ವಿದ್ಯುತ್‍ದರ ಇಳಿಕೆಗೆ ನಿರ್ಧಾರ
News

ವಿದ್ಯುತ್‍ದರ ಇಳಿಕೆಗೆ ನಿರ್ಧಾರ

December 3, 2022

ಬೆಂಗಳೂರು, ಡಿ.2(ಕೆಎಂಶಿ)- ಹಾಲು, ಮೊಸರು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಉಂಟಾಗುವ ಅಪಾಯವನ್ನು ಅರಿತಿರುವ ಸರ್ಕಾರ ಇತ್ತೀಚೆಗೆ ಹೆಚ್ಚಳ ಮಾಡಲಾದ ವಿದ್ಯುತ್ ದರ ಇಳಿಸಲು ಮುಂದಾಗಿದೆ.
ನೂತನ ವರ್ಷಾರಂಭಕ್ಕೆ ಮೊದಲೇ ವಿದ್ಯುತ್ ದರ ಇಳಿಸಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡುವ ಪ್ರಸ್ತಾಪವನ್ನು ಇಂಧನ ಇಲಾಖೆ ಸಿದ್ಧಪಡಿಸಿದೆ. ಗೃಹ ಬಳಕೆಯೂ ಸೇರಿದಂತೆ ಎಲ್ಲ ಬಗೆಯ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಇಂಧನ ದರ ಕಡಿತಕ್ಕೆ ಗಂಭೀರ ಚಿಂತನೆ ನಡೆಸಿದ್ದು, ಬಳಕೆದಾರರ ಶುಲ್ಕವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಪ್ರತಿ ಯುನಿಟ್‍ಗೆ 70 ಪೈಸೆಯಿಂದ 2 ರೂ.ವರೆಗೂ ಶುಲ್ಕ ಇಳಿಕೆಯಾಗುವ ನಿರೀಕ್ಷೆ ಇದೆ. ನಾಲ್ಕು ರೂ. ಹೆಚ್ಚಳಕ್ಕೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿದ್ದರೂ ಗ್ರಾಹಕರ ಕೆಂಗಣಿಗೆ ಗುರಿ ಯಾಗಬೇಕು ಎಂಬ ಕಾರಣಕ್ಕೆ ಹಾಲಿನ ದರವನ್ನು ಎರಡು ರೂ. ಹೆಚ್ಚಿಸಲು ಅನುಮತಿ ನೀಡಿತ್ತು.

ಚುನಾವಣೆ ಹೊಸ್ತಿಲಲ್ಲಿ ವಿಪಕ್ಷಗಳಿಗೆ ಅಸ್ತ್ರವಾಗಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗುವುದನ್ನು ತಪ್ಪಿಸಲು ಬೆಲೆ ಏರಿಕೆಗೆ ಕಡಿವಾಣ ಹಾಕುತ್ತಿದೆ. ಡೀಸೆಲ್ ಬೆಲೆ ಏರಿಕೆಯಾದರೂ ಬಸ್ ಪ್ರಯಾಣ ದರ ಹೆಚ್ಚಿಸದೇ ಇರು ವುದು ಇದೇ ಕಾರಣಕ್ಕೆ. ರಾಜ್ಯದಲ್ಲಿ ಆಡಳಿತ ಪರವಾದ ಅಲೆ ಉಂಟು ಮಾಡಲು ಹರ ಸಾಹಸ ಮಾಡುತ್ತಿರುವ ಸರ್ಕಾರ ಇಂಧನ ದರ ಇಳಿಸಲು ಮುಂದಾಗಿದೆ. ಪ್ರತಿ ವರ್ಷ ನಡೆಸುವ ವಾರ್ಷಿಕ ದರ ಪರಿಷ್ಕರಣೆಯಲ್ಲಿ ವಿದ್ಯುತ್ ಶುಲ್ಕ ಹೆಚ್ಚಳದಿಂದ ಗ್ರಾಹಕರ ಮೇಲೆ ಹೊರೆ ಹೇರಲಾಗುತ್ತಿದೆ ಎಂಬ ಆರೋಪದಿಂದ ಮುಕ್ತವಾಗಲು ಇಂಧನ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಸರಬ ರಾಜು ಕಂಪನಿಗಳಿಂದ ಕೆಇಆರ್‍ಸಿಗೆ ಸಲ್ಲಿಸುವ ಪ್ರಸ್ತಾವನೆ ಯಲ್ಲಿ ಬಳಕೆದಾರರ ಶುಲ್ಕವನ್ನು ಕಡಿಮೆ ಮಾಡಿದ ದರಪಟ್ಟಿ ಯನ್ನು ಸಲ್ಲಿಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಇದು ಕೇವಲ ಗೃಹ ಬಳಕೆ ಗ್ರಾಹಕರಿಗೆ ಮಾತ್ರ ವಲ್ಲ, ಎಚ್ ಟಿ, ಕೈಗಾರಿಕೆ, ವಾಣಿಜ್ಯ ಮತ್ತು ಎಲ್ ಟಿ ಗ್ರಾಹಕ ರಿಗೂ ಅನ್ವಯವಾಗಲಿದೆ. ವಾಣಿಜ್ಯ ಬಳಕೆದಾರರಿಗೆ ವಿಧಿಸಿದ್ದ ಕ್ರಾಸ್ ಸಬ್ಸಿಡಿ ಗ್ರಾಹಕರಿಗೆ ಕಿರಿಕಿರಿ ಉಂಟಾ ಗುವ ಹಿನ್ನೆಲೆಯಲ್ಲಿ ಅವರು ಗ್ರಿಡ್ ತೊರೆಯುತ್ತಿದ್ದರು.

