ಮೈಸೂರು ರಿಂಗ್ ರಸ್ತೆ ಎಲ್‍ಇಡಿ ಬೆಳಕಲ್ಲಿ ಈಗ ಕಂಗೊಳಿಸುತ್ತಿದೆ
ಮೈಸೂರು

ಮೈಸೂರು ರಿಂಗ್ ರಸ್ತೆ ಎಲ್‍ಇಡಿ ಬೆಳಕಲ್ಲಿ ಈಗ ಕಂಗೊಳಿಸುತ್ತಿದೆ

December 2, 2022

ಮೈಸೂರು,ಡಿ.1(ಆರ್‍ಕೆ, ಜಿಎ)-ಕಗ್ಗತ್ತಲಲ್ಲಿ ಮುಳುಗಿದ್ದ ಮೈಸೂರಿನ 42.5 ಕಿ.ಮೀ. ರಿಂಗ್ ರಸ್ತೆ ಇನ್ನು ಮುಂದೆ ಎಲ್‍ಇಡಿ ಬಲ್ಬ್‍ಗಳ ಬೆಳಕಿನಲ್ಲಿ ಪ್ರಜ್ವಲಿ ಸಲಿದೆ. ರಿಂಗ್ ರಸ್ತೆಯ ಶೇ.50ರಷ್ಟು ಭಾಗದ ದೀಪಗಳಿಗೆ ಗುರುವಾರ ಸಂಜೆ ಮಣಿ ಪಾಲ್ ಆಸ್ಪತ್ರೆ ಜಂಕ್ಷನ್‍ನಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಚಾಲನೆ ನೀಡಿದರು.

ಮಣಿಪಾಲ್ ಆಸ್ಪತ್ರೆ ಜಂಕ್ಷನ್‍ನಿಂದ ಹಂಚ್ಯಾ-ಸಾತಗಳ್ಳಿ, ದೇವೇಗೌಡ ಸರ್ಕಲ್, ತಿ.ನರಸೀಪುರ ಜಂಕ್ಷನ್, ಬಂಡೀಪಾಳ್ಯ ಎಪಿಎಂಸಿ ಬಳಿಯ ನಂಜನಗೂಡು ರಸ್ತೆ ಜಂಕ್ಷನ್‍ವರೆಗಿನ ರಿಂಗ್ ರಸ್ತೆಯಲ್ಲಿ ಇಂದು ಎಲ್‍ಇಡಿ ಬಲ್ಬ್‍ಗಳ ಬೊಂಬಾಟ್ ಬೆಳಕು ಚೆಲ್ಲಿದ್ದು, ಡಿ.10ರೊಳಗಾಗಿ ಉಳಿದ ಶೇ.50ರಷ್ಟು ರಿಂಗ್ ರಸ್ತೆಯಲ್ಲಿ ಎಲ್‍ಇಡಿ ಬಲ್ಬ್‍ಗಳು ಬೆಳಗಲಿವೆ.

ಮೈಸೂರು ರಿಂಗ್ ರಸ್ತೆಯಲ್ಲಿ ಈ ಹಿಂದೆ ದಸರಾ ಮಹೋತ್ಸವದ ವೇಳೆ ಬೀದಿದೀಪಗಳಿಗೆ ಬಲ್ಬ್‍ಗಳನ್ನು ಅಳವಡಿ ಸಲಾಗುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಅದು ದುರಸ್ತಿಗೊಳಗಾಗಿ ವರ್ಷವಿಡೀ ರಿಂಗ್ ರಸ್ತೆ ಕಗ್ಗತ್ತಲಲ್ಲಿ ಮುಳುಗಿರುತ್ತಿತ್ತು. ಕತ್ತಲೆಯನ್ನೇ ಬಳಸಿಕೊಂಡು ದುಷ್ಕರ್ಮಿಗಳು ಪದೇ ಪದೆ ರಿಂಗ್ ರಸ್ತೆಯಲ್ಲಿ ಸಂಚರಿಸುವ ವಾಹನಗಳ ತಡೆದು, ಚಾಲಕರನ್ನು ಸುಲಿಗೆ ಮಾಡುತ್ತಿದ್ದರು. ರಿಂಗ್ ರಸ್ತೆಯ ಕೆಲವೆಡೆ ಕತ್ತಲೆಯಲ್ಲಿ ಕುಡುಕರು ಪಾನಗೋಷ್ಠಿ ನಡೆಸುತ್ತಿದ್ದರು. ಈ ರಸ್ತೆಯಲ್ಲಿ ಸಂಚರಿಸಲು ಪ್ರಮುಖವಾಗಿ ದ್ವಿಚಕ್ರ ವಾಹನ ಸವಾರರು ಹೆದರುವಂತಹ ಪರಿಸ್ಥಿತಿ ಇತ್ತು. ಇದನ್ನು ಮನಗಂಡ ಸಂಸದ ಪ್ರತಾಪ್ ಸಿಂಹ ರಿಂಗ್ ರಸ್ತೆಯಲ್ಲಿ ಶಾಶ್ವತವಾಗಿ ವರ್ಷವಿಡೀ ಎಲ್‍ಇಡಿ ಬಲ್ಬ್‍ಗಳು ಪ್ರಜ್ವಲಿಸುವ ಮೂಲಕ ವಾಹನ ಸವಾರರ ಭಯದ ವಾತಾವರಣವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮುಡಾ ಮತ್ತು ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ, ದಸರಾಗೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ರಿಂಗ್ ರಸ್ತೆಯಲ್ಲಿ ಅಂಡರ್ ಗ್ರೌಂಡ್ ಕೇಬಲ್ ಲೈನ್ ಮತ್ತು ಎಲ್‍ಇಡಿ ಬಲ್ಬ್ ಅಳವಡಿಕೆ ಕಾಮಗಾರಿಗೆ ಚಾಲನೆ ಕೊಡಿಸಿದ್ದರು.

