ಮನುಷ್ಯನ ಅವಶ್ಯಕತೆ ಮೀರಿದ್ದೆಲ್ಲಾ ವ್ಯರ್ಥ
ಮೈಸೂರು

ಮನುಷ್ಯನ ಅವಶ್ಯಕತೆ ಮೀರಿದ್ದೆಲ್ಲಾ ವ್ಯರ್ಥ

December 19, 2021

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ `ಲಾಗೈಡ್’ ಕನ್ನಡ ಕಾನೂನು ಮಾಸಪತ್ರಿಕೆಯ ಕ್ಯಾಲೆಂಡರ್ ಹಾಗೂ ಡೈರಿಯನ್ನು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರರಾವ್ ಬಿಡುಗಡೆ ಮಾಡಿದರು. ಬೆಂಗಳೂರಿನ ಸಿಐಡಿ ಸೈಬರ್ ಕ್ರೈಂ ವಿಭಾಗದ ಡಿವೈಎಸ್ಪಿ ಸಿ.ಎನ್.ಯಶವಂತಕುಮಾರ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಮೈಸೂರು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಜಿ.ವಿ.ರಾಮಮೂರ್ತಿ, ಹಿರಿಯ ವಕೀಲರಾದ ಎಸ್.ಲೋಕೇಶ್, ಎಂ.ಡಿ.ಹರೀಶ್‍ಕುಮಾರ್ ಹೆಗ್ಡೆ, `ಲಾ ಗೈಡ್’ ಪತ್ರಿಕೆ ಗೌರವ ಸಂಪಾದಕ ಹೆಚ್.ಎನ್.ವೆಂಕಟೇಶ್ ಇತರರಿದ್ದರು.

ಮೈಸೂರು,ಡಿ.18-ಅವಶ್ಯಕತೆ ಮೀರಿದ್ದೆಲ್ಲಾ ವ್ಯರ್ಥ ಎನ್ನುವುದನ್ನು ಎಲ್ಲರೂ ಮನಗಾಣಬೇಕು ಎಂದು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರರಾವ್ ಹೇಳಿದರು.

