ಅಕ್ರಮ, ಅವ್ಯವಹಾರ ಆರೋಪ ತಾಂತ್ರಿಕ ಸಮಿತಿಯಿಂದ ಮುಡಾ  ಕಚೇರಿಯಲ್ಲಿ ತನಿಖೆ ಆರಂಭ
ಮೈಸೂರು

ಅಕ್ರಮ, ಅವ್ಯವಹಾರ ಆರೋಪ ತಾಂತ್ರಿಕ ಸಮಿತಿಯಿಂದ ಮುಡಾ ಕಚೇರಿಯಲ್ಲಿ ತನಿಖೆ ಆರಂಭ

August 18, 2022

ಮೈಸೂರು, ಆ.17(ಆರ್‍ಕೆ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಲ್ಲಿ ನಡೆದಿದೆ ಎನ್ನಲಾದ ಭಾರೀ ಅಕ್ರಮ, ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ರಚನೆಯಾ ಗಿರುವ ತಾಂತ್ರಿಕ ಸಮಿತಿ ಸದಸ್ಯರು ಇಂದಿನಿಂದ (ಬುಧವಾರ) ತನಿಖೆ ಆರಂಭಿಸಿದ್ದಾರೆ.

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಟಿ.ವಿ. ಮುರಳಿ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ತಾಂತ್ರಿಕ ಸಮಿತಿಯ ಮೂವರು ಅಧಿಕಾರಿಗಳು ಇಂದು ಬೆಳಗ್ಗೆ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿ, ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ಅವರನ್ನು ಡಿಸಿ ಕಚೇರಿಯಲ್ಲಿ ಭೇಟಿ ಮಾಡಿದ ನಂತರ ಮಧ್ಯಾಹ್ನ ಮುಡಾ ಕಚೇರಿಗೆ ತೆರಳಿ ತನಿಖೆ ಆರಂಭಿಸಿದರು. ಆ ಸಂದರ್ಭ ಮುಡಾ ಕಮೀಷನರ್ ಜಿ.ಟಿ.ದಿನೇಶ್‍ಕುಮಾರ್, ನಗರ ಯೋಜಕ ಸದಸ್ಯ ಶೇಷ ಅವರ ನೇತೃತ್ವದಲ್ಲಿ ಆರೋಪ ಕೇಳಿಬಂದಿರುವ ವಿಷಯದ ಕುರಿತಂತೆ ಸಂಬಂಧಪಟ್ಟ ವಿಭಾಗದ ಅಧಿಕಾರಿಗಳಿಂದ ಕಡತಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಿದರು.

