ಅಗತ್ಯ ಬಿದ್ದರೆ ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ: ಸಿಎಂ
News

ಅಗತ್ಯ ಬಿದ್ದರೆ ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ: ಸಿಎಂ

March 19, 2022

ಬೆಂಗಳೂರು, ಮಾ.18- ಮೇಕೆದಾಟು ಯೋಜನೆಗೆ ಕಾವೇರಿ ಜಲ ನಿರ್ವಹಣಾ ಪ್ರಾಧಿ ಕಾರ ಹಾಗೂ ಕೇಂದ್ರ ಪರಿಸರ ಸಚಿವಾಲಯ ದಿಂದ ತ್ವರಿತವಾಗಿ ಅನು ಮೋದನೆ ಪಡೆದುಕೊಂಡು ಯೋಜನೆಗೆ ಚಾಲನೆ ನೀಡಲು ಇಂದಿನ ವಿಧಾನ ಮಂಡಲ ಉಭಯ ಸದನಗಳ ಸಭಾ ನಾಯಕರ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಅಂತರ ರಾಜ್ಯ ಜಲ ವಿವಾದಗಳ ಕುರಿತಂತೆ ಉಭಯ ಸದನಗಳ ಸಭಾ ನಾಯಕರ ಜೊತೆ ಸಭೆ ನಡೆಸಿದ ನಂತರ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು. ಕಾವೇರಿ ಜಲ ನಿರ್ವ ಹಣಾ ಪ್ರಾಧಿಕಾರದ ಸಭೆಗಳಲ್ಲಿ ಮೇಕೆದಾಟು ಯೋಜನೆಯ ಕುರಿತು ವಿಸ್ತೃತ ಚರ್ಚೆಯಾಗಿದೆ. ಈ ಕುರಿತು ನಡಾವಳಿಗಳಲ್ಲಿ ದಾಖಲಿಸದೆ ಇರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕೂಡಲೇ ಜಲಶಕ್ತಿ ಸಚಿವರು ಹಾಗೂ ಪ್ರಾಧಿಕಾರದವರೊಂದಿಗೆ ಚರ್ಚಿಸಿ, ನಡಾವಳಿಗಳಲ್ಲಿ ಚರ್ಚೆಯ ಅಂಶಗಳನ್ನು ದಾಖಲಿಸುವ ಕುರಿತು ಕ್ರಮ ವಹಿಸಲಾಗುವುದು. ಹಾಗೂ ಮುಂದಿನ ಸಭೆಯಲ್ಲಿ ಯೋಜ ನೆಗೆ ಅನುಮೋದನೆ ನೀಡಲು ಹಾಗೂ ಪರಿಸರ ಸಚಿವಾಲಯದ ತೀರುವಳಿ ಪಡೆಯಲು ಕ್ರಮ ವಹಿಸಲಾಗುವುದು ಎಂದರು. ಮುಂದಿನ ವಾರ ಜಲಸಂಪನ್ಮೂಲ ಸಚಿವರು ದೆಹಲಿಗೆ ತೆರಳಲಿದ್ದು, ಅಧಿವೇಶನ ಮುಗಿದ ತಕ್ಷಣ ತಾವು ಸ್ವತಃ ದೆಹಲಿಗೆ ತೆರಳಿ ಕೇಂದ್ರ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸುತ್ತೇನೆ. ಮತ್ತೆ ಅಗತ್ಯವಿದ್ದರೆ ಸರ್ವ ಪಕ್ಷಗಳ ನಿಯೋಗವನ್ನು ನವದೆಹಲಿಗೆ ಕರೆದೊಯ್ಯಲಾಗುವುದು ಎಂದು ಹೇಳಿದರು.

ಮಹದಾಯಿ ಯೋಜನೆಯಲ್ಲಿ ಈಗಾಗಲೇ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರಿನ ಬಳಕೆಗಾಗಿ ಯೋಜನೆ ಅನುಷ್ಠಾನಕ್ಕೆ ಪರಿಸರ ಇಲಾಖೆಯ ತೀರುವಳಿ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಕುರಿತು ಕೇಂದ್ರ ಸರ್ಕಾರ ಇನ್ನೂ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಲ್ಲಿ ರಾಜ್ಯ ಸರ್ಕಾರ ಸಲ್ಲಿಸಿದ ಮಧ್ಯಂತರ ಅರ್ಜಿ ವಿಚಾರಣೆಯ ಪೀಠದಿಂದ ಇಬ್ಬರು ನ್ಯಾಯಾಧೀಶರು ಹಿಂದೆ ಸರಿದಿದ್ದಾರೆ. ಹೊಸ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರುಭಾರತ ಸರ್ಕಾರದ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ, ರಾಜ್ಯಕ್ಕೆ ಹಂಚಿಕೆಯಾಗುವ ನೀರಿನ ಪ್ರಮಾಣವನ್ನು ಸ್ಪಷ್ಟಪಡಿಸುವಂತೆ ಕೇಂದ್ರವನ್ನು ಕೋರಲಾಗಿದೆ. ಅಲ್ಲದೆ ಈ ಯೋಜನೆಯ ತಾಂತ್ರಿಕ ವರದಿಯ ಮಾಹಿತಿಯನ್ನು ಒದಗಿಸುವಂತೆ ವಿರೋಧ ಪಕ್ಷಗಳು ಕೋರಿದ್ದು, ವರದಿ ಲಭ್ಯವಾದ ಕೂಡಲೇ ಒದಗಿಸಲಾಗುವುದು ಎಂದರು. ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ಮುಖಂಡರಾದ ಎಚ್.ಕೆ.ಪಾಟೀಲ್, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಜೆಡಿಎಸ್ ಪಕ್ಷದ ಮುಖಂಡರಾದ ಬಂಡೆಪ್ಪ ಕಾಶೆಂಪೂರ್, ಕಾನೂನು ತಜ್ಞರು ಮತ್ತು ಇತರರು ಭಾಗವಹಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಜಲ ಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ, ರಾಜ್ಯ ವಕೀಲರ ತಂಡದ ಮೋಹನ ಎಂ.ಕಾತರಕಿ ಮೊದಲಾದವರು ಉಪಸ್ಥಿತರಿದ್ದರು.

Translate »