ಮುರಿದ ಮನಸ್ಸುಗಳ ಒಗ್ಗೂಡಿಸಿದ `ಲೋಕ ಅದಾಲತ್’
ಮೈಸೂರು

ಮುರಿದ ಮನಸ್ಸುಗಳ ಒಗ್ಗೂಡಿಸಿದ `ಲೋಕ ಅದಾಲತ್’

December 19, 2021

ಮೈಸೂರು, ಡಿ. 18(ಆರ್‍ಕೆ)- ರಾಜೀ ಸೂತ್ರದ ಮೂಲಕ ವೈಮನಸ್ಸು ಬಿಟ್ಟು ಇಂದು ನಡೆದ ಮೆಗಾ ಲೋಕ ಅದಾಲತ್‍ನಲ್ಲಿ 25 ದಂಪತಿ ಒಂದಾಗಿ ಜೊತೆ ಜೊತೆಯಾಗಿ ಸಂಸಾರ ನಡೆಸಲು ನಿರ್ಧರಿಸಿದ್ದಾರೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರವು ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ನ್ಯಾಯಾ ಲಯಗಳಲ್ಲಿ ಲೋಕ ಅದಾಲತ್ ನಡೆಸಿ ರಾಜೀ ಮೂಲಕ ಬಾಕಿ ಇರುವ ಸಂಧಾನ ಮಾಡಬಹುದಾದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ಆ ಪೈಕಿ ಕೌಟುಂಬಿಕ ಕಲಹ, ವೈಮನಸ್ಸು, ಭಿನ್ನಾಭಿಪ್ರಾಯಗಳಿಂದಾಗಿ ವಿವಾಹ ವಿಚ್ಛೇ ದನ ಕೋರಿ ಸಾವಿರಕ್ಕೂ ಹೆಚ್ಚು ದಂಪತಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ನಡೆದ ಲೋಕ ಅದಾಲತ್‍ನಲ್ಲಿ ವಕೀಲರ ಮೂಲಕ ರಾಜೀ ಸಂಧಾನ ಮಾಡಿಸಿ ಜೀವನದ ಆಗು-ಹೋಗುಗಳನ್ನು ಮನಮುಟ್ಟಿಸಿದ ಪರಿಣಾಮ, ಜೀವನದ ತಿರುಳನ್ನು ಅರ್ಥ ಮಾಡಿಕೊಂಡ 25 ದಂಪತಿ ಭಿನ್ನಾಭಿಪ್ರಾಯ ಮರೆತು ಒಂದಾದರು.

ಅವರಿಗೆ ಪರಸ್ಪರ ಸಿಹಿ ತಿನ್ನಿಸಿ, ತಜ್ಞ ಮನಶಾಸ್ತ್ರಜ್ಞರು ಬರೆದಿರುವ ‘ಅನ್ಯೋನ್ಯ ದಾಂಪತ್ಯ ಹೇಗೆ’ ಪುಸ್ತಕವನ್ನೂ ನೀಡುವ ಮೂಲಕ ಪ್ರಧಾನ ಮತ್ತು ಸತ್ರ ನ್ಯಾಯಾ ಧೀಶರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಎಲ್.ರಘು ನಾಥ ಅವರು ಮುಂದೆ ಸುಖ-ಸಂತೋಷದಿಂದ ಜೀವನ ನಡೆಸುವಂತೆ ಶುಭ ಹಾರೈಸಿದರು.

ದಂತ ವೈದ್ಯೆ ಡಾ.ತಹೇರಾ ತಬಸೀನ್ ಮತ್ತು ಇಮ್ತಿಯಾಜ್ ಅಹಮದ್ ಖಾನ್, ವಿಜಯಲಕ್ಷ್ಮಿ ಹೆಚ್.ಕೆ.ನಾಗರಾಜ್, ಅಶ್ವಿನಿ -ವಿಶ್ವನಾಥ್, ಜಾಸ್ಮಿನ್-ಚೇತನ್, ಅಪೂರ್ವ -ರಾಜು, ಶಶಿಕಲಾ-ವಿನ್ಸೆಂಟ್ ಡಿ’ಸೋಜ, ಶಾಲಿನಿ-ವಿಜಯಕುಮಾರ್, ಶೃತಿ-ಶ್ರೀಧರ್, ರಶೀದಾಬಾನು-ಅಬ್ರಾಹಂ, ಪ್ರಿಯ ದರ್ಶಿನಿ-ನವೀನ್‍ಚಂದ್ರ, ಅಶ್ವಿನಿ-ಗೋಪಾಲ್, ಸವಿತಾ-ನಾಗಾರ್ಜುನಸ್ವಾಮಿ, ರಾಜೇ ಶ್ವರಿ-ಸಂಜಯ್, ಸುಶ್ಮಿತಾ-ಮನು ಸೇರಿ ದಂತೆ 25 ಜೋಡಿಗಳು ಲೋಕ ಅದಾಲತ್ ನಲ್ಲಿ ಒಂದಾಗಿ ದಾಂಪತ್ಯ ಜೀವನ ಮುಂದುವರೆಸಲು ಒಪ್ಪಿಕೊಂಡರು.

