ನಿಮಗೆ ಸಾಲವನ್ನೂ ಕೊಡಿಸಿ ಖಾತೆಗೆ ಕನ್ನ ಹಾಕುವ ಖದೀಮರಿದ್ದಾರೆ!
News

ನಿಮಗೆ ಸಾಲವನ್ನೂ ಕೊಡಿಸಿ ಖಾತೆಗೆ ಕನ್ನ ಹಾಕುವ ಖದೀಮರಿದ್ದಾರೆ!

December 3, 2022

ರಾಮನಗರ, ಡಿ. 2- ಮೊಬೈಲ್‍ಗೆ ಯಾವುದಾದರೂ ಲಿಂಕ್ ಕಳುಹಿಸಿ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಆನ್‍ಲೈನ್ ಮೂಲಕ ಲೂಟಿ ಮಾಡುತ್ತಿದ್ದ ವಂಚಕರು ಇದೀಗ ನಿಮ್ಮ ಖಾತೆಯಲ್ಲಿ ಹಣವಿಲ್ಲದಿದ್ದರೂ ಸರಿಯೇ ಯಾವುದಾದರೂ ಬ್ಯಾಂಕ್‍ನಿಂದ ನಿಮಗೆ ಸಾಲ ಕೊಡಿಸಿ, ಆ ಹಣವನ್ನು ಲೂಟಿ ಮಾಡುವ ಹೊಸ ಕುತಂತ್ರಕ್ಕೆ ಕೈ ಹಾಕಿದ್ದಾರೆ.

ಇಂತಹ ಒಂದು ಪ್ರಕರಣ ರಾಮನಗರ ಜಿಲ್ಲೆ ಬಿಡದಿಯಿಂದ ವರದಿಯಾಗಿದೆ. ಬಿಡದಿಯ ಕಾರ್ಖಾನೆಯೊಂದರ ಉದ್ಯೋಗಿಯ ಬ್ಯಾಂಕ್ ಖಾತೆಗೆ 24 ಲಕ್ಷ ರೂ. ಸಾಲ ವನ್ನು ಜಮೆ ಮಾಡಿಸಿ, ಕೇವಲ 20 ನಿಮಿಷ ದಲ್ಲಿ 7 ಲಕ್ಷ ರೂ.ಗಳನ್ನು ವಂಚಕರು ಡ್ರಾ ಮಾಡಿಕೊಂಡಿದ್ದಾರೆ. ಸಕಾಲದಲ್ಲಿ ಕಾರ್ಖಾನೆ ಉದ್ಯೋಗಿ ಎಚ್ಚೆತ್ತುಕೊಂಡು ತನ್ನ ಖಾತೆಯನ್ನು ಬ್ಲಾಕ್ ಮಾಡಿದ್ದರಿಂದ ಅವರ ಖಾತೆಯಲ್ಲಿ 17 ಲಕ್ಷ ರೂ. ಉಳಿದುಕೊಂಡಿದೆ. ಆದರೆ, ಅರ್ಜಿ ಸಲ್ಲಿಸದೆಯೇ ಖಾಸಗಿ ಬ್ಯಾಂಕ್‍ವೊಂದು ಅವರ ಖಾತೆಗೆ 24 ಲಕ್ಷ ರೂ.ಗಳ ಸಾಲ ಜಮೆ ಮಾಡಿದ್ದು ಹೇಗೆ? ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ವಿವರ: ಬಿಡದಿಯ ಕಾರ್ಖಾನೆಯೊಂದರ ಉದ್ಯೋಗಿ ಮಂಜುನಾಥ್(41) ಎಂಬುವರು ಪೂನಾದ ಐಸಿಐಸಿಐ ಬ್ಯಾಂಕ್‍ನಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ. ಅದು ಅವರ ಸ್ಯಾಲರಿ ಖಾತೆಯಾಗಿದ್ದು, ಕಂಪನಿ ಯಿಂದ ವೇತನದ ಹಣ ಈ ಖಾತೆಗೆ ಜಮೆಯಾಗುತ್ತದೆ. ನವೆಂಬರ್ 27ರಂದು ಸಂಜೆ ಮೊಬೈಲ್‍ಗೆ “ವಿದ್ಯುತ್ ಬಿಲ್ ಮಾಡದ ಕಾರಣ ನಿಮ್ಮ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಆದ್ದರಿಂದ ಕೂಡಲೇ ಬಾಕಿ ಇರುವ 15 ರೂ. ಪಾವತಿಸಿ” ಎಂಬ ಸಂದೇಶದೊಂದಿಗೆ 6291349260 ನಂಬರ್‍ನಿಂದ ಲಿಂಕ್‍ವೊಂದನ್ನು ರವಾನಿಸಲಾಗಿದೆ. ಮಂಜುನಾಥ್ ಅವರು ಲಿಂಕ್ ಮೇಲೆ ಕ್ಲಿಕ್ ಮಾಡಿ 15 ರೂ. ವರ್ಗಾ ವಣೆ ಮಾಡಿದ್ದಾರೆ. ಅದಾದ ಸುಮಾರು 2 ಗಂಟೆಗಳ ಕಾಲ ಅವರ ಮೊಬೈಲ್ ಬ್ಲಾಕ್ ಆಗಿತ್ತು.

ರಾತ್ರಿ 8 ಗಂಟೆ ಸಮಯದಲ್ಲಿ ಅವರು ಖಾತೆ ಹೊಂದಿದ್ದ ಐಸಿಐಸಿಐ ಬ್ಯಾಂಕ್ ಖಾತೆಗೆ 24 ಲಕ್ಷ ರೂ. ಜಮೆಯಾಗಿರುವ ಬಗ್ಗೆ ಅವರ ಮೇಲ್‍ಗೆ ಸಂದೇಶ ರವಾನೆ ಯಾಗಿದೆ. ಐಸಿಐಸಿಐ ಬ್ಯಾಂಕ್ ಅವರಿಗೆ ಈ ಹಣವನ್ನು ಸಾಲವಾಗಿ ಮಂಜೂರು ಮಾಡಿ ಜಮೆ ಮಾಡಿರುವುದಾಗಿ ಮೇಲ್ ನಲ್ಲಿ ವಿವರಿಸಿದ್ದರಿಂದ ತಾವು ಸಾಲಕ್ಕೆ ಅರ್ಜಿಯೇ ಸಲ್ಲಿಸದೆ ಹೇಗೆ ಹಣ ಜಮೆಯಾಗಿದೆ ಎಂದು ಗಾಬರಿಯಾದ ಅವರು, ತಕ್ಷಣವೇ ಬಿಡದಿಯ ಎಟಿಎಂಗೆ ಹೋಗಿ ಚೆಕ್ ಮಾಡಿ ದಾಗ ಅವರ ಖಾತೆಗೆ 24 ಲಕ್ಷ ರೂ. ಜಮೆಯಾಗಿರುವುದು ಖಾತರಿಯಾಗಿದೆ.

ಅಂದು ಭಾನುವಾರವಾಗಿದ್ದರಿಂದ ಅವರು ಬ್ಯಾಂಕ್ ಅನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಹೀಗಾಗಿ ಸೋಮವಾರ ಬ್ಯಾಂಕ್ ಅನ್ನು ಸಂಪರ್ಕಿಸೋಣ ಎಂದು ಅವರು ಯೋಚಿಸುತ್ತಿರುವಾಗಲೇ ಅವರ ಖಾತೆಯಿಂದ ಒಮ್ಮೆಗೆ ಲಕ್ಷ ರೂ.ಗಳಂತೆ ಕಡಿತಗೊಳ್ಳುತ್ತಿರುವ ಮೆಸೇಜ್‍ಗಳು ಬರತೊಡಗಿದವು. ಅಂದರೆ, ಕೇವಲ 20 ನಿಮಿಷದಲ್ಲಿ 7 ಬಾರಿ ಒಮ್ಮೆಗೆ ಲಕ್ಷ ರೂ.ಗಳಂತೆ 7 ಲಕ್ಷ ರೂ. ಕಡಿತ ಗೊಂಡಾಗ ಗಾಬರಿಯಾದ ಅವರು, ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಲು ತಮ್ಮ ಮೊಬೈಲ್‍ನಿಂದ ಪ್ರಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗದ ಕಾರಣ ಪತ್ನಿಯ ಮೊಬೈಲ್ ಮೂಲಕ ಐಸಿಐಸಿಐ ಬ್ಯಾಂಕ್ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿ, ಖಾತೆಯನ್ನು ಬ್ಲಾಕ್ ಮಾಡಿದ್ದಾರೆ.

