿನಲ್ಲೇ ಮತ ಚಲಾಯಿಸಬೇಕು. ಮಾದರಿ ಮತಪತ್ರದಲ್ಲಿ ರಘು ಕೌಟಿಲ್ಯ ಹೆಸರಿನ ಮುಂದೆ `1’ ಬರೆದಂತೆ ನೀವೂ ಬರೆಯುತ್ತೀರೆಂಬ ವಿಶ್ವಾಸವಿದೆ. ಮತ್ತೊಂದು ಗೀಟು ಎಳೆದರೆ ಆ ಮತ ತಿರಸ್ಕøತವಾಗುತ್ತದೆ. ಪ್ರತಿ ಚುನಾವಣೆಯಲ್ಲಿ ಬುದ್ಧಿವಂತರ ತಪ್ಪಿನಿಂ ದಲೇ 500-600 ಮತ ತಿರಸ್ಕøತವಾಗುತ್ತವೆ. ಹಾಗಾಗಿ ಎಚ್ಚರಿಕೆಯಿಂದ ಮತ ಚಲಾಯಿಸ ಬೇಕು. ಮೈಸೂರು-ಚಾಮರಾಜನಗರ ಸೇರಿ 15 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದ್ದು, ಈ ಮೂಲಕ ವಿಧಾನಪರಿಷತ್‍ನಲ್ಲಿ ಬಹುಮತ ಸಾಧಿಸಲಾಗುವುದು ಎಂದು ಹೇಳಿದರು.

ಚುನಾವಣೆ ಬಳಿಕ ಪ್ರವಾಸ: ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿ, ಸಚಿವರು, ಶಾಸಕರಿಗೆ ಸಿಹಿ ಊಟ ಬಡಿಸಿದ ಬಳಿಕ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದೆ. ಈ ವೇಳೆ ಕಣ್ಣೀರು ಹಾಕುತ್ತಾ ಸಿಎಂ ಸ್ಥಾನ ತ್ಯಜಿಸಿದರೆಂದು ಕೆಲವರು ಟೀಕಿಸಿ ದರು. ಆದರೆ ನಾನು ರಾಜೀನಾಮೆ ನೀಡಿದ್ದಕ್ಕೆ ಕಣ್ಣೀರು ಹಾಕಲಿಲ್ಲ. ಸಾಮಾನ್ಯ ಕಾರ್ಯ ಕರ್ತನಾಗಿದ್ದ ನನ್ನನ್ನು 4 ಬಾರಿ ಮುಖ್ಯಮಂತ್ರಿ ಮಾಡಿದ ರಾಜ್ಯದ ಜನರ ಪ್ರೀತಿ-ವಿಶ್ವಾಸವನ್ನು ನೆನೆದು ಬಾವುಕನಾದೆ. ಹೀಗೆ ವಿಶ್ವವೇ ಅಚ್ಚರಿಪಡುವ ನಾಯಕತ್ವ ಗುಣವುಳ್ಳ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಯಾರೋ ಮೂರು ಜನ ಮನಬಂದಂತೆ ಮಾತನಾಡುತ್ತಾರೆ. ಇದಕ್ಕೆಲ್ಲಾ ಚುನಾವಣಾ ಫಲಿತಾಂಶದ ನಂತರ ಉತ್ತರಿಸೋಣ. ನನ್ನ ಆಡಳಿತದ ಬಗ್ಗೆ ತೃಪ್ತಿ, ಸಮಾಧಾನವಿದೆ. ಚುನಾವಣೆ ಮುಗಿದು 15-20 ದಿನಗಳ ನಂತರ ರಾಜ್ಯ ಪ್ರವಾಸ ನಡೆಸುತ್ತೇನೆ. ಪ್ರತೀ ವಿಧಾನಸಭಾ ಕ್ಷೇತ್ರಗಳ ಮುಖಂಡ ರೊಂದಿಗೆ ಚರ್ಚೆ ಮಾಡಿ, ಪಕ್ಷ ಸಂಘಟಿಸುತ್ತೇನೆ. ಯುವ ಮೋರ್ಚಾ, ಮಹಿಳಾ ಮೋರ್ಚಾಗಳನ್ನು ಮತ್ತಷ್ಟು ಶಕ್ತಿಯುತಗೊಳಿಸುವ ಪ್ರಯತ್ನ ಮಾಡುತ್ತೇನೆ. ನಿಮ್ಮೆಲ್ಲರ ಸಹಕಾರದಿಂದ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ 140 ಸ್ಥಾನಗಳಲ್ಲಿ ಗೆದ್ದು, ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ಇದರೊಂದಿಗೆ ಮಹಾತ್ಮ ಗಾಂಧಿ ಅವರ ಗ್ರಾಮ ರಾಜ್ಯ, ರಾಮ ರಾಜ್ಯ ಆಶಯವನ್ನು ಸಾಕಾರಗೊಳಿಸಲು ವಿಶೇಷ ಪ್ರಯತ್ನದಲ್ಲಿರುವ ಪ್ರಧಾನಿ ಮೋದಿ ಅವರ ಕೈ ಬಲಪಡಿಸುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೇಯರ್ ಸುನಂದ ಪಾಲನೇತ್ರ, ಸಂಸದ ಪ್ರತಾಪ್‍ಸಿಂಹ, ಶಾಸಕ ರಾದ ಎಲ್.ನಾಗೇಂದ್ರ, ಹರ್ಷವರ್ಧನ್, ಎನ್.ಮಹೇಶ್, ಮಾಜಿ ಸಚಿವ ಸಿ.ಹೆಚ್. ವಿಜಯಶಂಕರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮಾಜಿ ಎಂಎಲ್‍ಸಿ ಮಲ್ಲಿಕಾರ್ಜುನಪ್ಪ, ನಗರಾಧ್ಯಕ್ಷ ಶ್ರೀವತ್ಸ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಚುನಾವಣಾ ಅಭ್ಯರ್ಥಿ ರಘು ಕೌಟಿಲ್ಯ, ಕರ್ನಾಟಕ ವಸ್ತುಪ್ರದ ರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್‍ಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮತ್ತಿತರರ ಮುಖಂಡರು ಉಪಸ್ಥಿತರಿದ್ದರು.

Translate »