ಹೀಗಾಗಿ ಎಚ್.ಟಿ.ಗ್ರಾಹಕರನ್ನು ಉಳಿಸಿಕೊಳ್ಳಲು ಕ್ರಾಸ್ ಸಬ್ಸಿಡಿಯನ್ನು ಸಡಿಲಿಸಲು ಬೆಸ್ಕಾಂ ವ್ಯಾಪ್ತಿಯಲ್ಲಿ ಹೊಸ ಪ್ರಸ್ತಾಪ ಸಲ್ಲಿಕೆಯಾಗಿದ್ದು, ಪ್ರತ್ಯೇಕ ಶುಲ್ಕ ಪದ್ಧತಿಯನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿದು ಬಂದಿದೆ. ಇಂಧನ ಇಲಾಖೆ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಗ್ರಾಮೀಣ ವಿದ್ಯುತ್ ಬಳಕೆದಾರರಿಗೆ ತುಸು ರಿಯಾಯಿತಿ ನೀಡುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಗ್ರಾಹಕರಿಗೆ ಬಳಕೆದಾರರ ಶುಲ್ಕದಲ್ಲಿ 25 ಪೈಸೆಯಷ್ಟು ರಿಯಾಯಿತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. 50 ಯುನಿಟ್‍ವರೆಗೆ ಲೈಫ್‍ಲೈನ್ ಬಳಕೆಯ ಎಲ್‍ಟಿ 2 (ಎ1) ಹಾಗೂ
ಎಲ್‍ಟಿ 2(ಎ2) ಗ್ರಾಹಕರಿಗೆ ಈಗ ಪ್ರತಿ ಯುನಿಟ್‍ಗೆ ವಿಧಿಸುತ್ತಿದ್ದ 4.15 ರೂ ಹಾಗೂ 4.05 ರೂ. ಶುಲ್ಕವನ್ನು 3.6 ರೂ.ಗೆ ಇಳಿಸಲು ಚಿಂತಿಸಲಾಗಿದೆ. 50ರಿಂದ 200 ಯುನಿಟ್‍ವರೆಗಿನ ಬಳಕೆಗೆ ಈ ವರೆಗೆ ವಿಧಿಸುತ್ತಿದ್ದ 2 ಸ್ಲ್ಯಾಬ್‍ಗಳನ್ನು ಒಂದಕ್ಕೆ ಇಳಿ ಸಲು ನಿರ್ಧರಿಸಲಾಗಿದ್ದು, 5.4 ರೂ. ಪ್ರತಿ ಯುನಿಟ್ ಸರಾಸರಿ ಬಳಕೆದಾರರ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಇದರಿಂದ ಪ್ರತಿ ಯುನಿಟ್‍ಗೆ ಸರಾಸರಿ 2 ರೂ.ವರೆಗೂ ಇಳಿಕೆ ಮಾಡುವುದಕ್ಕೆ ಸಾಧ್ಯವಿದೆ ಎಂದು ಹೇಳಲಾಗುತ್ತಿದೆ. 200 ಯುನಿಟ್ ಹಾಗೂ ನಂತರದ ಬಳಕೆದಾರರಿಗೆ ಈಗಿರುವ 8.20 ಹಾಗೂ 7.70 ರೂ.ದರವನ್ನು ಏಕೀಕೃತಗೊಳಿಸಿ 7 ರೂ.ಗೆ ಇಳಿಸಲಾಗುತ್ತದೆ ಎಂದು ತಿಳಿದುಬಂದಿದೆ. ಇದರ ಜತೆಗೆ ಎಚ್‍ಟಿ ಗ್ರಾಹಕರಿಗೆ ಸಮಯಾಧಾರಿತ ಶುಲ್ಕ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸ ಲಾಗುತ್ತಿದೆ. ದಿನದಲ್ಲಿ 11 ಗಂಟೆ ವಿದ್ಯುತ್ ಬಳಕೆದಾರರ ಶುಲ್ಕದಲ್ಲಿ ಕಡಿತ ಮಾಡಿ ಹೆಚ್ಚಿನ ರಿಯಾಯಿತಿ ಕಲ್ಪಿಸುವ ಬಗ್ಗೆ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ಪ್ರತಿ ಯುನಿಟ್‍ಗೆ ಈ ಮೊದಲು ವಿಧಿಸುತ್ತಿದ್ದ 6.60 ರೂ. ಬಳಕೆದಾರರ ಶುಲ್ಕ ಹೊಸ ಪ್ರಸ್ತಾಪದಿಂದ ಇಳಿಕೆ ಯಾಗುವ ಸಾಧ್ಯತೆ ಹೆಚ್ಚಿದ್ದು 75 ಪೈಸೆವರೆಗೆ ರಿಯಾಯಿತಿ ಸಿಗಬಹುದು ಎನ್ನಲಾಗಿದೆ.

Translate »