ಈ ಕಾಮಗಾರಿಗೆ ತಗಲುವ ವೆಚ್ಚ 12 ಕೋಟಿ ರೂ.ಗಳನ್ನು ಮುಡಾದಿಂದ ಭರಿಸುವುದು ಹಾಗೂ ವಿದ್ಯುದ್ದೀಪಗಳ ನಿರ್ವಹಣೆಯ ಹೊಣೆಯನ್ನು ನಗರ ಪಾಲಿಕೆ ವಹಿಸಿಕೊಳ್ಳುವುದು ಎಂದು ನಿರ್ಧಾರವಾಗಿತ್ತು. ಅದರಂತೆ ಇದೀಗ ರಿಂಗ್ ರಸ್ತೆಯ ಶೇ.50ರಷ್ಟು ಭಾಗದಲ್ಲಿ ಎಲ್‍ಇಡಿ ಬಲ್ಬ್‍ಗಳು ಇಂದು ರಾತ್ರಿಯಿಂದ ಬೆಳಗುತ್ತಿವೆ. ಇನ್ನುಳಿದಂತೆ ಮಣಿಪಾಲ್ ಆಸ್ಪತ್ರೆ ಜಂಕ್ಷನ್‍ನಿಂದ ಕೆಆರ್‍ಎಸ್ ರಸ್ತೆ, ಹಿನಕಲ್ ಜಂಕ್ಷನ್, ಬೋಗಾದಿ, ದಟ್ಟಗಳ್ಳಿ ಹಾಗೂ ಹೆಚ್.ಡಿ.ಕೋಟೆ ಜಂಕ್ಷನ್ ಮೂಲಕ ನಂಜನಗೂಡು ಜಂಕ್ಷನ್‍ವರೆಗಿನ ಎಲ್‍ಇಡಿ ಬಲ್ಬ್‍ಗಳು ಡಿಸೆಂಬರ್ 10ರೊಳಗೆ ಬೆಳಗಲಿವೆ ಎಂದು ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ. ಒಟ್ಟು 42.5 ಕಿ.ಮೀ. ಉದ್ದದ ಮೈಸೂರು ರಿಂಗ್ ರಸ್ತೆಯಲ್ಲಿ 20 ಹೈಮಾಸ್ಟ್ ಲೈಟ್‍ಗಳನ್ನು ಅಳವಡಿಸಲಾಗುತ್ತಿದೆ. ಶಿಥಿಲಾವಸ್ಥೆಯಲ್ಲಿದ್ದ 87 ವಿದ್ಯುತ್ ಕಂಬಗಳನ್ನು ಬದಲಿಸಲಾಗಿದೆ. ಹಾಗೂ ಕಂಟ್ರೋಲ್ ಯೂನಿಟ್ ಅಳವಡಿಸುವ ಕಾರ್ಯವೂ ಪ್ರಗತಿಯಲ್ಲಿದ್ದು, ಡಿಸೆಂಬರ್ 10ರೊಳಗೆ ಅದು ಪೂರ್ಣಗೊಳ್ಳಲಿದೆ ಎಂದು ಇಂದು ಬೆಳಗ್ಗೆ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ನಗರ ಪಾಲಿಕೆ ಕಚೇರಿಯಲ್ಲಿ ನಡೆದ ಪಾಲಿಕೆಯ ವಿದ್ಯುತ್ ವಿಭಾಗದ ಅಧಿಕಾರಿಗಳ ಸಭೆಯ ಬಳಿಕ ಪಾಲಿಕೆ ಆಯುಕ್ತರು ತಿಳಿಸಿದರು.

Translate »