ಈ ಸಂದರ್ಭ ದಂಪತಿಗೆ ತಿಳಿಹೇಳಿದ ನ್ಯಾಯಾಧೀಶ ರಘುನಾಥ ಅವರು, ಜೀವನ ದಲ್ಲಿ ಸಣ್ಣಪುಟ್ಟ ವ್ಯತ್ಯಾಸವಾಗುತ್ತದೆ, ನಿಮ್ಮ ಪುಟ್ಟ ಮಕ್ಕಳಿಗಾಗಿ, ತಂದೆ-ತಾಯಂದಿರ ನೆಮ್ಮದಿಗಾಗಿ ಹಾಗೂ ಭವಿಷ್ಯದ ಸುಂದರ ಬದುಕಿಗಾಗಿ ಭಿನ್ನಾಭಿಪ್ರಾಯ ಮರೆತು ಒಂದಾಗಿ ಸಂತೋಷದಿಂದ ಕಡೇವರೆಗೂ ಜೊತೆಯಾಗಿ ಜೀವನ ನಡೆಸಿ ಎಂದರು.

ಈ ವರ್ಷ ನಡೆದ ಮೂರು ಲೋಕ ಅದಾಲತ್‍ನಲ್ಲಿ ಒಟ್ಟು 60 ಜೋಡಿಗಳು ಒಂದಾಗಿದ್ದಾರೆ. ಉಳಿದ ವಿವಾಹ ವಿಚ್ಛೇ ಧನ ಪ್ರಕರಣಗಳು ಬೇರೆ ಬೇರೆ ಕಾರಣ ಗಳಿಂದ ಇತ್ಯರ್ಥವಾಗಿಲ್ಲ. ಅಂತಹ ದಂಪತಿ ಮನಸ್ಸು ಬದಲಿಸಲು ಪ್ರಾಧಿಕಾರವು ನ್ಯಾಯವಾದಿಗಳ ಮಧ್ಯಸ್ಥಿಕೆಯಲ್ಲಿ ನಿರಂತರ ಪ್ರಯತ್ನ ಮಾಡಲಿದೆ ಎಂದು ನ್ಯಾಯಾಧೀಶರು ನುಡಿದರು.

