ಬಿಡಿಎ ಬ್ರೋಕರ್‍ಗಳ ಮನೆ ಮೇಲೆ ಎಸಿಬಿ ದಾಳಿ
News

ಬಿಡಿಎ ಬ್ರೋಕರ್‍ಗಳ ಮನೆ ಮೇಲೆ ಎಸಿಬಿ ದಾಳಿ

March 23, 2022

ಬೆಂಗಳೂರು, ಮಾ.22- ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಮಂಗಳವಾರ ಬೆಳ್ಳಂ ಬೆಳಗ್ಗೆ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಒಂಭತ್ತು ಮಧ್ಯವರ್ತಿ(ಬ್ರೋಕರ್)ಗಳ ನಿವಾಸದ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಸೇರಿದಂತೆ ಅಪಾರ ಮೌಲ್ಯದ ಆಸ್ತಿ ದಾಖಲೆಗಳ ವಶಪಡಿಸಿಕೊಂಡಿದ್ದಾರೆ.

ಎಸಿಬಿ ಉಮಾ ಪ್ರಶಾಂತ್ ನೇತೃತ್ವದ 100 ಅಧಿಕಾರಿ ಗಳ ತಂಡ ಬಿಡಿಎ ಕಚೇರಿಗಳಲ್ಲಿ ಬ್ರೋಕರ್ ಕೆಲಸ ಮಾಡುತ್ತಿರುವ ಚಾಮರಾಜಪೇಟೆಯ ಬಿ.ಎನ್.ರಘು, ಆರ್.ಟಿ.ನಗರದ ಮನೋರಾಯನಪಾಳ್ಯದ ಮೋಹನ್, ದೊಮ್ಮಲೂರಿನ ಮನೋಜ್, ಮಾಲ್ತಳ್ಳಿಯ ಕೆನಗುಂಟೆ ಮುನಿರತ್ನ (ರತ್ನವೇಲು), ಆರ್.ಆರ್.ನಗರದ ತೇಜಸ್ವಿ, ಮುದ್ದಿನ ಪಾಳ್ಯದ ಕೆ.ಜಿ.ಸರ್ಕಲ್‍ನ ಅಶ್ವತ್, ಬಿಡಿಎ ಬಡಾವಣೆಯ ಚಾಮುಂಡೇಶ್ವರಿ ನಗರದ ರಾಮ, ಲಕ್ಷ್ಮಣ, ಮುದ್ದಿನ ಪಾಳ್ಯದ ಚಿಕ್ಕ ಹನುಮಯ್ಯ ಅವರುಗಳ ಮನೆಗಳ ಮೇಲೆ ದಾಳಿ ನಡೆಸಿ ಅಲ್ಲಿನ ವೈಭೋಗ ಕಂಡು ಬೆಚ್ಚಿ ಬಿದ್ದಿದ್ದಾರೆ.

ಬಿಡಿಎ ಭ್ರಷ್ಟಾಚಾರದ ಮೂಲವೇ ಈ ಮಧ್ಯವರ್ತಿ ಗಳು. ಬಿಡಿಎಗೆ ಬರುವ ಪ್ರತಿಯೊಬ್ಬ ಅಧಿಕಾರಿಯನ್ನು ಮಧ್ಯವರ್ತಿಗಳು ಸಂಪರ್ಕಿಸುತ್ತಿದ್ದರು. ನಿವೇಶನ ಹಂಚಿಕೆ, ಸರ್ಕಾರಿ ನಿವೇಶನ ಅಭಿವೃದ್ದಿ ಸೇರಿ ಬಿಡಿಎನ ಪ್ರತಿಯೊಂದು ಪ್ರಕ್ರಿಯೆಯಲ್ಲೂ ಮಧ್ಯವರ್ತಿಗಳ ಒಡನಾಟ ಪತ್ತೆ ಯಾಗಿದ್ದು, ಇದೆ ಹಿನ್ನೆಲೆಯಲ್ಲಿ ಬಿಡಿಎ ಮಧ್ಯವರ್ತಿಗಳ ಮೇಲೆ ಎಸಿಬಿ ದಾಳಿ ಮಾಡಿದೆ. ದೊಮ್ಮಲೂರಿನ ಬ್ರೋಕರ್ ಮನೋಜ್ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ. ಐಷಾರಾಮಿ ಸನ್ ಗ್ಲಾಸಸ್ ಹಾಗೂ ವಾಚ್‍ಗಳು ಪತ್ತೆಯಾಗಿವೆ. ದೇಶ ಹಾಗೂ ವಿದೇಶಗಳ ಪ್ರತಿಷ್ಟಿತ ಬ್ರಾಂಡ್‍ನ ಸನ್ ಗ್ಲಾಸಸ್ ಹಾಗೂ ಕೈ ಗಡಿಯಾರಗಳು ಎಲ್ಲಿಂದ ಬಂದವು? ಇವುಗಳ ಮೌಲ್ಯವೆಷ್ಟು? ಎಂಬ ಬಗ್ಗೆ ತನಿಖೆ ನಡೆದಿದೆ. ಜೊತೆಗೆ ಭಾರೀ ಪ್ರಮಾಣದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನಾಭರಣ ಗಳೂ ಸಹ ಎಸಿಬಿ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ.

