ಸ್ಯಾಂಟ್ರೋ ರವಿ ದಂಧೆ ಪ್ರಕರಣ ಮೈಸೂರಲ್ಲಿ ತನಿಖಾ ಪ್ರಗತಿ ಪರಿಶೀಲಿಸಿದ ಎಡಿಜಿಪಿ ಅಲೋಕ್‍ಕುಮಾರ್
ಮೈಸೂರು

ಸ್ಯಾಂಟ್ರೋ ರವಿ ದಂಧೆ ಪ್ರಕರಣ ಮೈಸೂರಲ್ಲಿ ತನಿಖಾ ಪ್ರಗತಿ ಪರಿಶೀಲಿಸಿದ ಎಡಿಜಿಪಿ ಅಲೋಕ್‍ಕುಮಾರ್

January 11, 2023

ಮೈಸೂರು, ಜ.10(ಆರ್‍ಕೆ)-ತಲೆಮರೆಸಿ ಕೊಂಡಿರುವ, ವೇಶ್ಯಾವಾಟಿಕೆಯೂ ಸೇರಿದಂತೆ ಇನ್ನಿತರೆ ಅಕ್ರಮ ದಂಧೆಕೋರ ಕೆ.ಎಸ್.ಮಂಜು ನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯನ್ನು ಶೀಘ್ರವೇ ಬಂಧಿಸುವುದಾಗಿ ಕಾನೂನು-ಸುವ್ಯ ವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ನಜರ್‍ಬಾದ್‍ನಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಸ್ಯಾಂಟ್ರೋ ರವಿ ಪ್ರಕರಣ ಸಂಬಂಧ ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾಹಿತಿ ಸಂಗ್ರಹಿಸಿದ ಅವರು, ದೂರುದಾರರಾದ ಸಂತ್ರಸ್ತೆ ಯನ್ನು ವಿಚಾರಣೆ ನಡೆಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದರು. ಮೈಸೂರು, ಮಂಡ್ಯ, ರಾಮನಗರ ಹಾಗೂ ಬೆಂಗಳೂರು ನಗರಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಪ್ರಕರಣ ದಾಖ ಲಾಗಿ 8 ದಿನ ಕಳೆದಿದೆ. ಇಷ್ಟರಲ್ಲೇ ಆತನ ಬಂಧನ ವಾಗಬೇಕಿತ್ತು. ತಂತ್ರಜ್ಞಾನವಿದ್ದರೂ, ಕೆಲವೊಮ್ಮೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಾಗ ಪತ್ತೆ ಮಾಡುವುದು ಕಷ್ಟವಾಗುತ್ತದೆ. ಆರೋಪಿಗಾಗಿ ನಮ್ಮ ಪೊಲೀಸರು ತೀವ್ರ ಶೋಧನೆ ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಪೊಲೀಸರಿಗೆ ಯಾರದೂ ಒತ್ತಡವಿಲ್ಲ. ಇದೇ ಕಾರಣಕ್ಕಾಗಿ ಮೈಸೂರಿಗೆ ಬಂದಿದ್ದೇನೆ. ಶೀಘ್ರ ಸ್ಯಾಂಟ್ರೋ ರವಿಯನ್ನು ಬಂಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ಲುಕ್‍ಔಟ್ ನೋಟಿಸ್ ಜಾರಿ ಮಾಡಲಾಗಿದ್ದು, ಆತನ ಬ್ಯಾಂಕ್ ಖಾತೆ ಜಪ್ತಿ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರಿನ ಆರ್.ಆರ್. ನಗರದ ಮನೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ರಾಜ್ಯಾದ್ಯಂತ ಯಾವ ಯಾವ ಬ್ಯಾಂಕ್‍ಗಳಲ್ಲಿ ಅವನ ಖಾತೆಗಳಿವೆ, ಎಲ್ಲೆಲ್ಲಿ ಹಣಕಾಸು ವಹಿವಾಟುಗಳು ನಡೆದಿರುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎಂದು ಅಲೋಕ್ ಕುಮಾರ್ ತಿಳಿಸಿದರು.

ತನಿಖಾ ತಂಡದ ಪೊಲೀಸರು ಹೊರ ರಾಜ್ಯದಲ್ಲೂ ಸ್ಯಾಂಟ್ರೋ ರವಿ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. ನಿತ್ಯ ಉನ್ನತ ಪೊಲೀಸ್ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಿ ಇಲಾಖಾ ಮುಖ್ಯಸ್ಥರಿಗೆ ಪ್ರಗತಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಸರಿಯಾದ ದಾರಿಯಲ್ಲಿ ತನಿಖೆ ನಡೆಯುತ್ತಿರುವುದರಿಂದ ಶೀಘ್ರ ಆರೋಪಿಯನ್ನು ಬಂಧಿಸ ಲಾಗುವುದು ಎಂದು ಇದೇ ಸಂದರ್ಭ ಭರವಸೆ ನೀಡಿದರು.

Translate »