ರಾಜ್ಯದಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ  ಶೇ.70ರಷ್ಟು ಉದ್ಯೋಗ ಕಡ್ಡಾಯ
News

ರಾಜ್ಯದಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ.70ರಷ್ಟು ಉದ್ಯೋಗ ಕಡ್ಡಾಯ

March 19, 2022

ಬೆಂಗಳೂರು,ಮಾ.18(ಕೆಎಂಶಿ)-ಡಾ.ಸರೋಜಿನಿ ಮಹಿಷಿ ವರದಿ ಯಂತೆ ರಾಜ್ಯದಲ್ಲಿ ಪ್ರಾರಂಭವಾಗುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ.70ರಷ್ಟು ಉದ್ಯೋಗ ಕೊಡಬೇಕೆಂಬ ನಿಯಮದಲ್ಲಿ ಯಾವುದೇ ರಾಜೀ ಪ್ರಶ್ನೆಯೇ ಇಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರು ಗೇಶ್ ನಿರಾಣಿ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಶಾಸಕಿ ರೂಪಾಲಿ ಸಂತೋಷ್ ನಾಯಕ್ ಪರವಾಗಿ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಯಾವುದೇ ಭಾಗದಲ್ಲೂ ಹೊಸದಾಗಿ ಕೈಗಾರಿಕೆ ಸ್ಥಾಪನೆ ಮಾಡಿದರೆ ಕನ್ನಡಿಗರಿಗೆ ಶೇ.70ರಷ್ಟು ಉದ್ಯೋಗಗಳನ್ನು ನೀಡಲೇಬೇಕು.

ಇದು ನಮ್ಮ ಸರ್ಕಾರದ ಬದ್ಧತೆ. ವಿಶೇಷವಾಗಿ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ, ಆದ್ಯತೆ ನೀಡಲಿದ್ದೇವೆ ಎಂದು ಹೇಳಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ನಮ್ಮ ಸರ್ಕಾರ ಬದ್ಧವಿದೆ. ಆದರೆ ಇಲ್ಲಿ ಹೆಚ್ಚಿನ ಭೂಪ್ರದೇಶ ಅರಣ್ಯ ಮತ್ತು ಪರಿಸರ ಇಲಾಖೆಗೆ ಸೇರುವುದರಿಂದ ದೊಡ್ಡ ಮಟ್ಟದ ಕೈಗಾರಿಕೆಗಳ ಸ್ಥಾಪನೆಗೆ ಅಡ್ಡಿಯಾಗಿದೆ ಎಂದರು.

ಈ ವೇಳೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶಿಸಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಶೇ.85ರಷ್ಟು ಭೂಪ್ರದೇಶವು ಅರಣ್ಯ ಪ್ರದೇಶಕ್ಕೆ ಸೇರುತ್ತದೆ, ನೀವು ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾದರೆ ಅರಣ್ಯ, ಕಂದಾಯ, ಪರಿಸರ ಹೀಗೆ ನೂರಾರು ಇಲಾಖೆ ಅಧಿಕಾರಿಗಳು ತಗಾದೆ ತೆಗೆಯುತ್ತಾರೆ. ಅಧಿಕಾರಿಗಳು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸುವುದಿಲ್ಲ, ಕೈಗಾರಿಕೆಗಳು ಜಿಲ್ಲೆಗೆ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ದೊಡ್ಡ ಕೈಗಾರಿಕೆಗಳು ಬೇಡ, ಕನಿಷ್ಠ ಜಿಲ್ಲೆಯಲ್ಲಿ ಗೃಹ, ಗುಡಿ ಕೈಗಾರಿಕೆಯಂತಹ ಕೈಗಾರಿಕೆಗಳನ್ನಾದರೂ ಸ್ಥಾಪಿಸಿ ಇದಕ್ಕೆ ಬೇಕಾದ ಭೂಮಿ ಲಭ್ಯವಿದೆ ಎಂದರು.
ಇದಕ್ಕೆ ದನಿಗೂಡಿಸಿದ ಶಾಸಕ ಆರ್.ವಿ.ದೇಶಪಾಂಡೆ, ನಮ್ಮ ಜಿಲ್ಲೆ ಭೌಗೋಳಿಕವಾಗಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ. ಇಲ್ಲಿ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಲು ಹಲವಾರು ಸಮಸ್ಯೆಗಳು ಎದುರಾಗುತ್ತವೆ. ನಾನು ಸಚಿವನಾಗಿದ್ದಾಗ ಎರಡು-ಮೂರು ಯೋಜನೆಗಳನ್ನು ತರಲು ಪ್ರಯತ್ನಿಸಿದ್ದೆ. ಆದರೆ ಅರಣ್ಯ ಮತ್ತು ಪರಿಸರ ಇಲಾಖೆಗಳ ಅನುಮತಿ ಸಿಗದೆ, ಇದು ಸಾಧ್ಯವಾಗಲಿಲ್ಲ. ನಾವು ಅನೇಕ ಕಡೆ ಪ್ರವಾಸೋದ್ಯಮ ಇಲಾಖೆಯನ್ನು ಉತ್ತೇಜಿಸಲು ರೆಸಾರ್ಟ್, ಹೋಂ ಸ್ಟೇಗೆ ಪ್ರೋತ್ಸಾಹಿಸಿದೆವು, ಪರಿಣಾಮ ನಮ್ಮ ಜಿಲ್ಲೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಜಿಲ್ಲೆಯಾಗಿದೆ ಎಂದು ಹೇಳಿದರು.

ಮಾತು ಮುಂದುವರೆಸಿದ ಸಚಿವ ನಿರಾಣಿ, ಕಾರವಾರ ಮತ್ತು ಅಂಕೋಲ ತಾಲೂಕಿನಲ್ಲಿರುವ ಬಂದರುಗಳನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗು ವುದು. ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಬದ್ಧರಾಗಿದ್ದೇವೆ. ಹಿರಿಯರಾದ ಅರ್.ವಿ.ದೇಶಪಾಂಡೆ ಮತ್ತು ಕಾಗೇರಿ ಅವರು ನೀಡಿರುವ ಸಲಹೆಯನ್ನು ಪರಿಗಣಿಸು ತ್ತೇವೆ. ಅಧಿವೇಶನ ಮುಗಿದ ನಂತರ ನಾನು ಮತ್ತು ನಮ್ಮ ಅಧಿಕಾರಿಗಳು ಜಿಲ್ಲೆಗೆ ಭೇಟಿ ಕೊಟ್ಟು ಎಲ್ಲಿ ಅಗತ್ಯವಿದೆಯೋ ಅಂತಹ ಕಡೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪರಿಶೀಲನೆ ಮಾಡುತ್ತೇವೆ. ನಮಗೆ ಸೂಕ್ತ ಇರುವ ಕಡೆ ಜಮೀನು ಲಭ್ಯವಿದ್ದರೆ ಖಂಡಿತವಾಗಿಯೂ ಕೈಗಾರಿಕೆ ಸ್ಥಾಪಿಸಲು ನಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.

Translate »