ಡ್ರೋಣ್ ಸರ್ವೆ ಮೂಲಕ ಭೂ ವ್ಯಾಜ್ಯಗಳಿಗೆ ತಿಲಾಂಜಲಿ ಜನರಿಗೆ ನಿಖರ ಭೂ ದಾಖಲೆ
News

ಡ್ರೋಣ್ ಸರ್ವೆ ಮೂಲಕ ಭೂ ವ್ಯಾಜ್ಯಗಳಿಗೆ ತಿಲಾಂಜಲಿ ಜನರಿಗೆ ನಿಖರ ಭೂ ದಾಖಲೆ

January 10, 2023

ಬೆಂಗಳೂರು, ಜ.9(ಕೆಎಂಶಿ)- ರಾಜ್ಯ ದಲ್ಲಿ ಭೂ ವ್ಯಾಜ್ಯಗಳಿಗೆ ತಿಲಾಂಜಲಿ ಹಾಕುವ ಹಾಗೂ ಭೂ ಮಾಲೀಕ ರಿಗೆ ಸಮರ್ಪಕ ದಾಖಲೆ ಒದಗಿಸುವ ಉದ್ದೇಶ ದಿಂದ ಡ್ರೋಣ್ ಕ್ಯಾಮೆರಾ ಮೂಲಕ ಸರ್ವೆ ನಡೆಸಿ ನಕ್ಷೆ ಸಿದ್ಧಪಡಿಸಲು ಸರ್ಕಾರ ಮುಂದಾಗಿದೆ.

ಇನ್ನೊಂದು ವರ್ಷದಲ್ಲಿ ಸರ್ವೆ ಅಂತಿಮ ಗೊಳಿಸಿ ಡಿಜಿಟಲ್ ವ್ಯವಸ್ಥೆ ಮೂಲಕ ಸಾರ್ವಜನಿಕರಿಗೆ ಭೂ ನಕ್ಷೆ ಒದಗಿಸಲಾ ಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಇಂದಿಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿಯ ಸರ್ವೆ ಕಾರ್ಯವು ಖಾಸಗಿ ಮತ್ತು ಸರ್ಕಾರಿ ಆಸ್ತಿಗಳೆರಡಕ್ಕೂ ಮಾಡಲಾಗುವುದು. ಆ ಮೂಲಕ ಮಾಲೀಕ ರಿಗೆ ಸುಲಭವಾಗಿ ನಕಾಶೆಗಳು ದೊರೆಯು ವಂತೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಮತ್ತು ಭೂ ವ್ಯಾಜ್ಯಗಳನ್ನು ಮುಕ್ತ ಗೊಳಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸು ಮಾಡಲು ಸರ್ಕಾರ ಈ ಕಾರ್ಯಕ್ಕೆ ಚಾಲನೆ ನೀಡಿದೆ.

ಈಗಾಗಲೇ ರಾಮನಗರ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಡ್ರೋಣ್ ಮೂಲಕ ಪ್ರಾಯೋಗಿಕ ಸರ್ವೆ ಕಾರ್ಯ ಆರಂಭ ಗೊಂಡಿದ್ದು, ಜಮೀನುಗಳ ನಕ್ಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇಡೀ ರಾಜ್ಯಾದ್ಯಂತ ಈ ರೀತಿಯ ಸರ್ವೇ ನಡೆಸಿ, ನಕ್ಷೆಗಳನ್ನು ಸಿದ್ಧಪಡಿಸಲು ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ ಸರ್ಕಾರ 258 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ.

ಪ್ರತಿ ಜಿಲ್ಲೆಗೂ ಪ್ರತ್ಯೇಕ ಟೆಂಡರ್ ಕರೆದು ಸರ್ವೇ ಮತ್ತು ನಕ್ಷೆ ಸಿದ್ಧಪಡಿಸಿ, ದಾಖಲೆ ಗಳನ್ನು ಕ್ರೋಢೀಕರಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶದಂತೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ರೈತರು ಮತ್ತು ಭೂ ಒಡೆಯರಿಗೆ ಸಮರ್ಪಕ ದಾಖಲೆ ಒದಗಿಸುವ ಉದ್ದೇಶದಿಂದ ಚಾಲನೆ ನೀಡಲಾಗಿದೆ. ಇದು ಇಡೀ ರಾಷ್ಟ್ರದಲ್ಲಿ ನಡೆಯುತ್ತಿದ್ದು, ರಾಜ್ಯದಲ್ಲೂ ಡ್ರೋಣ್ ಮೂಲಕ ಸರ್ವೆ ಕಾರ್ಯ ಆರಂಭಗೊಂಡಿದ್ದು, ಇನ್ನೊಂದು ವರ್ಷದಲ್ಲಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ಸರ್ವೇ ನಂತರ ರಾಜ್ಯಾದ್ಯಂತ ಇರುವ ಭೂಮಿಯ ಸಂಪೂರ್ಣ ವಿವರ ಡಿಜಿಟಲೀಕರಣಗೊಳ್ಳಲಿದ್ದು, ಆ ಮೂಲಕ ಭೂ ವಿವಾದಗಳು ತಾನಾಗಿಯೇ ಕಡಿಮೆಯಾಗಲಿವೆ ಎಂದು ಹೇಳಿದ್ದಾರೆ.

