ದೇವಸ್ಥಾನ, ಪ್ರವಾಸಿ ತಾಣಗಳಿಗೆ ಪ್ರವೇಶಾವಕಾಶ
ಮೈಸೂರು

ದೇವಸ್ಥಾನ, ಪ್ರವಾಸಿ ತಾಣಗಳಿಗೆ ಪ್ರವೇಶಾವಕಾಶ

January 23, 2022

ಮೈಸೂರು, ಜ.22(ಆರ್‍ಕೆ)-ಸರ್ಕಾರ ವಾರಾಂತ್ಯ ಕಫ್ರ್ಯೂ ನಿರ್ಬಂಧ ರದ್ದುಗೊಳಿಸಿರುವುದರಿಂದ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲಾ ದೇವಾಲಯ ಹಾಗೂ ಪ್ರವಾಸಿ ತಾಣಗಳಲ್ಲಿ ಇಂದಿನಿಂದ ಪ್ರವಾಸಿಗರು ಸೇರಿದಂತೆ ಸಾರ್ವ ಜನಿಕರಿಗೆ ಅವಕಾಶ ನೀಡಲಾಗಿದೆ.
ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂ ಡೇಶ್ವರಿ ದೇವಸ್ಥಾನದಲ್ಲಿ ಇಂದು ಬೆಳಗ್ಗೆಯಿಂದಲೇ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಆದರೆ ಎಲ್ಲಾ ಧಾರ್ಮಿಕ ಸೇವಾ ಕೈಂಕರ್ಯಗಳಿಲ್ಲ. ತೀರ್ಥ -ಪ್ರಸಾದ ವಿತರಣೆ ಮಾಡುವುದಿಲ್ಲ ಎಂದು ದೇವ ಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಸ್. ಯತಿರಾಜ್ ಸಂಪತ್‍ಕುಮಾರನ್ ತಿಳಿಸಿದ್ದಾರೆ.

ಎಂದಿನಂತೆ ಬೆಳಗ್ಗೆ 7.30ರಿಂದ ಮಧ್ಯಾಹ್ನ 2, ಮಧ್ಯಾಹ್ನ 3.30ರಿಂದ ಸಂಜೆ ಹಾಗೂ ರಾತ್ರಿ 7.30 ರಿಂದ 9 ಗಂಟೆವರೆಗೆ ದೇವಸ್ಥಾನ ತೆರೆಯಲಿದ್ದು, ಒಮ್ಮೆಗೆ 50 ಮಂದಿ ಭಕ್ತರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಭಕ್ತರು 2 ಡೋಸ್ ಲಸಿಕೆ ಪಡೆದಿರುವ ಬಗ್ಗೆ ದೃಢೀಕರಣ ಪತ್ರ ಪರಿಶೀಲಿ ಸುವ ಜೊತೆಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವು ದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.
ಅದೇ ರೀತಿ ಮೆಟ್ಟಿಲು ಮೂಲಕವೂ ಬೆಟ್ಟ ಹತ್ತಲು ಅವಕಾಶ ನೀಡಲಾಗಿದ್ದು, ವ್ಯೂ ಪಾಯಿಂಟ್‍ನಿಂದ ಪ್ರವಾಸಿ ಗರು ವೀಕ್ಷಿಸಬಹುದೇ ಹೊರತು, ಬೈನಾಕುಲರ್ ನಿಂದ ವೀಕ್ಷಿಸುವುದನ್ನು ನಿರ್ಬಂಧಿಸಲಾಗಿದೆ ಎಂದರು.

ಮೈಸೂರು ಅರಮನೆ ದೇವಸ್ಥಾನಗಳು, ಉತ್ತನಹಳ್ಳಿ, ನಂಜನಗೂಡು, ತಲಕಾಡು ಸೇರಿದಂತೆ ಜಿಲ್ಲೆಯ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿಯೂ ಇಂದಿನಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಕೋವಿಡ್ ಮಾರ್ಗ ಸೂಚಿಗಳನ್ನು ಪಾಲಿಸಲು ಸೂಚಿಸಲಾಗುತ್ತಿದೆ ಎಂದರು.

ಹೊರ ರಾಜ್ಯದ ಪ್ರವಾಸಿಗರಿಗೆ ಕೋವಿಡ್ ಟೆಸ್ಟ್ ಮಾಡಲಾಗುವುದು. ವಿದೇಶಿಗರಿಗೆ ಕಳೆದ 14 ದಿನಗಳ ಪ್ರವಾಸ ಮಾಹಿತಿ, ಮುಂದಿನ 11 ದಿನ ಎಲ್ಲೆಲ್ಲಿಗೆ ಹೋಗುತ್ತಾರೆ, ವಾಸ್ತವ್ಯ, ಲಸಿಕೆ ಪಡೆದಿರುವ ಮಾಹಿತಿ ಗಳನ್ನು ನಮೂನೆಯಲ್ಲಿ ಭರ್ತಿ ಮಾಡಿಸಿಕೊಂಡು ಅರಮನೆಗೆ ಪ್ರವೇಶ ಕಲ್ಪಿಸಲಾಗುವುದು ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಚಾಮರಾಜ ಮೃಗಾಲಯ, ಕಾರಂಜಿ ನಿಸರ್ಗ ಉದ್ಯಾನ, ಚರ್ಚ್, ಮಸೀದಿ ಸೇರಿದಂತೆ ಮೈಸೂರಿನ ಎಲ್ಲಾ ಪ್ರವಾಸಿ ತಾಣಗಳಲ್ಲೂ ಇಂದಿನಿಂದ ಶನಿವಾರ ಮತ್ತು ಭಾನುವಾರ ವೀಕ್ಷಣೆಗೆ ಪ್ರವೇಶಾವಕಾಶ ಕಲ್ಪಿಸ ಲಾಗಿದ್ದು, ಶನಿವಾರವಾದ ಇಂದು ಪ್ರವಾಸಿಗರು ಆಗಮಿಸುತ್ತಿರುವುದು ಕಂಡುಬಂದಿತು. ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿರುವ ರೈಲ್ವೇ ಮ್ಯೂಸಿಯಂ ವೀಕ್ಷಣೆಗೂ ವಾರಾಂತ್ಯದ ಎರಡು ದಿನಗಳಲ್ಲಿ ಪ್ರವಾಸಿ ಗರಿಗೆ ಅವಕಾಶ ಕಲ್ಪಿಸಲಾಗಿದೆ. ಮಂಗಳವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಮ್ಯೂಸಿಯಂ ತೆರೆದಿರುತ್ತದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಅದೇ ಮಾದರಿ ಯಲ್ಲಿ ಕೆಆರ್‍ಎಸ್, ಎಡಮುರಿ, ಬಲಮುರಿ, ರಂಗನ ತಿಟ್ಟು ಪಕ್ಷಿಧಾಮ, ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ಶ್ರೀ ನಿಮಿಷಾಂಬ ದೇವಸ್ಥಾನ, ದರಿಯಾ ದೌಲತ್, ಕೆರೆ ತೊಣ್ಣೂರು, ಮೇಲುಕೋಟೆ, ಕುಂತಿಬೆಟ್ಟ ಸೇರಿದಂತೆ ಮಂಡ್ಯ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲೂ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

Translate »