ನಟಿ ತನ್ವಿ ರಾವ್ ಕಿರುತೆರೆಗೆ ಎಂಟ್ರಿ
ಸಿನಿಮಾ

ನಟಿ ತನ್ವಿ ರಾವ್ ಕಿರುತೆರೆಗೆ ಎಂಟ್ರಿ

August 30, 2020

ಜೂಹಿ ಚಾವ್ಲಾ, ಮಾಧುರಿ ದೀಕ್ಷಿತ್ ಅಭಿನಯದ ಬಾಲಿವುಡ್‍ನ ಗುಲಾಬಿ ಗ್ಯಾಂಗ್, ಕನ್ನಡದ ರಂಗ್‍ಬಿರಂಗಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡದ ಪ್ರತಿಭಾವಂತ ನಟಿಯಾಗಿ ಗುರ್ತಿಸಿಕೊಂಡಿರುವ ಕಲಾವಿದೆ ತನ್ವಿ ರಾವ್ ಈಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಆಕೃತಿ ಎಂಬ ಹಾರರ್ ಸೀರಿಯಲ್‍ನಲ್ಲಿ ಅವರು ನಾಯಕಿಯಾಗಿ ನಟಿಸಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯಲ್ಲಿ ದಿವ್ಯ ಹೆಸರಿನ ನಾಯಕಿಯ ಪಾತ್ರದಲ್ಲಿ ತನ್ವಿರಾವ್ ಕಾಣಿಸಿಕೊಂಡಿದ್ದಾರೆ. ಇಡೀ ಕಥೆಯನ್ನು ಈಕೆಯ ಪಾತ್ರದ ಸುತ್ತ ಹೆಣೆಯಲಾಗಿದೆ. ನಾಯಕಿ ದಿವ್ಯಾಳ ಕುಟುಂಬ ಸಕಲೇಶಪುರದ ಪುರಾತನ ಬಂಗಲೆಯೊಂದನ್ನು ಖರೀದಿಸಿ, ಅಲ್ಲಿಗೆ ಬಂದು ವಾಸಿಸುತ್ತದೆ. ಆ ಮನೆಯ ಮುಂದಿರುವ ಮರದಲ್ಲಿದ್ದ ಒಂದು ಆಕೃತಿಯ ಕಾರಣದಿಂದ ಆ ಕುಟುಂಬಕ್ಕೆ ಚಿತ್ರವಿಚಿತ್ರ ಸಂದರ್ಭಗಳು ಎದುರಾಗುತ್ತದೆ. ಆ ಆಕೃತಿಯ ಹಿನ್ನೆಲೆ ಏನು ? ದಿವ್ಯಾಳ ಕುಟುಂಬಕ್ಕೂ, ಆ ಮನೆಗೂ ಇರುವ ಸಂಬಂಧವೇನು? ಎಲ್ಲಾ ತೊಡಕುಗಳನ್ನು ಎದುರಿಸಿ ದಿವ್ಯಾ ತನ್ನ ಕುಟುಂಬವನ್ನು ಹೇಗೆ ಕಾಪಾಡುತ್ತಾಳೆ ಎನ್ನುವುದೇ ಆಕೃತಿಯ ಕಥಾಹಂದರ.

ಕರ್ನಾಟಕದ ಊಟಿ ಎನಿಸಿಕೊಂಡಿರುವ ಸಕಲೇಶಪುರದ ಸುಂದರ ಲೊಕೇಶನ್‍ಗಳನ್ನು ಸಿನಿಮಾ ಶೈಲಿಯಲ್ಲಿ ಸೆರೆಹಿಡಿಯಲಾಗಿದೆ. ನಟ ಪವನ್, ಪ್ರಖ್ಯಾತ್, ತನುಜ, ನೇತ್ರಾವತಿ ಜಾಧವ್, ಬಾಬಿ ಇವರ ಜೊತೆ ಪ್ರಮುಖ ಪಾತ್ರದಲ್ಲಿ ಶ್ರೀಧರ್, ಉಷಾ ಭಂಡಾರಿ ಹೀಗೆ ಹಲವಾರು ಜನಪ್ರಿಯ ತಾರೆಗಳು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅಮ್ಮಾ ಐ ಲವ್ ಯು ಖ್ಯಾತಿಯ ನಿರ್ದೇಶಕ ಕೆ.ಎಂ.ಚೈತನ್ಯ ಕೂಡ ಈ ಧಾರಾವಾಹಿಯನ್ನು ನಿರ್ಮಿಸುವ ಮೂಲಕ ಕಿರುತೆರೆ ಪ್ರವೇಶಿಸಿದ್ದಾರೆ. ಅವರ ಜೊತೆ ಹರಿದಾಸ್.ಪಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಎಂ.ಕುಮಾರ್ ಅವರ ಕಥೆ, ಚಿತ್ರಕಥೆ, ಛಾಯಾಗ್ರಹಣ ಮತ್ತು ನಿರ್ದೇಶನವಿದೆ. ಶೀರ್ಷಿಕೆ ಗೀತೆಗೆ ಕವಿರಾಜ್‍ರ ಸಾಹಿತ್ಯ, ಗುರುಕಿರಣ್ ಅವರ ಸಂಗೀತವಿದೆ.

Translate »