ನಟ ದರ್ಶನ್ ಆಸ್ತಿ ದಾಖಲೆ ಫೋರ್ಜರಿ  ಮಹಿಳೆಯಿಂದ ಉದ್ಯಮಿಗೆ ಬ್ಲಾಕ್‍ಮೇಲ್
ಮೈಸೂರು

ನಟ ದರ್ಶನ್ ಆಸ್ತಿ ದಾಖಲೆ ಫೋರ್ಜರಿ ಮಹಿಳೆಯಿಂದ ಉದ್ಯಮಿಗೆ ಬ್ಲಾಕ್‍ಮೇಲ್

July 12, 2021

ಮೈಸೂರು,ಜು.11-ನಟ ದರ್ಶನ್ ಆಸ್ತಿ ದಾಖಲೆ ಗಳನ್ನು ಫೋರ್ಜರಿ ಮಾಡಿ, ಅವರ ಸ್ನೇಹಿತರಾಗಿ ರುವ ಉದ್ಯಮಿಯನ್ನು ಬ್ಲಾಕ್‍ಮೇಲ್ ಮಾಡಿರುವ ಬಗ್ಗೆ ಮಹಿಳೆ ಸೇರಿದಂತೆ ಮೂವರ ವಿರುದ್ಧ ಮೈಸೂ ರಿನ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಮಹಿಳೆಯೊಬ್ಬರು ತನ್ನನ್ನು ಕೆನರಾ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಫೋರ್ಜರಿ ಮಾಡಿರುವ ದರ್ಶನ್ ಆಸ್ತಿ ದಾಖಲೆಗಳನ್ನು ತೋರಿಸಿ
ಅವರ ಸ್ನೇಹಿತನಾಗಿರುವ ಉದ್ಯಮಿಯನ್ನು ಬ್ಲಾಕ್‍ಮೇಲ್ ಮಾಡಿದ್ದಾರೆ. ಈ ಸಂಬಂಧ ಜುಲೈ 3ರಂದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಾನುವಾರ ನಟ ದರ್ಶನ್, ಅವರ ಸ್ನೇಹಿತರಾಗಿರುವ ನಿರ್ಮಾಪಕ ಉಮಾಪತಿ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.

ಈ ಪ್ರಕರಣದಲ್ಲಿ ಬೆಂಗಳೂರಿನ ಮಹಿಳೆ ಅರುಣಾಕುಮಾರಿ, ಮಧುಕೇಶವ ಮತ್ತು ನಂದೀಶ ಎಂಬುವರ ವಿರುದ್ಧ ದರ್ಶನ್ ಸ್ನೇಹಿತ ಹರ್ಷ ಮೆಲಂತ ಎಂಬುವರು ದೂರು ಸಲ್ಲಿಸಿದ್ದಾರೆ.

ವಿವರ: ದರ್ಶನ್ ಅವರ ಸ್ನೇಹಿತ ಹರ್ಷ ಅವರು ಮೈಸೂರಿನ ಹೆಬ್ಬಾಳ್‍ದಲ್ಲಿ `ಮೈಸೂರು ಯೂನಿಯನ್’ ಕ್ಲಬ್ ನಡೆಸುತ್ತಿದ್ದು, ಅವರಿಗೆ ಜುಲೈ 16ರಂದು ಚಿತ್ರ ನಿರ್ಮಾಪಕ ಉಮಾಪತಿ ಅವರು ಕರೆ ಮಾಡಿ ಬೆಂಗಳೂರಿನ ಸೌತ್ ಎಂಡ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‍ನಲ್ಲಿ 25 ಕೋಟಿ ರೂ. ಸಾಲಕ್ಕೆ ಅರ್ಜಿ ಸಲ್ಲಿಸಿ ಭದ್ರತೆಗಾಗಿ ನಟ ದರ್ಶನ್ ಅವರ ಆಸ್ತಿ ಪತ್ರಗಳನ್ನು ನೀಡಿದ್ದೀರಾ? ಎಂದು ಪ್ರಶ್ನಿಸಿದರಲ್ಲದೆ, ಬ್ಯಾಂಕ್ ಮ್ಯಾನೇಜರ್ ಅರುಣಾಕುಮಾರಿ ಎಂಬುವರು ಈ ವಿಷಯ ತಮಗೆ ತಿಳಿಸಿದ್ದಾರೆ ಎಂದು ಹೇಳಿ ಅರುಣಾಕುಮಾರಿ ಅವರ ಮೊಬೈಲ್ ನಂಬರ್ ಅನ್ನು ಕೊಟ್ಟಿದ್ದಾರೆ.
ಇದರಿಂದ ಶಾಕ್‍ಗೆ ಒಳಗಾದ ಹರ್ಷ ಅವರು, ಅರುಣಾ ಕುಮಾರಿ ಮೊಬೈಲ್‍ಗೆ ಕರೆ ಮಾಡಿದಾಗ `ನೀವು 25 ಕೋಟಿ ರೂ. ಸಾಲಕ್ಕಾಗಿ ಅರ್ಜಿ ಸಲ್ಲಿಸಿ, ದರ್ಶನ್ ಅವರ ಆಸ್ತಿ ಪತ್ರ ನೀಡಿರುವುದು ನಿಜ. ತಾನು ಆಸ್ತಿ ಸ್ಥಳ ಪರಿಶೀಲನೆಗಾಗಿ ಮೈಸೂರಿಗೆ ಬರುತ್ತಿದ್ದು, ಹೆಬ್ಬಾಳ್ ರಿಂಗ್ ರಸ್ತೆಯಲ್ಲಿ ತಮ್ಮನ್ನು ಭೇಟಿ ಮಾಡಿ’ ಎಂದು ಅರುಣಾಕುಮಾರಿ ತಿಳಿಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಲಾಗಿದೆ.

