ಉಪ ಸಮರದಲ್ಲಿ ಸರ್ಕಾರದಿಂದ ಅಧಿಕಾರ ದುರುಪಯೋಗ
News

ಉಪ ಸಮರದಲ್ಲಿ ಸರ್ಕಾರದಿಂದ ಅಧಿಕಾರ ದುರುಪಯೋಗ

October 26, 2021

ಬೆಂಗಳೂರು, ಅ.25 (ಕೆಎಂಶಿ)- ರಾಜ್ಯ ಸರ್ಕಾರ ಉಪಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ಜನ ಗಮನಿಸುತ್ತಿದ್ದು ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸೇರಿದಂತೆ ಇಡೀ ಮಂತ್ರಿಮಂಡಲ ಉಪಚುನಾ ವಣೆಗಳಲ್ಲಿ ತೊಡಗಿಸಿಕೊಂಡಿದೆ. ಈಗಾಗಲೇ ವಿಧಾನಸೌಧಕ್ಕೆ ಬೀಗ ಹಾಕಲಾಗಿದೆ, ವಿಧಾನಸೌಧದಲ್ಲಿ ಒಬ್ಬ ಮಂತ್ರಿಯೂ ಇಲ್ಲ, ವಿಧಾನಸೌಧದ ಕಚೇರಿಗಳಿಗೆ ಹೋಗಿ ನೋಡಿ, ಮಂತ್ರಿಗಳು ಅಧಿಕಾರಿಗಳ ಜತೆ ಸಭೆ ನಡೆಸುತ್ತಿಲ್ಲ, ರಾಜ್ಯದ ಜನರ ಕಷ್ಟದ ಬಗ್ಗೆ ಚರ್ಚೆ ಇಲ್ಲ, ಅವರ ಬಗ್ಗೆ ಕಾಳಜಿ ಇಲ್ಲ. ಅವರಿಗೆ ಉಪಚುನಾವಣೆ ಮುಖ್ಯವಾಗಿದೆ ಎಂದರು.

ಬಿಜೆಪಿ ಈಗಾಗಲೇ ಗೆದ್ದಿದೆ ಎಂಬ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳೇ ಫಲಿತಾಂಶ ಹೇಳಿದ ಮೇಲೆ ಇನ್ನೇನು ಮಾಡಲು ಸಾಧ್ಯ. ಅಧಿಕಾರ ಇದೆಯೆಲ್ಲಾ ಅದಕ್ಕೆ ದೊಡ್ಡ ಮಾತುಗಳಾಡುತ್ತಿದ್ದಾರೆ, ನಾವು ಚಿಕ್ಕವರಾಗಿ ಅವರ ಮಾತು ಕೇಳಿಸಿಕೊಳ್ಳುತ್ತೇವೆ ಎಂದರು. ಮುಖ್ಯಮಂತ್ರಿಗಳು ಉಪಚುನಾವಣೆ ಸಂದರ್ಭದಲ್ಲಿ ಒಂದರಿಂದ ಎರಡು ಬಾರಿ ಪ್ರಚಾರ ಮಾಡೋದು ಸಾಮಾನ್ಯ. ಇವರು ಅಲ್ಲೇ ಕೂತಿದ್ದಾರೆ ಎಂದರೆ ಎಷ್ಟರ ಮಟ್ಟಿಗೆ ಅವರಿಗೆ ಭಯ ಉಂಟಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಅವರು ಕೊಟ್ಟಿರುವ ಪ್ರಣಾಳಿಕೆ ನೋಡಿದರೆ ಆಯುಷ್ಮಾನ್ ಭಾರತದಿಂದ ಸರ್ಟಿಫಿಕೇಟ್ ಕೊಡುತ್ತಾರಂತೆ, ಶೌಚಾಲಯ ಕಟ್ಟಿಸಿಕೊಡುತ್ತಾರಂತೆ. ನಿವೇಶನ ಹಂಚಿ, ಮನೆ ಹಂಚುತ್ತಾರಂತೆ ಎಂದು ವ್ಯಂಗ್ಯವಾಡಿದರು.

Translate »