ಸೋಮವಾರ ಮಂಜುನಾಥ್ ಬ್ಯಾಂಕ್ ಅನ್ನು ಸಂಪರ್ಕಿಸಿ ತಾನು ಅರ್ಜಿಯೇ ಸಲ್ಲಿಸದೇ ಸಾಲ ಮಂಜೂರಾಗಿ ಹಣ ತಮ್ಮ ಖಾತೆಗೆ ಜಮೆಯಾಗಿದ್ದು ಹೇಗೆ? ಎಂದು ವಿಚಾರಿಸಿದಾಗ, ಬ್ಯಾಂಕ್ ಸಿಬ್ಬಂದಿ ತಮ್ಮ ಬ್ಯಾಂಕ್‍ನಲ್ಲಿ ನಿಮ್ಮ ಖಾತೆ ಇದ್ದು ದ್ದರಿಂದ ಅರ್ಜಿ ಬಂದ 3 ನಿಮಿಷದಲ್ಲಿ ನಿಮಗೆ ಸಾಲ ಮಂಜೂರಾಗಿ ಹಣ ಖಾತೆಗೆ ಜಮಾ ಮಾಡಲಾಗಿದೆ ಎಂದು ಉತ್ತರಿಸಿದರಂತೆ. ಅರ್ಜಿ ನಮೂನೆ ಯನ್ನು ಪರಿಶೀಲಿಸಿದಾಗ ಅದನ್ನು ಸಮರ್ಪಕವಾಗಿ ಭರ್ತಿ ಕೂಡ ಮಾಡಿರಲಿಲ್ಲ ಎಂದು ಮಂಜುನಾಥ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ವಂಚಕರು ತಮ್ಮ ಮೊಬೈಲ್ ಅನ್ನು ಹ್ಯಾಕ್ ಮಾಡಿ ಬ್ಯಾಂಕ್‍ಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿ, ಹಣ ಜಮೆ ಯಾದ ತಕ್ಷಣ ಅದನ್ನು ಡ್ರಾ ಮಾಡಿ ಕೊಳ್ಳಲು ಆರಂಭಿಸಿದ್ದಾರೆ. ತಾನು ಸ್ವಲ್ಪ ಯಾಮಾರಿದ್ದರೆ ಎಲ್ಲಾ 24 ಲಕ್ಷ ರೂ.ಗಳನ್ನು ಅವರು ಡ್ರಾ ಮಾಡಿಕೊಳ್ಳುತ್ತಿದ್ದರು. ಅನಾ ವಶ್ಯಕವಾಗಿ ನಾನು ಸಾಲಗಾರನಾಗುತ್ತಿದ್ದೆ ಎಂದು ಹೇಳಿದರಲ್ಲದೆ, ಸಮರ್ಪಕವಾದ ಅರ್ಜಿಯೂ ಇಲ್ಲದೆ, ಅರ್ಜಿಯಲ್ಲಿ ಆಧಾರ್ ಸಂಖ್ಯೆ, ವಿಳಾಸ ಸೇರಿದಂತೆ ಯಾವುದೇ ವಿವರಗಳನ್ನು ನಮೂದಿಸದೇ ಇದ್ದರೂ ಕೆಲವೇ ನಿಮಿಷಗಳಲ್ಲಿ ಅದೂ ಬ್ಯಾಂಕ್ ರಜಾ ದಿನವಾದ ಭಾನುವಾರದಂದು ಬ್ಯಾಂಕ್‍ನ ಕೆಲಸದ ವೇಳೆಯೂ ಅಲ್ಲದ ರಾತ್ರಿ 8 ಗಂಟೆಯಲ್ಲಿ ಹೇಗೆ 24 ಲಕ್ಷ ರೂ. ಸಾಲದ ಹಣ ಜಮೆ ಆಯಿತು ಎಂಬುದು ಅರ್ಥ ವಾಗುತ್ತಿಲ್ಲ ಎಂದು ತಿಳಿಸಿದ ಮಂಜುನಾಥ್ ಅವರು, ಈ ಸಂಬಂಧ ರಾಮನಗರ ಜಿಲ್ಲಾ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Translate »