ಅಂತೂ 8 ತಿಂಗಳ ಬಳಿಕ ಪಾಲಿಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ
ಮೈಸೂರು

ಅಂತೂ 8 ತಿಂಗಳ ಬಳಿಕ ಪಾಲಿಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ

May 26, 2023

ಮೈಸೂರು,ಮೇ 25(ಎಂಟಿವೈ)- ಮೈಸೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಕಗ್ಗಂಟು 8 ತಿಂಗಳ ಸುದೀರ್ಘ ಅವಧಿ ಬಳಿಕ ಸುಸೂತ್ರ ವಾಗಿ ಬಗೆಹರಿದಿದ್ದು, 4 ಸ್ಥಾಯಿ ಸಮಿತಿ ಗಳಲ್ಲಿ ಮೂರು ಜೆಡಿಎಸ್ ಪಾಲಾದರೆ, ಉಳಿದ ಒಂದು ಸ್ಥಾಯಿ ಸಮಿತಿಯನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಕಸಿದು ಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.

ಮೈಸೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸ್ಥಾಯಿಸಮಿತಿಗಳಿಗೆ 8 ತಿಂಗಳು ಅಧ್ಯಕ್ಷರಿ ರಲಿಲ್ಲ. ಪಾಲಿಕೆಯ ಅಧಿಕಾರದ ಗದ್ದುಗೆ ಯಲ್ಲಿ ಇದೇ ಮೊದಲ ಬಾರಿಗೆ ಮೇಯರ್ ಹಾಗೂ ಉಪಮೇಯರ್ ಹುದ್ದೆ ಬಿಜೆಪಿ ಪಾಲಾಗಿದೆ. ಆದರೂ, ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ
ಚುನಾವಣೆ ನಡೆಸದೇ ಇರುವುದು ತೀವ್ರ ಟೀಕೆಗೆ ಗ್ರಾಸವಾಗಿತ್ತು. ವಿರೋಧ ಪಕ್ಷವಾದ ಪಾಲಿಕೆಯ ಕಾಂಗ್ರೆಸ್ ಸದಸ್ಯರ ಪ್ರತಿಭಟನೆಯ ನಡುವೆಯೂ ಅಧ್ಯಕ್ಷರ ಆಯ್ಕೆಯಾಗಿ ನಿಗಧಿಯಾಗಿದ್ದ ಚುನಾವಣೆ ಕೆಲ ಕಾರಣದಿಂದ ಮೂರು (ಫೆ.2, ಮಾ.13 ಹಾಗೂ ಮಾ.23) ಬಾರಿ ಮುಂದೂ ಡಿದ್ದರಿಂದ ಪಾಲಿಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರತಿಕ್ರಿಯೆ ಕಗ್ಗಂಟಾಗಿಯೇ ಮುಂದು ವರೆದಿತ್ತು. ರಾಜಕೀಯ ಕಾರಣದಿಂದಾಗಿ ಮೇಯರ್ ಮೂರು ಬಾರಿ ಸಭೆಯನ್ನು ಮುಂದೂ ಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಸುಸೂತ್ರ ವಾಗಿ ನಡೆದ ಚುನಾವಣೆ: ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಗರಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ ನಡೆದ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು. ನಾಲ್ಕು ಸಮಿತಿಗಳಲ್ಲಿ ಮೂರು ಸಮಿತಿಗಳಿಗೆ ಜೆಡಿಎಸ್ ಸದಸ್ಯರು ಆಯ್ಕೆ ಯಾದರೆ, ಮತ್ತೊಂದು ಸಮಿತಿಯನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಪಡೆದುಕೊಂಡಿತು.

ಎಡವಿದ ಜೆಡಿಎಸ್: ಈ ಹಿಂದೆ ಪಾಲಿಕೆಯ ನೂತನ ಮೇಯರ್ ಹಾಗೂ ಉಪ ಮೇಯರ್ ಚುನಾ ವಣೆಯಲ್ಲಿ ಜೆಡಿಎಸ್ ಬೆಂಬಲ ಪಡೆದು ಮೇಯರ್ ಸ್ಥಾನವನ್ನು ಬಿಜೆಪಿ ಪಡೆದುಕೊಂಡಿದ್ದರೆ, ಉಪಮೇಯರ್ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ಎಡವಟ್ಟು ಮಾಡಿಕೊಂಡಿದ್ದರಿಂದ ಅಭ್ಯರ್ಥಿಯ ನಾಮಪತ್ರ ತಿರಸ್ಕøತಗೊಂಡಿತ್ತು. ಇದರಿಂದ ಬಯಸದ ಬಂದ ಭಾಗ್ಯ ಎಂಬಂತೆ ಬಿಜೆಪಿಗೆ ಉಪ ಮೇಯರ್ ಸ್ಥಾನವೂ ಒಲಿದಿತ್ತು. ಎರಡೂ ಸ್ಥಾನವೂ ಬಿಜೆಪಿಗೆ ಒಲಿದಿದ್ದರಿಂದ ಎಲ್ಲಾ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‍ಗೆ ನೀಡಲು ಬಿಜೆಪಿ ಸಮ್ಮತಿಸಿತ್ತು. ಆದರೆ ಗುರುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರೊಬ್ಬರ ಗೈರು ಹಾಜರಿಯಿಂದಾಗಿ ಒಂದು ಸ್ಥಾಯಿ ಸಮಿತಿಯನ್ನು ಕಳೆದುಕೊಳ್ಳುವಂತಾಯಿತು.

