ಜನವರಿಯಲ್ಲೇ ರಾಜ್ಯದಲ್ಲಿ ಮೂರು ದಿನ ಪ್ರಧಾನಿ ಮೋದಿ ಪ್ರವಾಸ
News

ಜನವರಿಯಲ್ಲೇ ರಾಜ್ಯದಲ್ಲಿ ಮೂರು ದಿನ ಪ್ರಧಾನಿ ಮೋದಿ ಪ್ರವಾಸ

January 10, 2023

ಬೆಂಗಳೂರು, ಜ.9(ಕೆಎಂಶಿ)- ರಾಜ್ಯ ವಿಧಾನಸಭೆ ಚುನಾವಣೆ ಸಮೀಪ ವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ ತಿಂಗಳಲ್ಲಿ ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳು ತ್ತಿದ್ದಾರೆ. ಮೋದಿ ಅವರ ವರ್ಚಸ್ಸನ್ನೇ ನಂಬಿರುವ ರಾಜ್ಯ ಬಿಜೆಪಿ ನಾಯಕರು ಪ್ರಧಾನಿಯವರನ್ನು ಸರ್ಕಾರಿ ಕಾರ್ಯ ಕ್ರಮದ ನೆಪದಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ವ್ಯವಸ್ಥೆ ಮಾಡಿದ್ದಾರೆ.

ರಾಷ್ಟ್ರೀಯ ಯುವಜನ ಸಮಾವೇಶ ದಲ್ಲಿ ಪಾಲ್ಗೊಳ್ಳಲು ಜನವರಿ 12ರಂದು ಹುಬ್ಬಳ್ಳಿ-ಧಾರವಾಡಕ್ಕೆ ಆಗಮಿಸುವ ಪ್ರಧಾನಿಯವರು ಜನವರಿ 19 ರಂದು ಕಲಬುರಗಿಯಲ್ಲಿ ಲಂಬಾಣಿ ಸಮಾ ಜಕ್ಕೆ ಹಕ್ಕುಪತ್ರ ನೀಡುವ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದೇ ಬಾಗಲಕೋಟೆಯಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ನೀರಾವರಿ ಯೋಜನೆ ಗಳಿಗೆ ಸಂಬಂಧಿಸಿದಂತೆ ಚಾಲನೆ ನೀಡಲಿದ್ದಾರೆ.

ಜನವರಿ 27 ರಂದು ತುಮಕೂರಿನಲ್ಲಿ ಕ್ರೀಡಾಂಗಣ ಉದ್ಘಾಟನೆಗಾಗಿ ಮತ್ತೆ ರಾಜ್ಯಕ್ಕೆ ಬರಲಿದ್ದಾರೆ. ತಮ್ಮ ಎಲ್ಲಾ ಭೇಟಿಯ ಸಂದರ್ಭದಲ್ಲೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈಗಾಗಲೇ ನಾಲ್ಕೈದು ಬಾರಿ ರಾಜ್ಯ ಪ್ರವಾಸ ಕೈಗೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಗೆ ಚಾಲನೆ ನೀಡುವುದರ ಜೊತೆಗೆ ಡಬಲ್ ಇಂಜಿನ್ ಸರ್ಕಾರದಿಂದ ಯಾವ ರೀತಿ ಅಭಿವೃದ್ಧಿ ಸಾಧ್ಯ ಎಂದು ರಾಜ್ಯದ ಜನತೆಗೆ ಪದೇ ಪದೆ ಬಿಂಬಿಸಿ ಹೋಗಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಕೊರತೆ ಎದ್ದು ಕಾಣುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ವರಿಷ್ಠರು ಮುಂಬರುವ ವಿಧಾನಸಭಾ ಚುನಾವಣೆಗೆ ಮೋದಿ ವರ್ಚಸ್ಸಿನ ಮೂಲಕವೇ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಕಾರ್ಯಕ್ರಮ ರೂಪಿಸಿದೆ. ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಮೊದಲ ಭಾಗದ ವೇಳೆಗೆ ಪ್ರಧಾನಿಯವರು ಇನ್ನೂ ಏಳು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನಿ ಮೋದಿಯವರು ಜನವರಿ 12 ರ ಮಧ್ಯಾಹ್ನದಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಏಳು ದಿನಗಳ ಈ ಕಾರ್ಯಕ್ರಮದಲ್ಲಿ ದೇಶದ 28 ರಾಜ್ಯಗಳಿಂದ ಹಾಗೂ 8 ಕೇಂದ್ರೀಯ ಪ್ರಾಂತ್ಯದಿಂದ ಯುವಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಮತ್ತೆ ಜನವರಿ 19 ರಂದು ಪ್ರಧಾನಿ ಮೋದಿಯವರು ನಾರಾಯಣಪುರಕ್ಕೆ ಆಗಮಿಸಲಿದ್ದು, ಕೇಂದ್ರ ಹಾಗೂ ರಾಜ್ಯ ಅನುದಾನಿತ ನಾರಾಯಣಪುರ ಎಡದಂಡೆ ಕಾಲುವೆ (ಎನ್‍ಎಲ್‍ಬಿಸಿ) ಆಧುನೀಕರಣದ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕಲಬುರಗಿಯಲ್ಲಿ ಬಂಜಾರ ಸಮಾವೇಶ ನಡೆಸುವ ಯೋಜನೆಯಿದ್ದು, ಪ್ರಧಾನಿ ಮೋದಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ನಿಶ್ಚಯವಾಗಿಲ್ಲ ಎಂದು ತಿಳಿಸಿದರು.

Translate »