ಮೈಸೂರಿನ ಪಂಚ ಸಾಧಕರಿಗೆ ರಾಜ್ಯೋತ್ಸವ ಗೌರವ
ಮೈಸೂರು

ಮೈಸೂರಿನ ಪಂಚ ಸಾಧಕರಿಗೆ ರಾಜ್ಯೋತ್ಸವ ಗೌರವ

October 29, 2020

ಮೈಸೂರು, ಅ.28(ಎಂಕೆ)- ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೈಸೂರಿನ ಐವರು ಭಾಜನರಾಗಿದ್ದಾರೆ.

ವಿಶ್ವವಿಖ್ಯಾತ ದಸರಾ ಜಂಬೂಸವಾರಿಯಲ್ಲಿ ಪೂಜೆ ಗೊಳ್ಳುವ ಶ್ರೀ ಚಾಮುಂಡೇಶ್ವರಿ ದೇವಿಯ ಪಂಚ ಲೋಹದ ಉತ್ಸವಮೂರ್ತಿ ರೂಪಿಸಿದÀ ಖ್ಯಾತ ಶಿಲ್ಪಿ ಎನ್.ಎಸ್.ಜನಾರ್ಧನ ಮೂರ್ತಿ, ಯೋಗ ಸಾಧ ಕರೂ, ಆಯುರ್ವೇದ ವೈದ್ಯರೂ ಆದ ಡಾ.ಎ.ಎಸ್. ಚಂದ್ರಶೇಖರ್, ಮೂಲತಃ ಧಾರವಾಡವಾದರೂ ಮೈಸೂರಿನಲ್ಲೇ ನೆಲೆಸಿರುವ ಸಾಹಿತಿ ಸಿ.ಪಿ.ಸಿದ್ದಾಶ್ರಮ, ನಿವೃತ್ತ ಶಿಕ್ಷಕ ಹಾಗೂ ಬಾಬು ಜಗಜೀವನರಾಮ್ ಶೈಕ್ಷಣಿಕ ಟ್ರಸ್ಟ್‍ನ ಡಾ.ಪುಟ್ಟಸಿದ್ದಯ್ಯ, ಸಾಧ್ವಿ ಪತ್ರಿಕೆ ಸಂಪಾದಕ ಸಿ.ಮಹೇಶ್ವರನ್ 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕøತರಾಗಿದ್ದಾರೆ.

ಶಿಲ್ಪಕಲೆ: ಶಿಲ್ಪಕಲೆಯಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ರಾದ ಮೈಸೂರಿನ ಖ್ಯಾತ ಶಿಲ್ಪಿ ಎನ್.ಪಿ.ಶ್ರೀನಿವಾಸಾ ಚಾರ್ ಅವರ ಪುತ್ರ ಎನ್.ಎಸ್.ಜನಾರ್ಧನ ಮೂರ್ತಿ (72) ಅವರು, ಶಿಲ್ಪಕಲಾ ಕ್ಷೇತ್ರದಲ್ಲಿ 60 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ಅಖಿಲ ಭಾರತ ಕರಕುಶಲ ಮಂಡಳಿಯಲ್ಲಿ ತರಬೇತಿ ಪಡೆದು ಅಲ್ಲಿಯೇ ‘ನಟರಾಜ’, ‘ಅರ್ಧನಾರೀಶ್ವರ’, ‘ಶಿವಗಾಮಿ’, ‘ತ್ವಷ್ಟಬ್ರಹ್ಮ’, ‘ಹರಿಹರ’, ‘ಕಪಟಬೈರವಿ’ ಮತ್ತು ಶಕುನಶಾರದೆ ವಿಗ್ರಹ ಗಳನ್ನು ಕೆತ್ತನೆ ಮಾಡಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಹಳ್ಳಿಯೊಂದರ ದೇವಸ್ಥಾನಕ್ಕೆ ಬಸವೇಶ್ವರ ವಿಗ್ರಹ, ಮಂಡ್ಯದ ಲಕ್ಷ್ಮಿ ಜನಾರ್ಧನ ದೇವಸ್ಥಾನಕ್ಕೆ ಆಂಜನೇಯ ವಾಹನ, ಮಕರ ಸಿಂಹ ವಾಹನ, ಉತ್ಸವ ಪೀಠ ಪ್ರಭಾವಳಿ ಹಾಗೂ ಹಂಸವಾಹನವನ್ನು ವಿನ್ಯಾಸಗೊಳಿಸಿದ್ದಾರೆ.

