ಕೋಲಾರದಿಂದ ಸ್ಪರ್ಧೆ:ಸಿದ್ದರಾಮಯ್ಯ ಘೋಷಣೆ ಆದರೆ ಹೈಕಮಾಂಡ್ ಅನುಮೋದನೆ ಬೇಕು
News

ಕೋಲಾರದಿಂದ ಸ್ಪರ್ಧೆ:ಸಿದ್ದರಾಮಯ್ಯ ಘೋಷಣೆ ಆದರೆ ಹೈಕಮಾಂಡ್ ಅನುಮೋದನೆ ಬೇಕು

January 10, 2023

ಕೋಲಾರ, ಜ. 9-ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಲು ತಾವು ತೀರ್ಮಾನಿಸಿರುವುದಾಗಿ ಮಾಜಿ ಮುಖ್ಯಮಂತ್ರಿಗಳೂ ಆದ ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದರು.

ಕೋಲಾರದಲ್ಲಿ ಇಂದು ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾ ರಂಭದಲ್ಲಿ ಭಾರೀ ಕರಘೋಷದ ನಡುವೆ ತಾವು ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ ಸಿದ್ದರಾಮಯ್ಯ, ಆದರೆ ತಮ್ಮ ಸ್ಪರ್ಧೆಗೆ ಹೈಕಮಾಂಡ್ ಅನುಮೋದನೆ ಬೇಕಾಗುತ್ತದೆ ಹೇಳಿದರು. ನಾನೇ ಅಭ್ಯರ್ಥಿ ಎಂದು ನಾನೇ ಘೋಷಿಸಿಕೊಳ್ಳಲು ಸಾಧ್ಯ ವಿಲ್ಲ. ಪಕ್ಷದಲ್ಲಿ ಒಂದು ನಿಯಮವಿದೆ. ಆ ನಿಯಮದಂತೆಯೇ ಅಭ್ಯರ್ಥಿ ಘೋಷಣೆ ಆಗಬೇಕು. ನನಗಾಗಿ ನಿಯಮದಲ್ಲಿ ಯಾವುದೇ ಸಡಿಲಿಕೆ ಇಲ್ಲ. ಹೀಗಾಗಿ ಕೋಲಾರದಲ್ಲಿ ಸ್ಪರ್ಧಿಸಲು ನಾನು ನಿರ್ಧಾರ ಮಾಡಿದ್ದರೂ ಅದನ್ನು ಹೈಕಮಾಂಡ್ ಅನುಮೋದಿಸಬೇಕಾ ಗಿದೆ ಎಂದರು. ಹೈಕಮಾಂಡ್ ಅನುಮೋದನೆ ನೀಡಿ, ನಿಮ್ಮ ಆಶೀರ್ವಾದದಿಂದ ನಾನು ಇಲ್ಲಿನ ಶಾಸಕನಾದರೆ ಪ್ರತೀ ವಾರ ಕೋಲಾರಕ್ಕೆ ಬರುತ್ತೇನೆ. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಯಾವುದೇ ನಾಯಕರ ಜೊತೆ ಬರುವ ಅವಶ್ಯಕತೆ ಇಲ್ಲ. ಚಡ್ಡಿ ಹಾಕಿರುವ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯೂ ಕೂಡ ನನ್ನನ್ನು ನೇರವಾಗಿ ಭೇಟಿ ಮಾಡಬಹುದಾಗಿದೆ. ಇದು ಈ ಹಿಂದಿನಿಂದಲೂ ನಾನು ಅನುಸರಿಸಿಕೊಂಡು ಬಂದಿರುವ ಸಂಪ್ರದಾಯ ಎಂದರಲ್ಲದೇ, ತಾನು ಶಾಸಕನಾದರೆ ಕೋಲಾರ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಅಭಿವೃದ್ಧಿಪಡಿಸುತ್ತೇನೆ ಎಂದು ಭರವಸೆ ನೀಡಿದರು. ನನಗೆ ಸ್ಪರ್ಧಿಸಲು ಕ್ಷೇತ್ರವೇ ಇಲ್ಲ. ಅದಕ್ಕಾಗಿ ಕ್ಷೇತ್ರ ಹುಡುಕುತ್ತಿದ್ದೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಐದು ಬಾರಿ, ವರುಣಾದಿಂದ ಎರಡು ಬಾರಿ ಶಾಸಕನಾಗಿದ್ದು, ಕಳೆದ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸ್ಪರ್ಧಿಸಿ ಗೆದ್ದು, ಹಾಲಿ ಬಾದಾಮಿ ಶಾಸಕನಾಗಿದ್ದೇನೆ. ವರುಣಾ ಕ್ಷೇತ್ರದ ಜನರೂ ಕೂಡ ಅಲ್ಲೇ ಸ್ಪರ್ಧಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಬಾದಾಮಿ ದೂರವಾಗುತ್ತದೆ ಎಂಬ ಕಾರಣಕ್ಕೆ ನಾನು ಅಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದರೆ ಅಲ್ಲಿನ ಜನರು ಹೆಲಿಕಾಪ್ಟರ್ ಕೊಡಿಸುತ್ತೇವೆ, ಇಲ್ಲೇ ಸ್ಪರ್ಧಿಸಿ ಎಂದು ಒತ್ತಾಯಿಸುತ್ತಿದ್ದಾರೆ ಎಂದ ಸಿದ್ದರಾಮಯ್ಯ, ಕಳೆದ ಬಾರಿ ನಾನು ಕೋಲಾರಕ್ಕೆ ಬಂದಾಗ ದೇವಸ್ಥಾನ, ಮಸೀದಿ ಹಾಗೂ ಚರ್ಚ್‍ಗಳಿಗೆ ಭೇಟಿ ನೀಡಿ ಅಲ್ಲಿನ ಗುರುಗಳ ಜೊತೆ ಮಾತನಾಡಿದ್ದೇನೆ. ಕೆಲವು ಗ್ರಾಮಗಳಿಗೂ ಭೇಟಿ ನೀಡಿದ್ದೇನೆ. ಆಗ ಎಲ್ಲರೂ ಇಲ್ಲೇ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದ್ದಾರೆ ಎಂದರು.

