ಮೈಸೂರು, ಅ.28(ಎಂಟಿವೈ)-ಯಶಸ್ವಿ ಜಂಬೂಸವಾರಿ ನಂತರ ಅರಮನೆ ಅಂಗಳದಲ್ಲಿ ವಿರಮಿಸುತ್ತಿದ್ದ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಬುಧವಾರ ಬೆಳಗ್ಗೆ ಸ್ವಸ್ಥಾನಗಳತ್ತ ಪ್ರಯಾಣ ಬೆಳೆಸಿದವು.
ಅಂಬಾರಿ ಹೊತ್ತ ಅಭಿಮನ್ಯು ಸೇರಿದಂತೆ ದಸರಾ ದಲ್ಲಿ ಪಾಲ್ಗೊಂಡಿದ್ದ ಐದು ಆನೆಗಳು, ಮಾವುತರು, ಕಾವಾಡಿಗಳನ್ನು ಕೊರೊನಾದಿಂದ ಸುರಕ್ಷಿತವಾಗಿ ಕಾಪಾಡಿ, ಈಗ ಅವುಗಳ ತಾಣಗಳಿಗೆ ತಲುಪಿಸಿದೆ.
ಸಾಂಪ್ರದಾಯಿಕ ಪೂಜೆ: ಅರಮನೆ ಆವರಣ ದಲ್ಲಿ ಇಂದು ಬೆಳಗ್ಗೆ 9.30ಕ್ಕೆ ಸಂದ ಅಭಿಜಿನ್ ಲಗ್ನದಲ್ಲಿ ಅಭಿಮನ್ಯು ನೇತೃತ್ವದ ಗಜಪಡೆಗೆ ಪೂಜೆ ಸಲ್ಲಿಸಲಾಯಿತು. ಅರ್ಚಕ ಎಸ್.ವಿ. ಪ್ರಹ್ಲಾದ ರಾವ್ ಎಲ್ಲಾ ಆನೆಗಳ ಪಾದ ತೊಳೆದು ಹರಿಶಿನ, ಕುಂಕುಮ, ಗಂಧ ಹಚ್ಚಿ, ವಿವಿಧ ಹೂವು ಗಳನ್ನು ಸಮರ್ಪಿಸಿ ಸಂಕಲ್ಪ ಮಾಡಿ, ಶೋಡಷೋ ಪಚಾರ ಪೂಜೆ, ಗಣಪತಿ ಪೂಜೆ, ಮಂತ್ರಪುಷ್ಪ, ಅರ್ಚನೆ ಮಾಡಿ, ನೈವೇದÀ್ಯ ಸಮರ್ಪಿಸಿದರು. ಬಳಿಕ ಪಂಚಫಲ, ಕಬ್ಬು, ಬೆಲ್ಲ ಹಾಗೂ ವಿವಿಧ ಹಣ್ಣುಗಳನ್ನು ಆನೆಗಳಿಗೆ ನೀಡಿದರು.
ಡಿಸಿಎಫ್ ಅಲೆಗ್ಸಾಂಡರ್, ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಆರ್‍ಎಫ್‍ಓ ಕೆ.ಸುರೇಂದ್ರ, ಪಶುವೈದ್ಯ ಡಾ.ಡಿ.ಎನ್. ನಾಗರಾಜು ಮತ್ತಿತರರು ಸಹ ಆನೆಗಳಿಗೆ ಹಣ್ಣು ಗಳನ್ನು ನೀಡಿ ಶುಭ ಕೋರಿದರು.
ಲಾರಿಯಲ್ಲಿ ಪ್ರಯಾಣ: ಬೆಳಗ್ಗೆ 11.10ಕ್ಕೆ ಎಲ್ಲಾ ಆನೆಗಳನ್ನು ಹೊತ್ತ ಲಾರಿಗಳು ಜಯಮಾರ್ತಾಂಡ ಗೇಟ್ ಮೂಲಕ ಹೊರಟವು. ಹಾರ್ಡಿಂಗ್ ವೃತ್ತ ಬಳಸಿಕೊಂಡು ಗನ್‍ಹೌಸ್, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತದ ಮೂಲಕ ಸಾಗಿ ವಿವಿಧ ಕ್ಯಾಂಪ್‍ಗಳತ್ತ ಪ್ರಯಾಣ ಬೆಳೆಸಿದವು.
ಅಭಿಮನ್ಯು ಮತ್ತಿಗೋಡು ಆನೆ ಕ್ಯಾಂಪ್‍ಗೆ, ಪಟ್ಟದ ಆನೆ ವಿಕ್ರಮ, ಕುಮ್ಕಿ ಆನೆ ವಿಜಯ ಆನೆ ಕಾಡು ಶಿಬಿರಕ್ಕೆ, ಮತ್ತೊಂದು ಕುಮ್ಕಿ ಆನೆ ಕಾವೇರಿ, ನಿಶಾನೆ ಗೋಪಿ ದುಬಾರೆ ಆನೆ ಕ್ಯಾಂಪ್‍ಗೆ ಪ್ರಯಾಣ ಬೆಳೆಸಿದವು. ಎಲ್ಲಾ ಆನೆಗಳಿಗೂ ಇಲಾಖೆಯ ಸಿಬ್ಬಂದಿ ಯೊಬ್ಬರನ್ನು ಎಸ್ಕಾರ್ಟ್ ಆಗಿ ನಿಯೋಜಿಸಲಾಗಿತ್ತು.