ಕಾಂಗ್ರೆಸ್‍ಗೆ ಒಲಿದ ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿ: ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿಯಲ್ಲಿ ಒಟ್ಟು 2 ಕಾಂಗ್ರೆಸ್, ತಲಾ 1 ಬಿಜೆಪಿ, ಬಿಎಸ್‍ಪಿ ಮತ್ತು ಜೆಡಿಎಸ್, 2 ಪಕ್ಷೇತರರ ಸದಸ್ಯರು ಇದ್ದರು. ಅವರಲ್ಲಿ ಜೆಡಿಎಸ್‍ನ ಮಹಮ್ಮದ್ ರಫೀಕ್ ಗೈರು ಹಾಜರಾಗಿದ್ದು ಎಡವಟ್ಟಾ ಯಿತು. ಬಿಎಸ್‍ಪಿಯ ಪಲ್ಲವಿ ಬೇಗಂ ಕಾಂಗ್ರೆಸ್‍ನ ಬೆಂಬ ಲಕ್ಕೆ ನಿಂತರು. ಪಕ್ಷೇತರ ಸದಸ್ಯ ಸಮೀವುಲ್ಲಾ ಅಜ್ಜು ಗೈರು ಹಾಜರಾದರು. ಸಂಖ್ಯಾಬಲ ಕಳೆದುಕೊಂಡ ಜೆಡಿಎಸ್ ನಾಮಪತ್ರ ಸಲ್ಲಿಸುವ ಗೋಜಿಗೆ ಹೋಗ ಲಿಲ್ಲ. ಹಾಗಾಗಿ ಕಾಂಗ್ರೆಸ್‍ನ ಹೆಚ್.ಎಂ. ಶಾಂತಕುಮಾರಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.

ಜೆಡಿಎಸ್‍ಗೆ ಮೂರು: ಉಳಿದ ಮೂರು ಸ್ಥಾಯಿ ಸಮಿತಿ ಜೆಡಿಎಸ್‍ಗೆ ತೆಕ್ಕೆಗೆ ಒಲಿದು ಬಂದವು. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಕೂಟಕ್ಕೆ ಹೆಚ್ಚಿನ ಸಂಖ್ಯಾಬಲ ಇದ್ದುದ್ದರಿಂದ ಮೂರು ಸ್ಥಾಯಿ ಸಮಿತಿಗಳಿಗೂ ಅವಿರೋಧವಾಗಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್‍ನ ಆರ್.ನಾಗರಾಜ್, ಸಾರ್ವ ಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸವಿತಾ, ಲೆಕ್ಕಪತ್ರಗಳಿಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಿ. ರಮೇಶ್ ಅವಿರೋಧವಾಗಿ ಆಯ್ಕೆಯಾದರು.

ಈ ನಾಲ್ಕು ಸ್ಥಾಯಿ ಸಮಿತಿಗಳ ಅಧಿಕಾರಾವಧಿ ದಾಖಲೆಯಲ್ಲಿ 2022ರ ಸೆ.6ರಿಂದ ಆರಂಭ ಗೊಂಡು ಒಂದು ವರ್ಷದ ಅವಧಿಗೆ ಮಾತ್ರ ಸೀಮಿತವಾಗಿದೆ. ಇದರಿಂದ ನೂತನ ಅಧ್ಯಕ್ಷರು 2023ರ ಸೆ.6ರವರೆಗೆ ಮಾತ್ರ ಆಡಳಿತ ನಡೆಸ ಬಹುದಾಗಿದೆ. ಚುನಾವಣೆ ವೇಳೆ ಉಪ ಮೇಯರ್ ಡಾ.ಜಿ.ರೂಪಾ, ಕೌನ್ಸಿಲ್ ಕಾರ್ಯ ದರ್ಶಿ ರಂಗಸ್ವಾಮಿ ಇದ್ದರು. ಸ್ಥಾಯಿ ಸಮಿತಿಗಳಿಗೆ ಆಯ್ಕೆ ಯಾದ ನೂತನ ಅಧ್ಯಕ್ಷರಿಗೆ ಮೇಯರ್ ಶಿವ ಕುಮಾರ್, ಉಪಮೇಯರ್ ಡಾ.ರೂಪ, ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ ಅಭಿನಂಧಿಸಿದರು.

Translate »