ಕೋಲಾರದ ಹಾಲಿ ಶಾಸಕ ಶ್ರೀನಿವಾಸಗೌಡ ಕೂಡ ಇಲ್ಲೇ ಸ್ಪರ್ಧಿಸುವಂತೆ ಹೇಳುತ್ತಿದ್ದಾರೆ. ಏಳು ಬಾರಿ ಸಂಸದರಾಗಿದ್ದು, ಕೇಂದ್ರ ಸಚಿವರೂ ಆಗಿದ್ದ ಕೆ.ಹೆಚ್. ಮುನಿಯಪ್ಪ, ರಾಜಕಾರಣದಲ್ಲಿ ನನಗಿಂತಲೂ ಹಿರಿಯರಾದ ರಮೇಶ್‍ಕುಮಾರ್ ಸೇರಿದಂತೆ ಕೋಲಾರ ಜಿಲ್ಲೆಯ ಅನೇಕ ಮುಖಂಡರು ಹಾಗೂ ಇಲ್ಲಿ ನೆರೆದಿರುವ ನೀವೆಲ್ಲರೂ ನನ್ನನ್ನು ಇಲ್ಲೇ ಸ್ಪರ್ಧಿಸಬೇಕು ಎಂದು ಒತ್ತಾಯಿಸುತ್ತಿದ್ದೀರಿ. ನಿಮ್ಮ ಪ್ರೀತಿ ಹಾಗೂ ಅಭಿಮಾನವನ್ನು ತಿರಸ್ಕರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೋಲಾರದಲ್ಲೇ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದು ಸಿದ್ದರಾಮಯ್ಯ ಘೋಷಿಸಿದಾಗ ಕರಘೋಷ ಮುಗಿಲು ಮುಟ್ಟಿತ್ತು. ಕರಘೋಷ ನಿಲ್ಲುವವರೆಗೂ ತಮ್ಮ ಭಾಷಣವನ್ನು ನಿಲ್ಲಿಸಿದ್ದ ಸಿದ್ದರಾಮಯ್ಯ ಅವರು, ನಂತರ ಆದರೆ ನನ್ನ ಸ್ಪರ್ಧೆಗೆ ಹೈಕಮಾಂಡ್‍ನ ಅನುಮೋದನೆ ಬೇಕು ಎಂದು ಹೇಳಿದರು. ಸಮಾರಂಭದಲ್ಲಿ ಮಾತನಾಡಿದ ಎಲ್ಲಾ ಮುಖಂಡರೂ ಕೋಲಾರದಲ್ಲೇ ಸ್ಪರ್ಧಿಸಬೇಕೆಂದು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

Translate »