ಮಡಿಕೇರಿ ನಗರಸಭೆ ಚುನಾವಣೆ ಕೊರೊನಾ ಆತಂಕದ ನಡುವೆ ಉತ್ಸಾಹದ ಮತದಾನ
ಕೊಡಗು

ಮಡಿಕೇರಿ ನಗರಸಭೆ ಚುನಾವಣೆ ಕೊರೊನಾ ಆತಂಕದ ನಡುವೆ ಉತ್ಸಾಹದ ಮತದಾನ

April 28, 2021
  • ಶೇ. 59.01ರಷ್ಟು ಮತದಾನ 
  •  ಏ.30ರಂದು 108 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ 
  • ಜನಪ್ರತಿನಿಧಿಗಳಿಂದ ಹಕ್ಕು ಚಲಾವಣೆ 
  • ಎಲ್ಲಾ ಮತಗಟ್ಟೆಗಳಲ್ಲಿ ಕೊರೊನಾ ಶಿಷ್ಟಾಚಾರ ಪಾಲನೆ, ಪೊಲೀಸರ ಬಿಗಿ ಬಂದೋಬಸ್ತ್ 
  • ಪಿಪಿಇ ಕಿಟ್ ಧರಿಸಿ ಹಕ್ಕು ಚಲಾಯಿಸಿದ ಕೊರೊನಾ ಸೋಂಕಿತರು

ಮಡಿಕೇರಿ, ಏ.27- ಕೊರೊನಾ ಎರಡನೇ ಅಲೆಯ ಆತಂಕದ ನಡುವೆಯೇ ಮಡಿಕೇರಿ ನಗರಸಭೆಯ ಚುನಾವಣೆ ಕೋವಿಡ್ ಮಾರ್ಗಸೂಚಿ ಅನ್ವಯ ಶಾಂತಿಯುತವಾಗಿ ಮುಕ್ತಾಯ ಕಂಡಿದ್ದು, ಶೇ. 59.01ರಷ್ಟು ಮತದಾನವಾಗಿದೆ.

ನಗರಸಭೆ ಚುನಾವಣೆಯಲ್ಲಿ 108 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮತದಾನದ ಹಕ್ಕು ಹೊಂದಿದ್ದ ನಗರದ ಸಾವಿರಾರು ಮತದಾರರು ಎಲ್ಲಾ 23 ವಾರ್ಡ್‍ನ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಇವಿಎಂ (ಮತಯಂತ್ರ)ನಲ್ಲಿ ಬರೆಯುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.
27 ಬೂತ್‍ಗಳಲ್ಲೂ ಕೋವಿಡ್ ನಿಯಮ ಗಳ ಪಾಲನೆ, ಸಾಮಾಜಿಕ ಅಂತರ, ಸ್ಯಾನಿಟೈಜ್ ಸೇರಿದಂತೆ ಎಲ್ಲಿಯೂ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಗೆ ಅವಕಾಶವೇ ಇಲ್ಲದಂತೆ ಕ್ರಮಬದ್ಧವಾಗಿ ಮತದಾನ ನಡೆಯಿತು. ಎಲ್ಲಾ ಬೂತ್‍ಗಳಲ್ಲೂ ಪೊಲೀಸ್ ಸರ್ಪಗಾವಲು ಕಂಡು ಬಂತಲ್ಲದೇ, ಜನ ಗುಂಪು ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. 23 ವಾರ್ಡ್‍ಗಳ ಅಭ್ಯರ್ಥಿ ಗಳು ಕೂಡ ಮತಯಾಚನೆ ನಡುವೆಯೇ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಮತದಾರರಿಗೆ ಮನವರಿಕೆ ಮಾಡುತ್ತಿದ್ದುದು ಕಂಡು ಬಂತು.

ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಯಿತಾದರೂ ಪ್ರಾರಂಭದಲ್ಲಿ ನಿಧಾನಗತಿ ಕಂಡು ಬಂತು. 11 ಗಂಟೆಗೆ ಶೇ. 31, ಸಂಜೆ 6 ಗಂಟೆಗೆ ಶೇ. 59.01 ಮತದಾನವಾಗಿತ್ತು. ಸಂತ ಮೈಕಲರ ಶಾಲೆ, ಜ್ಯೂನಿಯರ್ ಕಾಲೇಜು, ಸಂತ ಜೋಸೇಫರ್ ಶಾಲೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು, ಗದ್ದುಗೆ, ತೋಟಗಾರಿಕಾ ಇಲಾಖೆ ಸೇರಿದಂತೆ ವಿವಿಧ ಮತಗಟ್ಟೆಗಳಲ್ಲಿ ಮತದಾರರ ಸರತಿ ಸಾಲು ಕಂಡು ಬಂತು. ಯುವಕ- ಯುವತಿಯರ ಸಹಿತ ಹಿರಿಯ ನಾಗರಿ ಕರು ಕೂಡ ಉತ್ಸಾಹದಲ್ಲೇ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ಎಲ್ಲಾ ಬೂತ್‍ಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಸಹಿತ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸ ಲಾಗಿತ್ತು. ಮತದಾರರು ಮತ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ಸ್ಯಾನಿಟೈಸ್ ಮತ್ತು ಉಷ್ಣಾಂಶ ಪರೀಕ್ಷಿಸಿ ಕೇಂದ್ರದ ಒಳಗೆ ಬಿಡಲಾಯಿತು. ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದರು.

ನಗರಸಭೆ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಒಟ್ಟು 82 ಅಭ್ಯರ್ಥಿಗಳು ಅಖಾ ಡದಲ್ಲಿದ್ದು, 26 ಮಂದಿ ಪಕ್ಷೇತರರು ಕೂಡ ಚುನಾವಣಾ ಎದುರಿಸಿದ್ದಾರೆ. 21ನೇ ವಾರ್ಡ್‍ನಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿರುವ ಮಂಗಳಮುಖಿ ದೀಕ್ಷಾ ಅವರು ಕೂಡ ಬೂತ್ ಬಳಿ ಅಂತಿಮ ಹಂತವಾಗಿ ಮತಯಾಚನೆ ಮಾಡುವ ಮೂಲಕ ಗಮನ ಸೆಳೆದರು.

23 ವಾರ್ಡ್‍ಗಳಿಗೆ ಒಟ್ಟು 27 ಮತಗಟ್ಟೆ ಗಳನ್ನು ಸ್ಥಾಪಿಸಲಾಗಿತ್ತು. ಈ ಪೈಕಿ 6 ಸೂಕ್ಷ್ಮ, 3 ಅತೀ ಸೂಕ್ಷ್ಮ ಹಾಗೂ 18 ಸಾಮಾನ್ಯ ಮತಗಟ್ಟೆಗಳಿದ್ದು, ಎಲ್ಲಿಯೂ ಅಹಿತಕರ ಘಟನೆಗಳಿಗೆ ಆಸ್ಪದ ಇಲ್ಲದಂತೆ ಚುನಾವಣೆ ನಡೆಸಲಾಯಿತು. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ಯಾವುದೇ ಅಡೆತಡೆ ಇಲ್ಲದೇ ನೆರವೇರಿತು. ಏ.30ರಂದು ಮತ ಎಣಿಕೆ ಕಾರ್ಯ ತಾಲೂಕಿನ ಕೇಂದ್ರ ಸ್ಥಾನದಲ್ಲಿ ಬೆಳಗ್ಗೆ 8 ಗಂಟೆಯಿಂದ ನಡೆಯಲಿದ್ದು, ಅಂದು ಮಧ್ಯಾಹ್ನದ ವೇಳೆಗೆ ಚುನಾವಣೆ ಎದುರಿಸಿದ ಎಲ್ಲಾ 108 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಚುನಾವಣಾ ಅವಧಿ ಮುಕ್ತಾಯವಾದ ಬಳಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳು ಪೊಲೀಸ್ ಭದ್ರತೆಯಲ್ಲಿ ಇವಿಎಂ ಮತಯಂತ್ರಗಳನ್ನು ಸಂತ ಜೋಸೇಫರ ಶಾಲೆಗೆ ಹೊತ್ತು ತಂದರು. ಬಳಿಕ ಎಲ್ಲಾ ಮತ ಯಂತ್ರ ಗಳನ್ನು ಸ್ಟ್ರಾಂಗ್ ರೂಂನಲ್ಲಿ ಇರಿಸಲಾ ಯಿತು. ಮಡಿಕೇರಿ ತಹಶೀಲ್ದಾರ್ ಮಹೇಶ್, ಚುನಾವಣಾಧಿಕಾರಿ ನಂಜುಂಡೇಗೌಡ ಅವರ ಸಮ್ಮುಖ ದಲ್ಲಿ ಸ್ಟ್ರಾಂಗ್ ರೂಂ ಅನ್ನು ಭದ್ರ ಪಡಿಸಲಾಯಿತು. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

Translate »