ಮತದಾರರ ಅಭಿಪ್ರಾಯ ಸಂಗ್ರಹಿಸಿ ಜಿಪಂ, ತಾಪಂ ಚುನಾವಣೆಯಲ್ಲೂ ಬೆಂಬಲಿಗರನ್ನು ಪಕ್ಷೇತರರಾಗಿ ಕಣಕ್ಕಿಳಿಸಲು ಚಿಂತನೆ: ಜಿಟಿಡಿ ಘೋಷಣೆ
ಮೈಸೂರು

ಮತದಾರರ ಅಭಿಪ್ರಾಯ ಸಂಗ್ರಹಿಸಿ ಜಿಪಂ, ತಾಪಂ ಚುನಾವಣೆಯಲ್ಲೂ ಬೆಂಬಲಿಗರನ್ನು ಪಕ್ಷೇತರರಾಗಿ ಕಣಕ್ಕಿಳಿಸಲು ಚಿಂತನೆ: ಜಿಟಿಡಿ ಘೋಷಣೆ

July 12, 2021

ಮೈಸೂರು, ಜು.11(ಆರ್‍ಕೆಬಿ)-ಮತ ದಾರರ ಅಭಿಪ್ರಾಯ ಸಂಗ್ರಹಿಸಿ ಮುಂಬರುವ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾ ಯಿತಿ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಪಕ್ಷೇತರರಾಗಿ ಕಣಕ್ಕಿಳಿ ಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೆ ಇನ್ನೂ 2 ವರ್ಷವಿದೆ. ಅದರ ನಡುವೆ ಡಿಸೆಂಬರ್ ತಿಂಗಳಿನಲ್ಲಿ ಜಿಪಂ ಮತ್ತು ತಾಪಂ ಚುನಾ ವಣೆ ನಡೆಯುವ ಸಾಧ್ಯತೆ ಇದೆ. ವಿಧಾನ ಸಭಾ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಕಷ್ಟು ಸಮಯಾವಕಾಶ ವಿರುವುದರಿಂದ ಸದ್ಯದಲ್ಲೇ ಬರಲಿರುವ ಜಿಪಂ, ತಾಪಂ ಚುನಾವಣೆಯಲ್ಲಿ ಬೆಂಬ ಲಿಗರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

