ಕಾಡಾನೆ ಹಾವಳಿ ನಿಯಂತ್ರಣಕ್ಕೆ ಆಗ್ರಹ
ಕೊಡಗು

ಕಾಡಾನೆ ಹಾವಳಿ ನಿಯಂತ್ರಣಕ್ಕೆ ಆಗ್ರಹ

March 23, 2022

ಮಡಿಕೇರಿ, ಮಾ.22- ಜಿಲ್ಲೆಯಲ್ಲಿ ಕಾಡಾನೆಯ ಹಾವಳಿ ಹೆಚ್ಚಾಗುತ್ತಿದ್ದು, ಇವುಗಳ ನಿಯಂತ್ರಣಕ್ಕೆ ವಾರ್ಷಿಕವಾಗಿ ಸೂಕ್ತ ನಿರ್ವಹಣೆ ಮಾಡಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಆಗ್ರಹಿಸಿದರು.

ರಾಜ್ಯದಲ್ಲಿ ಕಾಡಾನೆ ಸೇರಿದಂತೆ ಇತರೆ ವನ್ಯ ಪ್ರಾಣಿ ಮಾನವ ಸಂಘರ್ಷ ಕುರಿತು ವಿಕಾಸ ಸೌಧದ ಸಭಾಂಗಣದಲ್ಲಿ ಮಂಗಳವಾರ ಅರಣ್ಯ ಸಚಿವ ಉಮೇಶ್ ಕತ್ತಿ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಬೀಳುವುದರಿಂದ ಆನೆ ಕಂದಕ ನಿರ್ವಹಣೆ ಕಷ್ಟ ಸಾಧ್ಯವಾಗಿದ್ದು, ವಾರ್ಷಿಕವಾಗಿ ಸೂಕ್ತ ನಿರ್ವಹಣೆ ಮಾಡಿದಲ್ಲಿ ಮಾತ್ರವೇ ಆನೆ ಹಾವಳಿ ನಿಯಂತ್ರಣ ಮಾಡುವುದಕ್ಕೆ ಸಾಧ್ಯವಾ ಗುತ್ತದೆ. ಸೋಲಾರ್ ಬೇಲಿ ವಿಫಲವಾ ಗಿದ್ದು, ರೈಲ್ವೇ ಬ್ಯಾರಿಕೇಡ್ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದು ಹೇಳಿದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಅರಣ್ಯದಲ್ಲಿ ಆನೆಗಳಿಗೆ ಆಹಾರದ ಕೊರತೆ ಕಾಡುತ್ತಿದೆ. ಇದಕ್ಕೆ ತೇಗದ ಮರಗಳ ಪ್ಲಾಂಟೇ ಷನ್ ಕಾರಣವಾಗಿದ್ದು, ತೇಗದ ಮರದಲ್ಲಿ ಗುಬ್ಬಚ್ಚಿಯೂ ಗೂಡು ಕಟ್ಟುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಮರಗಳನ್ನು ಕಡಿದು ಆನೆಗಳಿಗೆ ಆಹಾರವಾಗುವ ಗಿಡ ಮರ ಗಳನ್ನು ಬೆಳೆಯಲು ಕ್ರಮ ವಹಿಸಬೇಕು, ಅರಣ್ಯಗಳ ಒಳಗೆ ಕೃತಕ ಕೆರೆಗಳ ನಿರ್ಮಾಣ ವಾಗಬೇಕು ಎಂದು ಸಭೆಯ ಗಮನ ಸೆಳೆದರು.
ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಮಾತನಾಡಿ, ಸಕಲೇಶ ಪುರ ತಾಲೂಕಿನ 6 ಹಳ್ಳಿಗಳ ಗ್ರಾಮದಲ್ಲಿ ಕಾಡಾನೆ ಹಾಗೂ ವನ್ಯಜೀವಿ ಉಪಟಳ ದಿಂದ 2,400 ಎಕರೆ ಕೃಷಿ ಜಮೀನನ್ನು ಸರ್ಕಾರಕ್ಕೆ ನೀಡಲು ಮುಂದೆ ಬಂದಿದ್ದಾರೆ. ಇದಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಿದಲ್ಲಿ ಪುಷ್ಪಗಿರಿ- ಕುದುರೆಮುಖ ರಕ್ಷಿತಾರಣ್ಯವನ್ನು ಜೋಡಣೆ ಮಾಡಿದಂತಾ ಗುತ್ತದೆ. ಅಲ್ಲದೆ ಆನೆ ಕಾರಿಡಾರ್ ಯೋಜನೆ ಹಾಗೂ ಅರಣ್ಯವನ್ನು ವಿಸ್ತರಿಸಿದಂತಾಗುತ್ತದೆ ಎಂದು ಸಭೆಯ ಗಮನ ಸೆಳೆದರು. ರಾಜ್ಯ ದಲ್ಲಿ 230 ಹಾಡಿಗಳಿದ್ದು, ಹಾಡಿ ಜನತೆಗೆ ಮೂಲ ಸೌಕರ್ಯ ನೀಡಲು ಕಾನೂನಿನ ಚೌಕಟ್ಟಿನಡಿ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಕೊಡಗಿನಲ್ಲಿ ಅರಣ್ಯ ಸಚಿವರು ಸಭೆ ನಡೆಸುವಂತೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸಚಿವ ಉಮೇಶ್ ಕತ್ತಿ ಅವರನ್ನು ಆಗ್ರಹಿಸಿದರು. ಈ ಬಗ್ಗೆ ಶಾಶ್ವತ ಪರಿಹಾರಕ್ಕೆ ಅಧಿವೇಶನ ಮುಗಿದ ಕೂಡಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸುವುದಾಗಿ ಅರಣ್ಯ ಸಚಿವ ಉಮೇಶ್ ಕತ್ತಿ ಭರವಸೆ ನೀಡಿದರು.
ಸಭೆಯಲ್ಲಿ ಶಾಸಕರಾದ ಎ.ಟಿ.ರಾಮಸ್ವಾಮಿ, ಎಂ.ಇ.ಕುಮಾರಸ್ವಾಮಿ, ಹೆಚ್.ಕೆ.ಕುಮಾರ ಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಪ್ರಾಣೇಶ್, ಸರ್ಕಾರದ ಅಪರ ಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನ ವನ್ಯಜೀವಿ ಪರಿಪಾಲಕ ವಿಜಯ ಕುಮಾರ್ ಗೋಗಿ, ಕೊಡಗಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ, ವನ್ಯಜೀವಿ ವಿಭಾಗದ ಶಿವರಾಂ ಬಾಬು, ನಾಗರಹೊಳೆ ನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ಕೊಡಗು, ಹಾಸನ, ಚಿಕ್ಕಮಗಳೂರಿನ ಬೆಳೆಗಾರರ ಸಂಘದ ಪ್ರಮುಖರು ಹಾಜರಿದ್ದರು.

Translate »