ಮೈಸೂರಿನ ಏರ್‍ಲೈನ್ಸ್ ಹೋಟೆಲ್‍ನಲ್ಲಿ ಶನಿ ವಾರ `ಲಾಗೈಡ್’ ಕನ್ನಡ ಕಾನೂನು ಮಾಸ ಪತ್ರಿಕೆಯ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆ ಮಾಡಿ ಮಾತನಾಡಿದರು. ಜೀವನದಲ್ಲಿ ಬೇಕು ಎನ್ನುವುದಕ್ಕಿಂತ ಬೇಡ ಎನ್ನುವುದರಲ್ಲೇ ಸುಖ ಸಿಗುತ್ತದೆ. ಚಾಣಕ್ಯ ಹೇಳಿರುವಂತೆ ಮನುಷ್ಯನ ಜೀವನದಲ್ಲಿ ಅವಶ್ಯಕತೆ ಮೀರಿದ್ದೆಲ್ಲವೂ ವ್ಯರ್ಥ ವಾಗುತ್ತದೆ. ಟನ್‍ಗಟ್ಟಲೆ ಸಕ್ಕರೆ ಇದ್ದರೂ ಒಂದು ಚಮಚದಷ್ಟನ್ನೂ ತಿನ್ನಲಾಗದ ಪರಿಸ್ಥಿತಿ ಬರಬಹುದು. ಮನುಷ್ಯ ತನ್ನ ಜೀವನ ಹಾಗೂ ಮರಣಕ್ಕೆ ಅರ್ಥ ನೀಡಬೇಕು. ಇಲ್ಲವಾದರೆ ಜೀವನವೇ ವ್ಯರ್ಥವಾಗುತ್ತದೆ ಎಂದು ಅಭಿಪ್ರಾಯಿಸಿದರು.
ಜ್ಞಾನಿಗಳನ್ನೇ ಸೃಷ್ಟಿಸುವಂತಹ ವೃತ್ತಿ ಯಾವು ದೆಂದರೆ ಅದು ವಕೀಲ ವೃತ್ತಿ. ಹಾಗೆಯೇ ನಾವು ನಮ್ಮ ಮನೆಯಲ್ಲೇ ಪರಕೀಯರಾಗದಂತೆ ಜವಾ ಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ವಕೀಲರು ಮಾಡುವುದು, ನೋಡುವುದು, ಹೇಳುವುದೆಲ್ಲವೂ ಒಂದೇ ತೆರನಾಗಿರಬೇಕು. ನಡೆ, ನುಡಿಯಲ್ಲಿ ಭಿನ್ನತೆ ಇರಬಾರದು. ವಕೀಲರಾದವರು ಗಾಂಡೀವಧಾರಿ ಅರ್ಜುನ, ಸುದರ್ಶನ ಚಕ್ರಧಾರಿ ಕೃಷ್ಣನಂತೆ ಇರಬೇಕೇ ಹೊರತು ಕೇಸು ಸೋಲುತ್ತದೆ ಎಂದು ಉತ್ತರಕುಮಾರನಂತೆ ನಡೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಹೈಕೋರ್ಟ್ ಹಿರಿಯ ವಕೀಲ ಎಸ್.ಪಿ.ಶಂಕರ್ ಮಾತನಾಡಿ, `ಆಡಳಿತ ನಡೆಸುವ ಸರ್ಕಾರ ಹಾಗೂ ಧರ್ಮ-ಜಾತಿಗಳಿಗೂ ಸಂಬಂಧ ಇರಬಾರದು. ಸರ್ಕಾರ ಧರ್ಮ ನಿರಪೇಕ್ಷವಾಗಿರಬೇಕು. ಒಂದು ಧರ್ಮದ ಉದ್ಧಾರ ಅಥವಾ ದಮನ ಮಾಡುವುದು ಸರ್ಕಾರದ ಉದ್ದೇಶವಾಗಬಾರದು. ಬೇರೆ ಧರ್ಮದ ಪ್ರಾರ್ಥನಾ ಮಂದಿರಗಳನ್ನು ಬಿಟ್ಟು ದೇಗುಲಗಳ ಹುಂಡಿ ಹಣವನ್ನಷ್ಟೇ ಸರ್ಕಾರ ಪಡೆಯುವುದನ್ನು ಸರಿ ಎಂದು ಒಪ್ಪಲಾಗದು. ವಕೀಲರು ಸತ್ಯಶೋಧನೆ, ಚಾತುರ್ಯ, ಸಮಯಪ್ರಜ್ಞೆ ಹೊಂದಿದ್ದರೆ ಮಾತ್ರ ವೃತ್ತಿಯಲ್ಲಿ ಯಶಸ್ಸು ಸಾಧಿಸಬಹುದು. ಭಗವ ದ್ಗೀತೆಯಲ್ಲಿರುವಂತೆ ನಮ್ಮ ಉದ್ಧಾರಕ್ಕೆ ನಾವೇ ಕಾರಣವಾಗುತ್ತೇವೆ ಎಂದು ತಿಳಿಸಿದರು.

`ಇಂಡಿಯಾ ಕಾಪ್ ಆಫ್ ದಿ ಇಯರ್’ ಪ್ರಶಸ್ತಿಗೆ ಭಾಜನರಾಗಿರುವ ಬೆಂಗಳೂರಿನ ಸಿಐಡಿ ಸೈಬರ್ ಕ್ರೈಂ ವಿಭಾಗದ ಡಿವೈಎಸ್ಪಿ ಸಿ.ಎನ್.ಯಶ ವಂತಕುಮಾರ್ ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು.

ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಮೈಸೂರು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಜಿ.ವಿ.ರಾಮಮೂರ್ತಿ, ಹಿರಿಯ ವಕೀಲ ರಾದ ಎಸ್.ಲೋಕೇಶ್, ಎಂ.ಡಿ.ಹರೀಶ್‍ಕುಮಾರ್ ಹೆಗ್ಡೆ, `ಲಾ ಗೈಡ್’ ಪತ್ರಿಕೆ ಗೌರವ ಸಂಪಾದಕ ಹೆಚ್.ಎನ್. ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »