ಏಕರೂಪ ನಾಗರಿಕ ಸಂಹಿತೆ ಜಾರಿ ಪ್ರಸ್ತಾಪ ಸಂವಿಧಾನದಲ್ಲೇ ಅವಕಾಶವಿಲ್ಲ
ಮೈಸೂರು

ಏಕರೂಪ ನಾಗರಿಕ ಸಂಹಿತೆ ಜಾರಿ ಪ್ರಸ್ತಾಪ ಸಂವಿಧಾನದಲ್ಲೇ ಅವಕಾಶವಿಲ್ಲ

December 2, 2022

ಮೈಸೂರು, ಡಿ.1(ಎಂಟಿವೈ)- ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲದ ಕಾರಣ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅಸಾಧ್ಯ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಬಿಜೆಪಿಗೆ ಲಾಭ ಆಗು ವುದೋ ಅಥವಾ ನಷ್ಟವಾಗುವುದೋ ನಮಗೆ ತಿಳಿಯದು. ಅದನ್ನು ಜಾರಿ ಮಾಡಲು ಹೊರಟರೆ ವ್ಯಾಪಕ ವಿರೋಧ ವ್ಯಕ್ತವಾಗುತ್ತದೆ. ಸಂವಿಧಾನದಲ್ಲಿ ಏನಿದೆಯೋ ಅದಕ್ಕೆ ನಾವು ಬದ್ಧವಾಗಿರಬೇಕು. ಆದರೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ನನ್ನ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.

ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಅನುಮತಿ ನೀಡಲಿಲ್ಲ. ಸಮುದ್ರಕ್ಕೆ ನೀರು ಹರಿಯುವುದನ್ನು ಬಯಸಿದ್ದಾರೆ. ಅಲ್ಲದೇ, ಕಾವೇರಿ ನೀರನ್ನು ಬಳಸಿಕೊಳ್ಳು ವುದಕ್ಕೆ ತಮಿಳುನಾಡು ಸರ್ಕಾರಕ್ಕೆ ಅನುಮತಿ ಕೊಟ್ಟಿ ದ್ದಾರೆ. ಸೇಲಂ ಸೇರಿ ಆಸುಪಾಸಿನ ಜಿಲ್ಲೆಗಳಲ್ಲಿ ಹೆಚ್ಚುವರಿ 4 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಗೆ ಈ ನೀರು ಬಳಕೆ ಯಾಗುತ್ತಿದೆ. ತಮಿಳುನಾಡಿನ ಎಐಎಡಿಎಂಕೆ ಪಕ್ಷದೊಂದಿಗೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಎಐಎಡಿಎಂಕೆಗೆ ಅನುಕೂಲವಾಗಲಿ ಎಂದು ಅಲ್ಲಿನ ನೀರಾ ವರಿ ಯೋಜನೆಗೆ ಅನುಮತಿ ಕೊಟ್ಟಿದ್ದಾರೆ. ಈ ವಿಚಾರ ವನ್ನು ಇಲ್ಲಿಗೆ ಬಿಡುವುದಿಲ್ಲ. ಮೇಕೆದಾಟು ವಿಚಾರವಾಗಿ ಬಹಳ ಹಿಂದೆ ಪ್ರಧಾನಿಗೆ ಪತ್ರ ಬರೆದಿದ್ದೆ. ಈ ಪತ್ರಕ್ಕೆ ಇದು ವರೆಗೂ ಪ್ರತಿಕ್ರಿಯೆ ನೀಡಿಲ್ಲ. ಮುಂಬರುವ ರಾಜ್ಯಸಭೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವೆ ಎಂದು ತಿಳಿಸಿದರು.

ಜನವರಿಯಿಂದ ಪ್ರವಾಸ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟಿಸಲು ಮುಂದಿನ ತಿಂಗಳಿಂದ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ. ನಾನೇ ಪ್ರಚಾರಕ್ಕೆ ಹೋಗುತ್ತೇನೆ. ನನಗೆ ನಂಬಿಕೆ ಇದೆ, ಈಗಾಗಲೇ ಕುಮಾರ ಸ್ವಾಮಿ ಸೇರಿದಂತೆ ಪಕ್ಷದ ನಾಯಕರು ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಪ್ರತಿ ಗ್ರಾಮಕ್ಕೆ ತೆರಳಿ ಮನೆ-ಮನೆಗೆ ಪಕ್ಷದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಪಕ್ಷದ ಪರವಾಗಿ ಕೆಲಸ ಮಾಡಲು ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದರು.