ಲಂಬಾಣಿ ತಾಂಡ ಕಂದಾಯ ಗ್ರಾಮ: ರಾಜ್ಯದ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಜನವರಿ 19 ರಂದು ಚಾಲನೆ ನೀಡಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅಶೋಕ್ ತಿಳಿಸಿದ್ದಾರೆ.

ಲಂಬಾಣಿ, ಗೊಲ್ಲರು, ಕುರುಬರು ಸೇರಿದಂತೆ ವಿವಿಧ ಸಮುದಾಯಕ್ಕೆ ಸೇರಿದ 2000ಕ್ಕೂ ಹೆಚ್ಚು ಹಟ್ಟಿ ಮತ್ತು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿ ವರ್ತಿಸಲಾಗುವುದು. ಸಮುದಾಯದವರಿಗೆ ಅವರು ವಾಸಿಸುವ ಭೂಮಿಯ ಹಕ್ಕುಪತ್ರ ನೀಡುವ ಮೊದಲ ಹಂತದ ಕಾರ್ಯ ಜನವರಿ 19ರಂದು ಕಲಬುರಗಿಯಲ್ಲಿ ನಡೆಯಲಿದೆ.

ಮೊದಲ ಹಂತದಲ್ಲಿ 51999 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುವುದು. ಹಕ್ಕುಪತ್ರ ನೀಡಿದ ನಂತರ ಸಮೀಪದ ನೋಂದಣಿ ಕಚೇರಿಯಲ್ಲಿ ಅವರ ಆಸ್ತಿಪಾಸ್ತಿಗಳು ದಾಖಲೆಗೊಳ್ಳಲಿವೆ.

ತದನಂತರ ಈ ದಾಖಲೆ ಆಧಾರದ ಮೇಲೆ ಅವರು, ಬ್ಯಾಂಕ್‍ನಿಂದ ಸಾಲ ಪಡೆದುಕೊಳ್ಳಲು ಸಹಕಾರಿಯಾಗಲಿದೆ. ಲಂಬಾಣಿ ತಾಂಡಗಳು, ಕುರುಬರ ಹಟ್ಟಿಗಳು ಸೇರಿದಂತೆ ರಾಜ್ಯದ ಲಕ್ಷಾಂತರ ಕುಟುಂಬಗಳು ಗುರುತು ಇಲ್ಲದಂತೆ ಬದುಕುತ್ತಿವೆ. ಈ ಹಿನ್ನೆಲೆಯಲ್ಲಿ ಅವರಿರುವ ಜಾಗವನ್ನು ಮೊದಲು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ, ತದ ನಂತರ ಅವರಿಗೆ ಹಕ್ಕುಪತ್ರ ನೀಡಲು ತೀರ್ಮಾನಿಸಲಾಯಿತು ಎಂದು ಅವರು ವಿವರಿಸಿದ್ದಾರೆ. ಮೊದಲ ಹಂತದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಹಕ್ಕುಪತ್ರ ನೀಡಲಾಗುವುದು. ಎರಡನೇ ಹಂತದಲ್ಲಿ ಪುನಃ ಐವತ್ತು ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುವುದು ಎಂದ ಅವರು, ಒಟ್ಟಿನಲ್ಲಿ ಮಾರ್ಚ್ ತಿಂಗಳ ಒಳಗೆ ಈ ಜನರಿಗೆ ಅವರು ವಾಸಿಸುವ ಜಾಗದ ಹಕ್ಕುಪತ್ರ ನೀಡಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ. ಕಲಬುರಗಿಯಲ್ಲಿ ನರೇಂದ್ರಮೋದಿ ಅವರ ಸಮ್ಮುಖದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಕುಟುಂಬಗಳ ಜನ ತಮ್ಮ ಸಾಂಪ್ರದಾಯಿಕ ಲಂಬಾಣಿ ಉಡುಪಿನಲ್ಲಿ ಭಾಗವಹಿಸಲಿ ದ್ದಾರೆ ಎಂದರು. ಲಂಬಾಣಿ ತಾಂಡಾಗಳು, ಕುರುಬರ ಹಟ್ಟಿಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾದ ನಂತರ ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ರಸ್ತೆ, ವಿದ್ಯುತ್, ಮೋರಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ನಡೆಯಲಿದೆ. ಇದೇ ರೀತಿ ರಾಜ್ಯ ಸರ್ಕಾರದ ವತಿಯಿಂದ ನಡೆಯುವ ವಿವಿಧ ಯೋಜನೆಗಳು ಜಾರಿಗೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.

Translate »