ಕಳೆದ ಒಂದೂವರೆ ತಿಂಗಳಲ್ಲಿ ವಿವಿಧ ಬಗೆಯ 40,000 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸ ಲಾಗಿದೆ. 150 ಚೆಕ್ ಬೌನ್ಸ್ ಪ್ರಕರಣಗಳೂ ಸಹ ಬಗೆಹರಿದಿವೆ. ಪತ್ರ ನೋಂದಣಿಗಾಗಿ ಬಂದಿದ್ದ 30,000 ಅರ್ಜಿಗಳ ಪೈಕಿ ಲೋಕ ಅದಾಲತ್‍ನಲ್ಲಿ 7,000 ಪೋಷಕರ ಮಕ್ಕ ಳಿಗೆ ಜನನ ಪ್ರಮಾಣಪತ್ರ ನೀಡುವಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇ ಶನ ನೀಡಲಾಗಿದೆ. ಇತ್ತೀಚೆಗೆ ವಿವಾಹ ಪೂರ್ವದಲ್ಲೇ ಹುಡುಗ ಮತ್ತು ಹುಡುಗಿ ಕಡೆಯವರು ಕಾನೂನು ತೊಡಕುಗಳು, ಆಸ್ತಿ-ಹಣಕಾಸು ವಿಷಯದಲ್ಲಿ ತಮ ಗಿರುವ ಗೊಂದಲಗಳ ಬಗ್ಗೆ ಪರಿಹಾರ ಕೋರಿ ಅರ್ಜಿಗಳು ಪ್ರಾಧಿಕಾರಕ್ಕೆ ಬರುತ್ತಿವೆ. ಅವುಗಳನ್ನೂ ಸಹ ನಾವು ಪರಿಗಣಿಸಿ, ಅವರಿಗೆ ಸೂಕ್ತ ಸಲಹೆ-ಮಾರ್ಗದರ್ಶನ ನೀಡುತ್ತಿದ್ದೇವೆ ಎಂದು ಅವರು ನುಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಕಾರ್ಯದರ್ಶಿ ದೇವರಾಜ ಭೂತೆ, ವಕೀಲರ ಸಂಘದ ಅಧ್ಯಕ್ಷ ಎಂ.ಆನಂದ ಕುಮಾರ್, ಕೌಟುಂಬಿಕ ನ್ಯಾಯಾಲಯದ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರಾದ ಸುಧಾ ಸೇತುರಾಮ್ ಓಂಕಾರ್, ಕೆ.ಗಿರೀಶ್ ಭಟ್, ಹೆಚ್.ಎಂ.ವಿರೂಪಾಕ್ಷಯ್ಯ, ವೇಲಾ ಖೋಡೆ ಈ ಸಂದರ್ಭ ಉಪಸ್ಥಿತರಿದ್ದರು.

 

ಮೈಸೂರು ನಗರ ಮತ್ತು ತಾಲೂಕು ಗಳ ನ್ಯಾಯಾಲಯಗಳಲ್ಲಿ ಬಾಕಿ ಇರುವ ಒಟ್ಟು 1,48,377 ಪ್ರಕರಣಗಳಲ್ಲಿ 1,18,284 ಪ್ರಕರಣಗಳನ್ನು ರಾಜೀ ಆಗಬಲ್ಲ ಪ್ರಕರಣಗಳೆಂದು ಗುರುತಿಸ ಲಾಗಿದೆ. ಇದರಲ್ಲಿ ಈವರೆಗೆ 61,519 ಪ್ರಕರಣಗಳ ರಾಜೀ ಸಂಧಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದರ ಪೈಕಿ 51,815 ಪ್ರಕರಣ ಹಾಗೂ 185 ವ್ಯಾಜ್ಯ ಪೂರ್ವ ಪ್ರಕರಣ ಸೇರಿ ಒಟ್ಟು 52 ಸಾವಿರ ಪ್ರಕ ರಣಗಳನ್ನು ರಾಷ್ಟ್ರೀಯ ಲೋಕ ಅದಾ ಲತ್‍ನಲ್ಲಿ ಇತ್ಯರ್ಥಪಡಿಸಲಾಗಿದೆ. ಇಂದಿನ ಅದಾಲತ್‍ನಲ್ಲಿ ಕೌಟುಂಬಿಕ ಕಲಹದ 142 ಪ್ರಕರಣಗಳು ಇತ್ಯರ್ಥ ವಾಗಿದ್ದು, 25 ದಂಪತಿ ಕಲಹ ಮರೆತು ಮತ್ತೆ ಜೊತೆಯಾಗಿದ್ದಾರೆ. ಈ ಬಾರಿ ವಿಶೇಷವಾಗಿ 7 ಸಾವಿರ ಮಕ್ಕಳಿಗೆ ಜನನ ಪ್ರಮಾಣ ಪತ್ರ ಒದಗಿಸುವ ಬಗ್ಗೆ ನ್ಯಾಯಾ ಲಯಗಳು ಆದೇಶಿಸಿವೆ. ಮೆಗಾ ಲೋಕ ಅದಾಲತ್‍ನಲ್ಲಿ ತೀರ್ಮಾನವಾದ ಪ್ರಕ ರಣಗಳಲ್ಲಿ ಈವರೆಗೆ ಒಟ್ಟು 100.39 ಕೋಟಿ ಪರಿಹಾರ ನೀಡಲು ಆದೇಶಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ ಸದಸ್ಯ ಕಾರ್ಯದರ್ಶಿ ದೇವ ರಾಜ ಭೂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Translate »