ಮೈಸೂರು-ಬೆಂಗಳೂರು ಇ-ಬಸ್ ಸೇವೆಗೆ ಸಿದ್ಧತೆ
ಮೈಸೂರು

ಮೈಸೂರು-ಬೆಂಗಳೂರು ಇ-ಬಸ್ ಸೇವೆಗೆ ಸಿದ್ಧತೆ

December 3, 2022

ಮೈಸೂರು, ಡಿ.2(ಆರ್‍ಕೆ)- ಬೆಂಗ ಳೂರು ನಗರದಲ್ಲಿ ಯಶಸ್ವಿಯಾಗಿರುವ ಇ-ಬಸ್ (ಎಲೆಕ್ಟ್ರಿಕ್ ಬಸ್) ಸೇವೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಚಿಂತನೆ ನಡೆಸಿ ರುವ ಕೆಎಸ್‍ಆರ್‍ಟಿಸಿ, ಮೊದಲಿಗೆ ಪೈಲಟ್ ಪ್ರಾಜೆಕ್ಟ್ ಆಗಿ ಮೈಸೂರು-ಬೆಂಗಳೂರು ನಡುವೆ ಇ-ಬಸ್ ಸಂಚಾರಕ್ಕೆ ಸಿದ್ಧತೆ ನಡೆ ಸಿದ್ದು, ಅದಕ್ಕೆ ಪೂರಕವಾಗಿ ಮೈಸೂರಿನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸುವ ಕಾಮಗಾರಿ ಕೈಗೆತ್ತಿಕೊಂಡಿದೆ. ಹೈದರಾಬಾದ್ ಮೂಲದ ಒಲೆಕ್ಟ್ರಾ ಗ್ರೀನ್‍ಟೆಕ್ ಲಿಮಿಟೆಡ್ ಸಂಸ್ಥೆಯು ಪ್ರೊಟೋ ಟೈಪ್ ಮಾದರಿಯ ಇ-ಬಸ್‍ಗಳನ್ನು ಡಿಸೆಂಬರ್ 15ರೊಳಗೆ ಪೂರೈಸುವ ಸಾಧ್ಯತೆಯಿದ್ದು, ಡಿ.18ರಂದು ಮೈಸೂರು-ಬೆಂಗಳೂರು ನಡುವೆ ಪ್ರಾಯೋಗಿಕವಾಗಿ ಇ-ಬಸ್ ಸಂಚಾರ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. 2023ರ ಫೆಬ್ರವರಿ ಅಂತ್ಯದೊಳಗೆ 25 ಇ-ಬಸ್‍ಗಳನ್ನು ಖರೀದಿಸಲಿದೆ ಎಂದು ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಶಿವಮೊಗ್ಗ, ಹಾಸನ, ಚಿತ್ರದುರ್ಗ, ತುಮಕೂರು, ಧಾರವಾಡ, ಗುಲ್ಬರ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಇ-ಬಸ್‍ಗಳ ಸಂಚಾರಕ್ಕೆ ಚಿಂತನೆ ನಡೆಸಿದ್ದು, ಅದಕ್ಕಾಗಿ ಸದರಿ ಜಿಲ್ಲಾ ಕೇಂದ್ರಗಳ ಎಲ್ಲಾ ಬಸ್ ನಿಲ್ದಾಣಗಳಲ್ಲೂ ಚಾರ್ಜಿಂಗ್ ಸ್ಟೇಷನ್‍ಗಳನ್ನು ಸ್ಥಾಪಿಸುವಂತೆ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಕರಿಗೆ ಸೂಚನೆ ನೀಡಿದೆ.

ಇ-ಬಸ್ ಸೇವೆಗೆ ಬೆಂಗಳೂರು-ಮೈಸೂರು ನಡುವಿನ ಮಾರ್ಗಕ್ಕೆ ಹೆಚ್ಚು ಬೇಡಿಕೆ ಇದೆ ಎಂಬುದನ್ನು ಸಮೀಕ್ಷೆಯಿಂದ ಅರಿತಿರುವ ಸಾರಿಗೆ ಸಂಸ್ಥೆಯು, ಈ ಮಾರ್ಗಕ್ಕೆ ಹೆಚ್ಚು ಬಸ್‍ಗಳನ್ನು ಒದಗಿಸಲು ಆಸಕ್ತಿ ತೋರಿದೆ. 10 ಪಥದ ರಸ್ತೆ ನಿರ್ಮಾಣವಾಗುತ್ತಿರುವುದರಿಂದ ಯಾವುದೇ ಅಡೆ-ತಡೆ ಇಲ್ಲದೇ ಸರಾಗವಾಗಿ ಸಾಗಬಹುದು ಎಂಬುದನ್ನು ಅರಿತ ಸಂಸ್ಥೆಯು, ಈ ಎರಡೂ ನಗರಗಳ ನಡುವೆ ಇ-ಬಸ್ ಸೇವೆ ಒದಗಿಸಲು ಸರ್ವ ರೀತಿಯಲ್ಲಿ ತಯಾರಿ ನಡೆಸುತ್ತಿದೆ. ಮೈಸೂರು-ಬೆಂಗಳೂರು ನಡುವೆ ಎಲೆಕ್ಟ್ರಿಕ್ ಬಸ್‍ಗಳನ್ನು ಓಡಿಸುವ ಬಗ್ಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಇನ್ನೂ ಇ-ಬಸ್‍ಗಳು ಬಂದಿಲ್ಲ. ಆದರೂ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಮೈಸೂರಿನ ಸಬರ್ಬನ್ ಬಸ್‍ಸ್ಟ್ಯಾಂಡ್ ನಲ್ಲಿ ಚಾರ್ಜಿಂಗ್ ಸ್ಟೇಷನ್ ನಿರ್ಮಿಸುತ್ತಿದ್ದೇವೆ. ಅಧಿಕೃತ ಆದೇಶ ಬಂದ ನಂತರ ಇ-ಬಸ್‍ಗಳನ್ನು ಆಪರೇಟ್ ಮಾಡುತ್ತೇವೆ ಎಂದು ಕೆಎಸ್‍ಆರ್‍ಟಿಸಿ ಮೈಸೂರು ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಅಶೋಕ್‍ಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

Translate »