ಕಳೆದ 2 ವರ್ಷಗಳಿಂದ ತಾವು ಜೆಡಿಎಸ್ ಶಾಸಕರಾಗಿದ್ದರೂ, ಪಕ್ಷದ ಯಾವುದೇ ಕಾರ್ಯ ಕ್ರಮದಲ್ಲಿ ಭಾಗವಹಿಸಿಲ್ಲ. ಅದೇ ರೀತಿ ಬೇರೆ ಪಕ್ಷಗಳ ಜೊತೆಯಲ್ಲೂ ಗುರುತಿಸಿ ಕೊಂಡಿಲ್ಲ. ಈ ನಡುವೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮನ್ನು ದೂರ ವಾಣಿ ಮೂಲಕ ಸಂಪರ್ಕಿಸಿ, ನಿನ್ನನ್ನು (ಜಿ.ಟಿ.ದೇವೇಗೌಡ) ಮತ್ತು ಸಿ.ಎಸ್.ಪುಟ್ಟ ರಾಜುವನ್ನು ಪಕ್ಷದಲ್ಲೇ ಉಳಿಸಿಕೊಳ್ಳುತ್ತೇನೆ. ಪಕ್ಷವನ್ನು ಸದೃಢವಾಗಿ ಕಟ್ಟಿ, ಬೆಳೆಸಿ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತಂದು ನಿವೃತ್ತಿಯಾಗುತ್ತೇನೆ ಎಂದು ಹೇಳಿದ್ದಾರೆ ಎಂದರು. ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದು, ಮುಂದೆ ಜೆಡಿಎಸ್‍ನಲ್ಲೇ ಉಳಿಯಬೇಕೇ? ಅಥವಾ ಕಾಂಗ್ರೆಸ್ ಇಲ್ಲವೇ ಬಿಜೆಪಿಗೆ ಸೇರಬೇಕೇ? ಎಂಬುದರ ಬಗ್ಗೆ ಮತದಾರರ ಅಭಿಪ್ರಾಯ ಸಂಗ್ರಹಿಸಿ ಅವರಿಂದ ಬರುವ ಸಲಹೆ-ಸೂಚನೆಗಳನ್ನಾಧರಿಸಿ ನಿರ್ಧಾರ ಕೈಗೊಳ್ಳುವುದಾಗಿ ಜಿ.ಟಿ.ದೇವೇಗೌಡ ಹೇಳಿದರು. ಈ ಹಿಂದೆ ತಾವು ಮತದಾರರ ಅಭಿಪ್ರಾಯವನ್ನು ಪಡೆಯದೇ ಯಡಿಯೂರಪ್ಪನವರ ಒತ್ತಡಕ್ಕೆ ಮಣಿದು ಬಿಜೆಪಿ ಸೇರಿದ್ದರಿಂದ ಹುಣಸೂರಿನಲ್ಲಿ ಮತದಾರರು ನನ್ನನ್ನು ಸೋಲಿಸಿದ್ದರು. ಆಗ ನಾನು ಯಡಿಯೂರಪ್ಪನವರ ಮನೆಗೆ ಹೋಗಿದ್ದಾಗ ಅವರು ನನ್ನನ್ನು ಬಿಜೆಪಿಗೆ ಸೇರಲೇಬೇಕೆಂದು ಒತ್ತಡ ಹೇರಿ, ಆಗಲೇ ನಾನು ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿಸಿಬಿಟ್ಟರು. ಇದರಿಂದಾಗಿ ಜನಾಭಿಪ್ರಾಯ ಸಂಗ್ರಹ ಸಾಧ್ಯವಾಗಿರಲಿಲ್ಲ. ಅದರ ಪರಿಣಾಮವೇ ನನಗೆ ಸೋಲುಂಟಾಗಿತ್ತು ಎಂದು ಗೌಡರು ವಿಶ್ಲೇಷಿಸಿದರು.

ಮತದಾರರು ನನ್ನ ಮತ್ತು ನನ್ನ ಮಗ ಹರೀಶ್‍ಗೌಡ ಮೇಲೆ ಅಪಾರ ಪ್ರೀತಿ-ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನನ್ನನ್ನು ಭೇಟಿ ಮಾಡಿರುವ ಅಸಂಖ್ಯಾತ ಮತದಾರರು ಮತ್ತು ಮುಖಂಡರು `ನಮಗೆ ಯಾವುದೇ ಪಕ್ಷ ಲೆಕ್ಕಕ್ಕಿಲ್ಲ. ಜಿ.ಟಿ.ದೇವೇ ಗೌಡರು ಬೇಕು’ ಎಂದು ಹೇಳುವ ಮೂಲಕ ನಾನು ಹಾಗೂ ನನ್ನ ಮಗ ಪಕ್ಷೇತರರಾಗಿ ನಿಂತರೂ ಗೆಲ್ಲುವಂತಹ ಧೈರ್ಯವನ್ನು ತುಂಬಿದ್ದಾರೆ. ಆದರೂ ಜನಾಭಿಪ್ರಾಯ ಸಂಗ್ರಹ ಅತ್ಯಾವಶ್ಯಕ ಎಂದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾವು ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ಧಿಸಲಿದ್ದು, ಪುತ್ರ ಹರೀಶ್‍ಗೌಡ ಮೈಸೂರಿನ ಚಾಮ ರಾಜ, ಹುಣಸೂರು ಅಥವಾ ಕೆ.ಆರ್.ನಗರ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಗೆಲ್ಲುವ ವಿಶ್ವಾಸ ವಿದೆ. ಹೀಗಾಗಿ ಸನ್ನಿವೇಶ ನೋಡಿಕೊಂಡು ಯಾವುದಾದರೂ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೇ? ಅಥವಾ ಪಕ್ಷೇತರರಾಗಿ ಸ್ಪರ್ಧಿಸಬೇಕೇ? ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಜಿ.ಟಿ.ದೇವೇಗೌಡ ಹೇಳಿದರು.

Translate »