ಮೋಹನ್ ವಿರುದ್ಧ ಭ್ರಷ್ಟಾಚಾರ, ಅವ್ಯವಹಾರದ ಆರೋಪದ ಹಿನ್ನೆಲೆ ಆರ್.ಟಿ.ನಗರದ ಮನೋರಾಯನಪಾಳ್ಯ ದಲ್ಲಿರುವ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಬರೋಬ್ಬರಿ 4.5 ಕೆಜಿ ಚಿನ್ನ ಪತ್ತೆಯಾಗಿದೆ. ಐಷಾರಾಮಿ ಮನೆಯಲ್ಲಿ ಎರಡೂವರೆ ಕೋಟಿ ಮೌಲ್ಯದ ಚಿನ್ನ ಪತ್ತೆಯಾಗಿದೆ. ಮೋಹನ್ ಅಧಿಕಾರಿಗಳ ಜತೆ ಶಾಮೀಲಾಗಿ ಅಕ್ರಮ ನಡೆಸಿರುವ ಆರೋಪ ಕೇಳಿಬಂದಿದೆ.

ಜೊತೆಗೆ ಮೋಹನ್ ಕುಮಾರ್ ಅವರ ಮನೆಯಲ್ಲಿ ಕಂತೆ ಕಂತೆ ಹಣವೂ ಪತ್ತೆಯಾಗಿದೆ. ಅಪಾರ ಪ್ರಮಾಣದ ಬೆಳ್ಳಿ ತಟ್ಟೆ, ಲೋಟ, ಬಟ್ಟಲು, ದೀಪ, ಚಿನ್ನದ ಸರ, ಚಿನ್ನದ ಓಲೆ, ಚಿನ್ನದ ಡಾಬು ಸಿಕ್ಕಿದೆ.

ಪೇಪರ್, ಹಾಲು ಹಾಕುತ್ತಿದ್ದ ಮೋಹನ್: ಮೋಹನ್ ಕುಮಾರ್ ದೊಡ್ಡಬಳ್ಳಾಪುರದ ಮಳವಳ್ಳಿಯ ಗ್ರಾಮದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಎಸ್‍ಎಸ್‍ಎಲ್‍ಸಿ ಓದಿರುವ ಇವರು ಮೊದಲಿಗೆ ಬೆಂಗಳೂರಿನಲ್ಲಿ ಮನೆ ಮನೆಗೆ ಪೇಪರ್, ಹಾಲು ಹಾಕುತ್ತಿದ್ದ. ಬಳಿಕ ಬಿಡಿಎ ಅಧಿಕಾರಿಯ ಒಬ್ಬರಿಗೆ ಚಾಲಕನಾಗಿ ಸೇರಿಕೊಂಡರು. ಅಲ್ಲಿಂದ ಬಿಡಿಎ ಜೊತೆಗೆ ನಂಟು ಶುರುವಾಗಿದೆ. ಇವರಿಗೆ ಎರಡು ಮದುವೆ ಆಗಿದೆ. ಈಗ ಇರುವ `ಖುಷಿ’ ಮನೆಯನ್ನು ಮೊದಲ ಹೆಂಡತಿ ಗಾಗಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಮೊದಲನೆಯ ಹೆಂಡತಿ ಜೊತೆ ಡಿವೋರ್ಸ್ ಆಗಿದ್ದು, ಎರಡನೇ ಹೆಂಡತಿ ಜೊತೆಗೆ ಜೀವನ ಮಾಡುತ್ತಿದ್ದಾರೆ. ಮನೆಯ ಪಕ್ಕದಲ್ಲಿ ಒಂದು ಸೈಟ್ ಕೂಡ ಇದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ದ್ವಿತೀಯ ಪಿಯುಸಿ ಮುಗಿಸಿ ಬಿಡಿಎ ಬ್ರೋಕರ್ ತೇಜಸ್ವಿ ಶುರು ಮಾಡಿದ್ದು ಜೆರಾಕ್ಸ್ ಅಂಗಡಿ. ಆದರೆ, ಈಗ ತೇಜಸ್ವಿ ಕೋಟಿ ಕೋಟಿ ಬೆಲೆಯ ಬಂಗಲೆ ಮಾಲೀಕ. ಆರ್ ಆರ್ ನಗರದ ತೇಜಸ್ವಿ ಬಂಗಲೆ ತಮಿಳುನಾಡಿನ ಮಾಜಿ ಮಂತ್ರಿಯದು. ತಮಿಳುನಾಡಿನ ಡಿಎಂಕೆಯ ಮಾಜಿ ಮಂತ್ರಿ ದಿವಂಗತ ವೀರಪಾಂಡಿಯನ್ ಆರುಮುಗಂ ಮಗಳಿಂದ 14 ಕೋಟಿ ರೂ.ಗೆ ಖರೀದಿಸಿದ್ದ ಬಂಗಲೆಯಾಗಿದೆ. ಇಷ್ಟೆಲ್ಲಾ ಆಸ್ತಿಯೂ ಬಿಡಿಎ ಬ್ರೋಕರ್ ಆದ ಮೇಲೆಯೇ ಸಂಪಾದನೆ ಮಾಡಲಾಗಿದೆ. ಇಂದು ಎಸಿಬಿ ನಡೆಸಿದ ದಾಳಿಯಲ್ಲಿ ಈ ಸಂಗತಿ ಬಟಾಬಯಲಾಗಿದೆ.

Translate »