1991ರಲ್ಲಿ ಮೈಸೂರು ಸಮೀಪದ ಬೇಗೂರು ಗ್ರಾಮದ ಈಶ್ವರ ದೇವಸ್ಥಾನಕ್ಕೆ ಹುಲಿವಾಹನ, ನಗರದ ಕಾಳಿಕಾಂಬ ದೇವಸ್ಥಾನಕ್ಕೆ ಪಂಚಲೋಹದ 25 ಕೆಜಿ ತೂಕದ ವೀರಬ್ರಹ್ಮೇಶ್ವರ ಸ್ವಾಮಿಯ ಉತ್ಸವ ಮೂರ್ತಿ, 1993ರಲ್ಲಿ ಮಂಡ್ಯದ ಸಕ್ಕರೆ ಕಾರ್ಖಾನೆ ಸಂಸ್ಥಾಪಕ ಅಧ್ಯಕ್ಷ ಲೆಸ್ಲಿ ಸಿ ಕೋಲ್ಮನ್‍ರ ಮೂರೂವರೆ ಅಡಿ ಎತ್ತರದ ಕಂಚಿನ ಪ್ರತಿಮೆ, 1994ರಲ್ಲಿ ಮಂಗಳೂರು ಗಣೇಶ ಬೀಡಿ ವಕ್ರ್ಸ್‍ಗೆ ಗಣಪತಿ ವಿಗ್ರಹ, 1998ರಲ್ಲಿ ಕಾಶ್ಮೀರದಲ್ಲಿ ಹುತಾತ್ಮರಾದ ಮೇಜರ್ ಗಣೇಶ್ ಮಾದಪ್ಪವರ ಕಂಚಿನ ಪ್ರತಿಮೆ ನಿರ್ಮಿಸಿಕೊಟ್ಟಿದ್ದಾರೆ. ಮೈಸೂರಿನ ಯೋಗ ನರಸಿಂಹಸ್ವಾಮಿ ದೇವಸ್ಥಾನದ ಮೂಲ ವಿಗ್ರಹಕ್ಕೆ ಬೆಳ್ಳಿ ಕವಚ, ಸಚ್ಚಿದಾನಂದ ಆಶ್ರಮಕ್ಕೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಮಾತಾ-ಪಿತೃಗಳ ಬೆಳ್ಳಿ ಪತ್ರಿಮೆಗಳು ಸೇರಿದಂತೆ ನೂರಾರು ವಿಗ್ರಹಗಳನ್ನು ಕೆತ್ತನೆ ಮಾಡಿ ಶಿಲ್ಪಕಲಾ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.

ಯೋಗ: ಖ್ಯಾತ ಆಯುರ್ವೇದ ತಜ್ಞ ವೈದ್ಯರಾದ ಡಾ.ಎ.ಎಸ್.ಚಂದ್ರಶೇಖರ್ ಅವರು ಆಯುರ್ವೇದ ಚಿಕಿತ್ಸೆ ನೀಡುವುದರ ಜೊತೆಗೇ ಯೋಗ ಕ್ಷೇತ್ರದ ಸಾಧಕರೂ ಆಗಿದ್ದಾರೆ. ಮೈಸೂರು ಮತ್ತು ಚಿಕ್ಕಮಗಳೂರಿನಲ್ಲಿ 10ಕ್ಕೂ ಹೆಚ್ಚು ಕಡೆ ‘ಚಿರಂಜೀವಿ ಯೋಗ ತರಬೇತಿ ಶಾಲೆ’ಗಳನ್ನು ತೆರೆದು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಾವಿರಾರು ಯೋಗಪಟುಗಳನ್ನು ರೂಪಿಸಿ ದ್ದಾರೆ. 36 ವರ್ಷಗಳಿಂದ ಯೋಗ ತರಬೇತಿಯನ್ನು ನೀಡುತ್ತಿರುವ ಡಾ.ಚಂದ್ರಶೇಖರ್, `ಯೋಗಾರ್ಥ ಸಂಗ್ರಹ’ ಹಾಗೂ `ಹ್ಯಾಂಡ್ ಬುಕ್ ಆಫ್ ಯೋಗ’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ.