ದ್ವಂದ್ವದಲ್ಲಿದೆ: ಹಾಸನ ಜಿಲ್ಲೆ ಅರಸೀಕೆರೆಯ ಶಾಸಕ ಶಿವಲಿಂಗೇಗೌಡರ ವಿಚಾರ ಕುರಿತಂತೆ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ. ಇನ್ನು ಅಲ್ಲಿ ಗೊಂದಲ, ದ್ವಂದ್ವ ಇರುವುದರಿಂದ ಅಂತಿಮ ತೀರ್ಮಾನ ಪ್ರಕಟಿಸಿಲ್ಲ ಎಂದು ತಿಳಿಸಿದರು.

ಬೆದರಿಕೆಗೆ ಬಗ್ಗಲ್ಲ: ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ಆರ್ಭಟ ಹೆಚ್ಚಾಗಿದೆ. ಆತನಿಗೆ ಯಡಿಯೂರಪ್ಪ ಸರ್ಕಾರ ಸರ್ವ ಶಕ್ತಿ ಕೊಟ್ಟಿದೆ. ಸಾಕಷ್ಟು ಕೆಲಸ ಕೊಟ್ಟಿದ್ದಾರೆ. ಅದರಿಂದ ಭಾರೀ ಪ್ರಮಾಣದ ಹಣ ಸಂಪಾದಿಸಿದ್ದಾರೆ. ಅವರ ಶಕ್ತಿ ಎಷ್ಟಿದೆ ಎಂಬುದು ಗೊತ್ತಿದೆ. ಅದಕ್ಕೆ ಮೂಲ ಕಾರಣ ಯಡಿಯೂರಪ್ಪ ಹಾಗೂ ಅವರ ಮಕ್ಕಳೇ ಆಗಿದ್ದಾರೆ. ಸವಾಲು ಹಾಕುವುದು, ಬೆದರಿಕೆ ಮಾತುಗಳಿಗೆ ನಾವು ಬಗ್ಗುವುದಿಲ್ಲ. ಹಾಸನ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿ ಗಳ ಸಂಖ್ಯೆ ದೊಡ್ಡದಿದೆ. ಈ ಕುರಿತು ಹೆಚ್.ಡಿ. ಕುಮಾರಸ್ವಾಮಿ ಹಾಗೂ ಹೆಚ್.ಡಿ.ರೇವಣ್ಣ ಚರ್ಚಿಸಿ, ಅಂತಿಮ ನಿರ್ಧಾರ ಪ್ರಕಟಿಸುತ್ತಾರೆ ಎಂದರು.

ಪಟ್ಟಿ ಶಾಶ್ವತವಲ್ಲ: ಚುನಾವಣೆಗಾಗಿ ಜೆಡಿಎಸ್ ಬಿಡುಗಡೆ ಮಾಡಿರುವ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಶಾಶ್ವತವಲ್ಲ. ಆಯಾ ಸಮಯಕ್ಕೆ ಹಾಗೂ ವಾತಾವರಣಕ್ಕೆ ಅನುಗುಣವಾಗಿ ಪಟ್ಟಿ ಬದಲಾಗುತ್ತದೆ. ಇದಕ್ಕೆ ಸರ್ವೆ ವರದಿಯೂ ಅನ್ವಯವಾಗಲಿದೆ ಎಂದು ತಿಳಿಸಿದರು.

ನಂಜುಂಡೇಶ್ವರನ ಮೊರೆ: ನಾನು ಚಿಕ್ಕ ವಯಸ್ಸಿ ನಿಂದಲೂ ನಂಜನಗೂಡಿಗೆ ಬರುತ್ತಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ಕಿವಿ ಸಮಸ್ಯೆಯಾಗಿತ್ತು. ಎಷ್ಟೋ ವೈದ್ಯರಿಗೆ ತೋರಿಸಿದರೂ ಪ್ರಯೋಜನ ಆಗಲಿಲ್ಲ.

ಹಿತೈಷಿಗಳ ಸಲಹೆ ಮೇರೆಗೆ ಶ್ರೀಕಂಠೇಶ್ವರ ಸನ್ನಿಧಿಯಲ್ಲಿ ನೀಡುವ ಮೃತ್ತಿಕೆಯನ್ನು ಕಿವಿಗೆ ಹಚ್ಚಿದರೆ ಸಮಸ್ಯೆ ಬಗೆಹರಿಯಲಿದೆ. ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಫಲ ಕೊಡುತ್ತಾನೆ ಎಂದರು. ಅದರಂತೆ ಮಾಡಿದಾಗ ನೋವು ನಿವಾರಣೆ ಆಯಿತು ಎಂದು ಶ್ರೀಕಂಠೇಶ್ವರನ ದರ್ಶನಕ್ಕೆ ತಾವು ಬಂದಿರುವ ವಿಚಾರ ಪ್ರಸ್ತಾಪಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಸಾ.ರಾ.ಮಹೇಶ್, ಅಶ್ವಿನ್‍ಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹಾಗೂ ಇನ್ನಿತರರು ಇದ್ದರು.

Translate »