ವಿ.ಪೇಟೆಯಲ್ಲಿ ಅಖಂಡ ಭಾರತ ಸಂಕಲ್ಪದಿನ
ಕೊಡಗು

ವಿ.ಪೇಟೆಯಲ್ಲಿ ಅಖಂಡ ಭಾರತ ಸಂಕಲ್ಪದಿನ

August 15, 2021

ವಿರಾಜಪೇಟೆ, ಆ.14- ಸ್ವತಂತ್ರ ಪೂರ್ವ ದಲ್ಲಿ ವೀರ ಮರಣ ಹೊಂದಿ ದೇಶಕ್ಕೆ ಸ್ವಾತಂತ್ರ್ಯ ಲಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದೇಶ ಭಕ್ತರನ್ನು ಸ್ಮರಿಸುವಲ್ಲಿ ಇಂದಿನ ಸಮಾಜ ವಿಫಲವಾಗಿದೆ ಎಂದು ಸಂಘ ಪ್ರಚಾರಕರಾದ ಕೆ.ರಾಜು ಮೊದಲಿ ಯಾರ್ ವಿಷಾದ ವ್ಯಕ್ತಪಡಿಸಿದರು.
ಭಜರಂಗದಳ ತಾಲೂಕು ಘಟಕದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ವೀರ್ ಸಾರ್ವಕರ್, ಗುರುದೇವ್, ಕಿತ್ತೂರು ರಾಣಿ ಚೆನ್ನಮ್ಮ, ಅಬ್ಬಕ್ಕ ದೇವಿ, ಜಾನ್ಸಿ ರಾಣಿ ಲಕ್ಷ್ಮಿ ಬಾಯಿ, ಅರವಿಂದ ಘೋಷ್ ಹೀಗೆ ಹಲವಾರು ಸ್ವಾತಂತ್ರ್ಯ ಯೋಧರ ಕ್ರಾಂತಿಕಾರಿ ಹೋರಾಟದ ಫಲವಾಗಿ ಸ್ವತಂತ್ರ ಭಾರತದ ದೇಶದಲ್ಲಿ ನಾವಿದ್ದೇವೆ. ಪಾಕಿ ಸ್ತಾನ, ಅಫ್ಗಾನಿಸ್ತಾನ, ಹಿಂದೂಸ್ತಾನ ಎಂದು ವಿಭಜನೆಗೊಂಡು ಅಖಂಡವಾಗಿದ್ದ ಭಾರತ ಖಂಡವು ಇಂದು ಛಿದ್ರಗೊಂಡಿದೆ ಎಂದು ಹೇಳಿದರು. ಜಾಗೃತ ಸಮಾಜವು ಸಂಘಟಿತರಾಗಿ, ಸಮೃದ್ಧ ಸಮಾಜ, ಸಮೃದ್ಧ ಭಾರತವನ್ನು ರೂಪಿಸಬೇಕು. ಅದರಿಂದಲೇ ನವ ಭಾರತ ನಿರ್ಮಾಣವಾಗಬೇಕು ಎಂದು ತಮ್ಮ ಭೌದಿಕ್‍ನಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಸಣ್ಣುವಂಡ ಗಣೇಶ್ ಮೇದಪ್ಪ, ಸ್ವಾತಂತ್ರ್ಯ ಸಂಗ್ರಾಮದ ವೀರ ಕ್ರಾಂತಿಕಾರಿಗಳು ಆಂಗ್ಲರ ವಿರುದ್ದ ಹೋರಾಡಿ ತಮ್ಮ ನೆತ್ತರನ್ನು ಭಾರತ ಮಾತೆಗೆ ಅರ್ಪಿಸಿ ಪಡೆದ ಸ್ವಾತಂತ್ರ್ಯವಾಗಿದೆ. ತ್ಯಾಗ ಬಲಿದಾನಗೈದ ವೀರ ಯೋಧರ ಹೊನ್ನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕರ್ತವ್ಯ ನಮ್ಮದಾಗಬೇಕು. ರಾಜಕೀಯ ಪಿತೂರಿಗಳ ನಡುವೆ ಚರಿತ್ರೆಯಲ್ಲಿ ಕಣ್ಮರೆ ಯಾದ ಸ್ವಾತಂತ್ರ್ಯ ಸಂಗ್ರಾಮದ ಯೋಧರ ಜೀವನದ ಕಥೆಗಳು ಪಠ್ಯ ಪುಸ್ತಕದಲ್ಲಿ ನಮೂದಾಗದ ಕಾರಣ ಹಲವರಿಗೆ ಸ್ವಾತಂತ್ರ್ಯ ಪೂರ್ವ ಕಾಲದ ಚರಿತ್ರೆಗಳು ತಿಳಿಯದಂ ತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರಸ್ತುತ ಭಾರತವು ಪ್ರಪಂಚದಲ್ಲಿ ಉನ್ನತಿಯತ್ತ ಸಾಗುವ ಕನಸು ಹೊಂದಿ ಮುಂದೆ ಸಾಗುತ್ತಿದೆ. ಜಾಗೃತ ಸಮಾಜವು ಅಭಿವೃದ್ಧಿ ಭಾರತದ ಕನಸು ಸಹಕಾರ ಮಾಡಲು ಕೈ ಜೋಡಿಸುವಂತೆ ಕರೆ ನೀಡಿದರು.

Translate »