ವಿದ್ಯಾರ್ಥಿ ಬಲಿಯಾದ ಬೆನ್ನಲ್ಲೇಈಗ ವಿದ್ಯಾರ್ಥಿನಿ ಚಿರತೆಗೆ ಬಲಿ
ಮೈಸೂರು

ವಿದ್ಯಾರ್ಥಿ ಬಲಿಯಾದ ಬೆನ್ನಲ್ಲೇಈಗ ವಿದ್ಯಾರ್ಥಿನಿ ಚಿರತೆಗೆ ಬಲಿ

December 2, 2022

ತಿ.ನರಸೀಪುರ, ಡಿ.1-ಚಿರತೆ ದಾಳಿಗೆ ಯುವತಿ ಬಲಿಯಾಗಿರುವ ಘಟನೆ ತಾಲೂಕಿನ ಎಸ್.ಕೆಬ್ಬೇಹುಂಡಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ನಿವಾಸಿ ರಮೇಶ್‍ನಾಯಕ ಎಂಬುವರ ಪುತ್ರಿ ಹಾಗೂ ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಮೇಘನಾ(22) ಚಿರತೆಗೆ ಬಲಿಯಾದವರು. ಯುವತಿ ಬಹಿರ್ದೆಸೆಗೆ ಹೋಗಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ದಾಳಿಯಿಂದ ತೀವ್ರ ಗಾಯಗೊಂಡಿದ್ದ ಯುವತಿಯನ್ನು ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ತಿಂಗಳ ಹಿಂದೆಯಷ್ಟೇ ಚಿರತೆ ದಾಳಿಯಿಂದ ಎಂ.ಎಲ್.ಹುಂಡಿ ಗ್ರಾಮದ ಯುವಕ ಬಲಿಯಾದ ನೆನಪು ಮಾಸುವ ಮುನ್ನವೇ ಚಿರತೆ ದಾಳಿಗೆ ಯುವತಿ ಬಲಿಯಾಗಿ ರುವುದು ತಾಲೂಕಿನ ಜನತೆಯ ಆತಂಕಕ್ಕೆ ಕಾರಣವಾಗಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಈಗ ಮತ್ತೊಂದು ಬಡ ಜೀವ ಪ್ರಾಣ ಕಳೆದುಕೊಂಡಂತಾಗಿದೆ.

ಸಾರ್ವಜನಿಕರ ಆಕ್ರೋಶ: ಕಳೆದ ತಿಂಗಳಷ್ಟೇ ಚಿರತೆ ದಾಳಿಯಿಂದ ಯುವಕ ಸಾವನ್ನಪ್ಪಿದ್ದು, ಈಗ ಯುವತಿಯನ್ನು ಬಲಿ ಪಡೆದಿದೆ. ತಾಲೂಕಿನಾದ್ಯಂತ ಚಿರತೆಗಳ ದಾಳಿ ನಿರಂತರವಾಗಿ ನಡೆಯುತ್ತಿದ್ದರೂ, ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತ ವಿಫಲವಾಗಿದೆ ಎಂದು ಆಕ್ರೋಶಗೊಂಡ ಗ್ರಾಮಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಅಶ್ವಿನ್ ಕುಮಾರ್ ಘಟನೆ ಕುರಿತು ಮಾಹಿತಿ ಪಡೆದರು. ಹಾಗೂ ಯುವತಿ ದುರಂತ ಸಾವಿಗೆ ಸಂತಾಪ ಸೂಚಿಸಿದರು. ಅಲ್ಲದೇ ಪ್ರತಿಭಟನಾನಿರತರ ಜೊತೆ ಧರಣಿಗೆ ಕುಳಿತ ಶಾಸಕರು, ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಅರಣ್ಯಾಧಿಕಾರಿಗಳು ಭೇಟಿ ನೀಡಬೇಕು ಎಂದು ಪಟ್ಟು ಹಿಡಿದರು. ಸ್ಥಳದಲ್ಲಿ ಡಿವೈಎಸ್ಪಿ ಗೋವಿಂದರಾಜು, ಎಸ್‍ಐ ತಿರುಮಲ್ಲೇಶ್, ಡಾ.ಭಾರತಿ, ಡಾ.ರೇವಣ್ಣ ಇತರರಿದ್ದರು. ಚಿರತೆ ಸೆರೆಗೆ ತಜ್ಞರ ತಂಡ: ಇಂದು ರಾತ್ರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕನ್ಸರ್ವೇಟರ್ ಆಫ್ ಫಾರೆಸ್ಟ್ ಕಮಲಾ ಕರಿಕಾಳನ್, ಡಿಸಿಎಫ್ ಮಾಲತಿ ಅವರುಗಳು ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಕೂಡ ತಮ್ಮ ಸಲಹೆಗಳನ್ನು ಮುಂದಿಟ್ಟರು. ನಂತರ ಮಾತನಾಡಿದ ಕಮಲಾ ಕರಿಕಾಳನ್, ತಿ.ನರಸೀಪುರ ವ್ಯಾಪ್ತಿಯ ಆರ್‍ಎಫ್‍ಓ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿ, ಅವರ ವಿರುದ್ಧ ಇಲಾಖಾ ತನಿಖೆ ನಡೆಸಲಾಗುವುದು. ಅಲ್ಲದೇ ಚಿರತೆಗಳನ್ನು ಸೆರೆ ಹಿಡಿಯಲು 15 ತಜ್ಞರ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುವುದು. ಅತ್ಯಾವಶ್ಯವಾದರೆ ಚಿರತೆಯನ್ನು ಗುಂಡಿಟ್ಟು ಕೊಲ್ಲಲಾಗುವುದು. ಸಂತ್ರಸ್ತ ಕುಟುಂಬಕ್ಕೆ ಒಟ್ಟು 7.5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದ ಅವರು ಸ್ಥಳದಲ್ಲೇ 5 ಲಕ್ಷ ರೂ. ಪರಿಹಾರದ ಚೆಕ್ ಅನ್ನು ವಿತರಿಸಿ ಮರಣೋತ್ತರ ಪರಿಕ್ಷೆ ನಂತರ ಉಳಿದ 2.5 ಲಕ್ಷ ರೂ. ಪರಿಹಾರ ನೀಡಲಾಗುವುದು.

Translate »