ಸಾಹಿತ್ಯ: ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯ ಯನ ವಿಭಾಗದ ನಿವೃತ್ತ ನಿರ್ದೇಶಕರಾದ ಪ್ರೊ.ಸಿ.ಪಿ. ಸಿದ್ದಾಶ್ರಮ ಅವರು 45 ವರ್ಷಗಳಿಂದ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 11 ವಿಮರ್ಶಾ ಕೃತಿಗಳು, 4 ಸಂಶೋಧನಾ ಕೃತಿಗಳು, 3 ಕವನ ಸಂಕಲನಗಳು ಹಾಗೂ 3 ಆಧುನಿಕ ವಚನ ಸಂಕಲಗಳು, ‘ನಾನಲ್ಲದ ನಾನು’ ಎಂಬ ಆತ್ಮಕಥೆ, ಮಕ್ಕಳ ಸಾಹಿತ್ಯ ಕುರಿತ ‘ಪಂಚತಂತ್ರ ಕಥೆಗಳು’ ಸೇರಿ 24 ಕೃತಿಗಳನ್ನು ರಚಿಸಿದ್ದಾರೆ.

ಕನ್ನಡದ ವಿವಿಧ ಪತ್ರಿಕೆಗಳಲ್ಲಿ 120ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಅಲ್ಲದೆ ಇವರ ‘101 ಆಧುನಿಕ ವಚನಗಳು’ ಎಂಬ ಕೃತಿಯೂ ತಮಿಳು ಭಾಷೆಗೆ ಅನುವಾದವಾಗಿದೆ. ಮೈಸೂರು ವಿವಿಯ ಪ್ರಭಾರ ಕುಲಪತಿ, ಸಿಂಟಿಕೇಟ್ ಸದಸ್ಯರಾಗಿ ಹಲವಾರು ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ಶಿಕ್ಷಣ: ಮೈಸೂರಿನ ರಾಜೀವ್ ನಗರದಲ್ಲಿರುವ ಬಾಬು ಜಗಜೀವನರಾಮ್ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಟ್ರಸ್ಟ್‍ನ ಮುಖ್ಯಸ್ಥರಾದ ಡಾ. ಪುಟ್ಟ ಸಿದ್ದಯ್ಯ ಅವರು ಶಿಕ್ಷಣ ಕ್ಷೇತ್ರ ದಲ್ಲಿ ನೀಡಿದ ಕೊಡುಗೆ ಹಿನ್ನೆಲೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನ ರಾಗಿದ್ದಾರೆ. ವೃತ್ತಿಯಲ್ಲಿ ವೈದ್ಯರಾದ ಇವರು ಕೆ.ಆರ್. ಆಸ್ಪತ್ರೆ ಸೇರಿ ದಂತೆ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬಡವರ್ಗದ ಮಕ್ಕ ಳಿಗೆ ತಮ್ಮ ಮನೆಯಲ್ಲೇ ಆಶ್ರಯ ನೀಡಿ, ಬಳಿಕ ಬಾಬು ಜಗಜೀವನರಾಮ್ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಟ್ರಸ್ಟ್ ಮೂಲಕ ಹೈಸ್ಕೂಲ್ ಹಾಗೂ ವಿದ್ಯಾರ್ಥಿ ನಿಲಯ ಸ್ಥಾಪಿಸಿ ನೂರಾರು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ದೊರಕುವಂತೆ ಮಾಡಿದ್ದಾರೆ.

ಮಾಧ್ಯಮ: ಮೈಸೂರಿನ ಸಾಧ್ವಿ ಪತ್ರಿಕೆ ಸಂಪಾದಕ ಸಿ.ಮಹೇಶ್ವರನ್ ಮಾಧ್ಯಮ ಕ್ಷೇತ್ರದಲ್ಲಿ 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು. ಸಾಧ್ವಿ ಪತ್ರಿಕೆ 1899ರಲ್ಲಿ ಪ್ರಾರಂಭವಾಗಿದೆ. ಸಿ.ಮಹೇಶ್ವರನ್ ಈ ಪತ್ರಿಕೆಯ ಜವಾ ಬ್ದಾರಿಯನ್ನು 1994ರಲ್ಲಿ ವಹಿಸಿಕೊಂಡರು. ಇತ್ತೀಚೆಗೆ ಈ ಪತ್ರಿಕೆಗೆ ಡಿಜಿಟಲ್ ರೂಪ ಕೊಟ್ಟಿದ್ದು, ಪ್ರಿಂಟ್ ಮತ್ತು ಡಿಜಿಟಲ್ ರೂಪ ದಲ್ಲಿ ಪತ್ರಿಕೆಯನ್ನು ನಡೆಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಶತಮಾನೋತ್ಸವವನ್ನು ಸಹ ಆಚರಿಸಿದ್ದರು. ಸಿ.ಮಹೇಶ್ವರನ್ ಅವರಿಗೆ ಮಾಧ್ಯಮ ಕ್ಷೇತ್ರದಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

Translate »