ಉಪಾಹಾರ: ಸಂಪ್ರದಾಯದಂತೆ ದಸರಾ ಆನೆ ಗಳ ಮಾವುತರು, ಕಾವಾಡಿಗಳು ಹಾಗೂ ವಿಶೇಷ ಮಾವುತರಿಗೆ ಇಂದು ಬೆಳಗ್ಗೆ ಅರಮನೆ ಆವರಣ ದಲ್ಲಿ ಉಪಾಹಾರ ಕೂಟ ಏರ್ಪಡಿಸಲಾಗಿತ್ತು. ಇಡ್ಲಿ, ವಡೆ, ಪೊಂಗಲ್, ಕೇಸರಿ ಬಾತ್ ಸೇವಿಸಿ ನಗುಮುಖದಿಂದ ಮಾವುತ, ಕಾವಾಡಿಗಳು ತಮ್ಮೂರಿನತ್ತ ಪಯಣಿಸಿದರು.
ಉಡುಗೊರೆ: ಇಂದು ಐದು ಆನೆಗಳ ಮಾವುತ, ಕಾವಾಡಿ, ಸಹಾಯಕರು, ವಿಶೇಷ ಮಾವುತರು, ಆನೆಗಳ ಅಡುಗೆ ಸಿಬ್ಬಂದಿಗೂ ತಲಾ 2 ಸಾವಿರ ರೂ. ಪ್ರೋತ್ಸಾಹ ಧನ ಹಾಗೂ 25 ಕೆಜಿ ಬಾಸ್ಮತಿ ಅಕ್ಕಿ ಮೂಟೆಯನ್ನು ಡಿಸಿಎಫ್ ಎಂ.ಜಿ.ಅಲೆಗ್ಸಾಂಡರ್ ವಿತರಿಸಿದರು. ಈ ಬಾರಿ ಮಾವುತ-ಕಾವಾಡಿಗಳ ಕುಟುಂಬದವರು ಬಂದಿರಲಿಲ್ಲ. ಕೆಲವು ದಾನಿ ಗಳು ಮಾವುತರ ಮಕ್ಕಳಿಗೆ ಬಿಸ್ಕೆಟ್, ಚಾಕಲೇಟ್, ಕಡಲೆ ಮಿಠಾಯಿ, ಬರ್ಫಿ ತಿನಿಸುಗಳಿದ್ದ ದೊಡ್ಡ ಬಾಕ್ಸ್ ಉಡುಗೊರೆಯಾಗಿ ಕಳುಹಿಸಿಕೊಟ್ಟರು.
ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಆನೆಗಳು ಇದೇ ಮೊದಲ ಬಾರಿಗೆ ಕನಿಷ್ಟ ಸಂಖ್ಯೆಯಲ್ಲಿದ್ದವು. ಅಲ್ಲದೇ, ಬಹಳ ಕಡಿಮೆ ಅವ ಧಿಗೆ(26 ದಿನ) ಮೈಸೂರಲ್ಲಿ ಬೀಡು ಬಿಟ್ಟಿದ್ದವು. ದಸರಾ ಆನೆಗಳನ್ನು ನೋಡಲೆಂದೇ ಜನರು ಮುಗಿ ಬೀಳುವ ಅಪಾಯ ಇದ್ದುದರಿಂದ ಕೊರೊನಾ ಸೋಂಕು ಹರಡುವಿಕೆ ಭಯದಿಂದ ಈ ಬಾರಿ ಬೇಗನೇ ದಸರಾ ಆನೆಗಳನ್ನು ಮರಳಿ ಕ್ಯಾಂಪ್ ಗಳಿಗೆ ಕಳುಹಿಸಲಾಯಿತು.
ಅ.1ರಂದು ಹುಣಸೂರು ತಾಲೂಕಿನ ವೀರನ ಹೊಸಳ್ಳಿ ಗೇಟ್ ಬಳಿಯಿಂದ ಅಭಿಮನ್ಯು ನೇತೃತ್ವ ದಲ್ಲಿ ಹೊರಟ 5 ಆನೆಗಳ ತಂಡ ಮೈಸೂರಿನ ಅಶೋಕಪುರಂನ ಅರಣ್ಯ ಭವನಕ್ಕೆ ಬಂದು ವಾಸ್ತವ್ಯ ಹೂಡಿತ್ತು. ಅ.2ರಂದು ಅರ ಮನೆಯ ಅಂಗಳ ಪ್ರವೇಶಿಸಿದ್ದವು. ಅ.3ರಿಂದ ಅರಮನೆ ಆಂಗಳದಲ್ಲೇ ತಾಲೀಮು ಆರಂಭಿಸಲಾಗಿತ್ತು. ಅ.26ರಂದು ಜಂಬೂ ಸವಾರಿ ಯಶಸ್ವಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗಜಪಡೆ 2 ದಿನ ವಿಶ್ರಾಂತಿ ಪಡೆದು ಇಂದು ಮರಳಿ ಗೂಡಿಗೆ ತೆರಳಿದವು.
ಈ ಸಂದರ್ಭ ಆರ್‍ಎಫ್‍ಎ ಸುರೇಂದ್ರ ಕೆ.ದಾಸ್, ಪಶುವೈದÀ್ಯ ಡಾ.ಡಿ.ಎನ್.ನಾಗರಾಜು, ಆನೆಗಳ ಉಸ್ತುವಾರಿಗಳಾದ ರಂಗರಾಜು, ಅಕ್ರಮ್ ಮತ್ತಿತರರಿದ್ದರು.