ಕೊರೊನಾ ಕೇರ್ ಸೆಂಟರ್ ಸ್ಥಾಪನೆಗೆ ವಿರೋಧಿಸಿ ಆದಿವಾಸಿಗಳ ಪ್ರತಿಭಟನೆ
ಕೊಡಗು

ಕೊರೊನಾ ಕೇರ್ ಸೆಂಟರ್ ಸ್ಥಾಪನೆಗೆ ವಿರೋಧಿಸಿ ಆದಿವಾಸಿಗಳ ಪ್ರತಿಭಟನೆ

April 28, 2021

ಕುಶಾಲನಗರ, ಏ.27- ಸಮೀಪದ ಬಸವನಹಳ್ಳಿಯಲ್ಲಿ ಕೊರೊನಾ ಕೇರ್ ಸೆಂಟರ್ ತೆರೆಯುವುದನ್ನು ವಿರೋಧಿಸಿ ಸ್ಥಳೀಯ ಆದಿವಾಸಿ ಕೇಂದ್ರದ ನಿವಾಸಿಗಳು ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನಿಟ್ಟು ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಈ ವೇಳೆ ದಿಡ್ಡಳ್ಳಿ ನಿರಾಶ್ರಿತರ ಪುನ ರ್ವಸತಿ ಕೇಂದ್ರದ ನಿವಾಸಿ ಸ್ವಾಮಿ ಮಾತನಾಡಿ, ಜಿಲ್ಲಾಡಳಿತ ಬಸವನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಸೆಂಟರ್ ತೆರೆಯಲು ಚಿಂತನೆ ಹರಿಸಿದೆ. ಶಾಲೆಯ ಸುತ್ತಮುತ್ತ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೋವಿಡ್ ಸೆಂಟರ್ ಆರಂಭಿಸಿದರೆ ತೀವ್ರ ಅನಾನುಕೂಲ ಉಂಟಾ ಗಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ಕೇಂದ್ರ ಆರಂಭಿಸಲು ಬಿಡುವುದಿಲ್ಲ ಎಂದು ತಿಳಿಸಿದರು.

ಈ ಸಂದರ್ಭ ಪುನರ್ವಸತಿ ಶಿಬಿರದ ನೂರಾರು ಮಂದಿ ಒಂದೆಡೆ ಸೇರಿ ಶಾಲೆಗೆ ತೆರಳುವ ಮಾರ್ಗದಲ್ಲಿ ಕಲ್ಲುಗಳನ್ನಿಟ್ಟು ತಮ್ಮ ಆಕ್ರೋಶÀ ವ್ಯಕ್ತಪಡಿಸಿದರು.

ಗುಡ್ಡೆಹೊಸೂರು ಗ್ರಾಪಂ ಪಿಡಿಓ ಶ್ಯಾಮ್ ಮಾತನಾಡಿ, ರಸ್ತೆ ಸಂಚಾರಕ್ಕೆ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧ. ಕೋವಿಡ್ ಪ್ರಕರಣಗಳು ಹೆಚ್ಚಾದಲ್ಲಿ ಮುಂಜಾಗ್ರತೆಯಾಗಿ ಬಸವನಹಳ್ಳಿ ಮೊರಾರ್ಜಿ ಶಾಲೆ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಸತಿ ಗೃಹಗಳನ್ನು ಬಳಸಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಮೇಲಧಿಕಾರಿಗಳ ಸೂಚನೆ ಬಂದ ಕೂಡಲೇ ಕಾರ್ಯಾರಂಭ ಮಾಡಲಾಗುವುದು. ಆದಿವಾಸಿಗಳ ಪ್ರತಿಭಟನೆ ಬಗ್ಗೆ ಐಟಿಡಿಪಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ರಸ್ತೆಗೆ ಅಡ್ಡಲಾಗಿ ಇಟ್ಟಿರುವ ಕಲ್ಲುಗಳನ್ನು ತೆರವುಗೊಳಿ ಸಲಾಗುವುದು ಎಂದು ತಿಳಿಸಿದರು.

Translate »