ಮೈಸೂರಿನಲ್ಲಿ ಅರುಣಾಕುಮಾರಿ ಅವರನ್ನು ದರ್ಶನ ಸ್ನೇಹಿತ ಹರ್ಷ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯ ರಾಕೇಶ್ ಪಾಪಣ್ಣ ಭೇಟಿ ಮಾಡಿದಾಗ ಆಕೆ ಬ್ಯಾಂಕ್‍ಗೆ ಸಲ್ಲಿಸಲಾಗಿದೆ ಎಂಬ ಸಾಲದ ಅರ್ಜಿ ಮತ್ತು ದರ್ಶನ್ ಅವರ ಆಸ್ತಿ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಇವರಿಗೆ ತೋರಿಸಿದ್ದಾರೆ. ತಾನು ಸಾಲಕ್ಕಾಗಿ ಅರ್ಜಿಯೇ ಸಲ್ಲಿಸಿಲ್ಲ. ದರ್ಶನ್ ಅವರ ಆಸ್ತಿ ದಾಖಲೆಯನ್ನೂ ಕೊಟ್ಟಿಲ್ಲ ಎಂದು ಹರ್ಷ ಹೇಳಿದರಾದರೂ, `ನೀವು ದರ್ಶನ್ ಆಸ್ತಿ ಪತ್ರಗಳನ್ನು ಪೋರ್ಜರಿ ಮಾಡಿ ಬ್ಯಾಂಕ್‍ನಲ್ಲಿ ಸಾಲ ಪಡೆಯಲು ಪ್ರಯತ್ನಿಸುತ್ತಿದ್ದೀರಿ ಎಂದು ಪೊಲೀಸ್‍ಗೆ ದೂರು ನೀಡುತ್ತೇನೆ. ಮಾಧ್ಯಮಗಳಿಗೂ ವಿಷಯ ತಿಳಿಸಿ ನಿಮ್ಮ ಘನತೆಗೆ ಕುಂದುಂಟು ಮಾಡಿ ನಿಮ್ಮನ್ನು ಜೈಲಿಗೆ ಹಾಕಿಸುತ್ತೇನೆ ಎಂದು ಹೆದರಿಸಿದ ಅರುಣಾಕುಮಾರಿ, ನೀವು ಇದರಿಂದ ತಪ್ಪಿಸಿಕೊಳ್ಳ ಬೇಕಾದರೆ 25 ಲಕ್ಷ ರೂ. ನೀಡಬೇಕು’ ಎಂದು ಬ್ಲಾಕ್‍ಮೇಲ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಧುಕೇಶವ ಮತ್ತು ನಂದೀಶ್ ಅರುಣಾಕುಮಾರಿ ಜೊತೆಗಿದ್ದರು.

ಸಾಲದ ಅರ್ಜಿಯಲ್ಲಿರುವುದು ನನ್ನ ಸಹಿಯೇ ಅಲ್ಲ. ನನಗೆ ಮೂಲ ದಾಖಲಾತಿಗಳನ್ನು ತೋರಿಸಿ ಎಂದು ಹರ್ಷ ತಾಕೀತು ಮಾಡಿದಾಗ ಬ್ಯಾಂಕ್‍ಗೆ ಬರುವಂತೆಯೂ, ಬರುವಾಗ 25 ಲಕ್ಷ ರೂ. ತರುವಂತೆಯೂ ತಿಳಿಸಿ ಅರುಣಾಕುಮಾರಿ ಹೊರಟಿದ್ದಾರೆ.

ಹರ್ಷ ಅವರು ಜುಲೈ 17ರಂದು ಬೆಂಗಳೂರಿನ ಸೌತ್ ಎಂಡ್ ಸರ್ಕಲ್‍ನಲ್ಲಿರುವ ಕೆನರಾ ಬ್ಯಾಂಕಿಗೆ ತೆರಳಿದಾಗ ಅಲ್ಲಿನ ಮ್ಯಾನೇ ಜರ್ ಶಿವಾನಿ ಎಂಬುವರು ಅರುಣಾಕುಮಾರಿ ಎಂಬ ಹೆಸರಿ ನವರು ಯಾರೂ ತಮ್ಮ ಬ್ಯಾಂಕಿನಲ್ಲಿ ಇಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ಮತ್ತೆ ಜುಲೈ 19ರಂದು ಹರ್ಷ ಅವರಿಗೆ ಕರೆ ಮಾಡಿದ ಅರುಣಕುಮಾರಿ 25 ಲಕ್ಷ ನೀಡದಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಬ್ಲಾಕ್‍ಮೇಲ್ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಹರ್ಷ ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಪೊಲೀಸರು ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಅವರನ್ನು ಕರೆದ ಹಿನ್ನೆಲೆಯಲ್ಲಿ ಅವರಿಬ್ಬರೂ ಇಂದು ಮೈಸೂರು ಎನ್.ಆರ್.ವಿಭಾಗದ ಎಸಿಪಿ ಕಚೇರಿಗೆ ವಿಚಾರಣೆಗಾಗಿ ಆಗಮಿಸಿದ್ದರು. ಈ ವೇಳೆ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ ಅವರು ದರ್ಶನ್ ಮತ್ತು ಉಮಾಪತಿ ಅವರಿಂದ ಹೇಳಿಕೆ ಪಡೆದಿದ್ದಾರೆ.

Translate »