ಮುಡಾ ಸಭೆಗಳಲ್ಲಿ ಚರ್ಚೆಗೆ ಬಂದ ವಿಷಯಗಳು, ಕೈಗೊಂಡ ನಿರ್ಧಾರಗಳು, ಅವುಗಳ ಅನುಷ್ಠಾನ, ಕೈಗೊಂಡಿರುವ ಕಾಮಗಾರಿಗಳು, ಬಳಸಿರುವ ಅನುದಾನ ಕುರಿತಂತೆ ಪ್ರಾಧಿಕಾರದ ಇಂಜಿನಿಯರ್‍ಗಳು, ನಗರಯೋಜನಾ ವಿಭಾಗದ ಸಿಬ್ಬಂದಿ ಹಾಗೂ ಬಿಲ್ಲುಗಳಿಗೆ ಸಹಿ ಮಾಡಿರುವ ಮುಖ್ಯ ಲೆಕ್ಕಾಧಿಕಾರಿಗಳಿಂದ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿದ ಸಮಿತಿ ಸದಸ್ಯರು, ಸಂಬಂಧಪಟ್ಟ ದಾಖಲೆಗಳ ಪ್ರತಿಗಳನ್ನು ವಶಕ್ಕೆ ಪಡೆದುಕೊಂಡರು. ಕೆಲ ಖಾಸಗಿ ಬಡಾವಣೆಗಳಿಗೆ ನಕ್ಷೆ ಅನುಮೋದನೆ, ನಿವೇಶನಗಳ ಬಿಡುಗಡೆ, ಬದಲಿ ನಿವೇಶನ ಹಂಚಿಕೆ, ತುಂಡು ಜಾಗ ಮಂಜೂರಾತಿ, ಖಾತಾ-ಕ್ರಯ-ಹಕ್ಕುಪತ್ರ ನೀಡಿರುವ ಬಗ್ಗೆಯೂ ಸುದೀರ್ಘ ಪರಿಶೀಲನೆ ನಡೆಸಿ ಮಾಹಿತಿಗಳನ್ನು ಕಲೆ ಹಾಕಿದರು. ಈ ಹಿಂದಿನ ಮುಡಾ ಅಧ್ಯಕ್ಷರು, ಕಮೀಷನರ್ ವಿರುದ್ಧ ಹಾಗೂ ಕಮೀಷನರ್ ಅಧ್ಯಕ್ಷರ ವಿರುದ್ಧ ನೀಡಿರುವ ದೂರು ಹಾಗೂ ಪರಸ್ಪರ ಆರೋಪಗಳಿಗೆ ಸಂಬಂಧಿಸಿದಂತೆ ಕಡತಗಳನ್ನು ತರೆಸಿಕೊಂಡು ಸಂಜೆಯವರೆಗೂ ಪರಿಶೀಲಿಸಿದ ಮುರಳಿ ನೇತೃತ್ವದ ತನಿಖಾಧಿಕಾರಿಗಳು, ನಿಯಮಾನುಸಾರ ಕಡತಗಳ ವಿಲೇವಾರಿ ಮಾಡಲಾಗಿದೆಯೇ? ಅದಕ್ಕೆ ಪೂರಕ ಸರ್ಕಾರಿ ಆದೇಶಗಳನ್ನು ಉಲ್ಲೇಖಿಸಲಾಗಿ ದೆಯೇ? ಎಂಬುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರಲ್ಲದೆ, ಅನುದಾನದ ದುರ್ಬಳಕೆ, ಅಕ್ರಮ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿದ್ದಾರೆಂಬ ಕೆಲ ಆರ್‍ಟಿಐ ಕಾರ್ಯಕರ್ತರ ದೂರುಗಳ ಬಗ್ಗೆಯೂ ತೀವ್ರ ಪರಿಶೀಲನೆ ನಡೆಸಿದರು. ಬಿಲ್ಲುಗಳಿಗೆ ಹಣ ಪಾವತಿ ಮಾಡಿರುವ ಬಗ್ಗೆ ಹಾಗೂ ಮುಡಾ ಬ್ಯಾಂಕ್ ಖಾತೆಗೆ ಹಣ ಸಂದಾಯ ವಾಗಿರುವ ಕುರಿತಂತೆ ಮುಖ್ಯ ಲೆಕ್ಕಾಧಿಕಾರಿಗಳಿಂದ ಮಾಹಿತಿ ತರಿಸಿಕೊಂಡರು.
ಮುಡಾ ನಗರ ಯೋಜಕ ಸದಸ್ಯ ಶೇಷ ಅವರಿಂದ ನಕ್ಷೆ ಅನುಮೋದನೆ ಕುರಿತಂತೆ ಅಗತ್ಯ ಮಾಹಿತಿ ಪಡೆದುಕೊಂಡ ಅವರು, ಎಲ್ಲಾ ಆರು ವಲಯಗಳ ವಿಶೇಷ ತಹಸೀಲ್ದಾರ್‍ಗಳು, ವಲಯಾಧಿಕಾರಿಗಳು ಹಾಗೂ ಕೆಲ ವಿಭಾಗಗಳ ಕಚೇರಿ ಅಧೀಕ್ಷಕರುಗಳನ್ನು ಕರೆಸಿ ದೂರುಗಳ ಸಂಬಂಧ ಹೇಳಿಕೆಗಳನ್ನು ಪಡೆದುಕೊಂಡ ತನಿಖಾ ತಂಡದ ಅಧಿಕಾರಿಗಳು ಇಂದು ಮೈಸೂರಿನಲ್ಲೇ ವಾಸ್ತವ್ಯ ಹೂಡಿ ನಾಳೆ (ಗುರುವಾರ)ಯೂ ಪ್ರಾಧಿಕಾರದ ಸಭಾಂಗಣದಲ್ಲಿ ತನಿಖೆಯನ್ನು ಮುಂದುವರೆಸಲಿದ್ದಾರೆ. ಇಂದು ಮಧ್ಯಾಹ್ನ ಕಛೇರಿಗೆ ಆಗಮಿಸಿದ ತಂಡದ ಸದಸ್ಯರನ್ನು ಮುಡಾ ಕಮೀಷನರ್ ಜಿ.ಟಿ. ದಿನೇಶ್‍ಕುಮಾರ್ ಅವರು ಬರಮಾಡಿಕೊಂಡರು.

ಪ್ರಾಧಿಕಾರದ ಸಭೆಯಲ್ಲಿ ಕಾಯ್ದೆ, ನಿಯಮ ಹಾಗೂ ವಲಯ ನಿಯಮಗಳಿಗೆ ವಿರುದ್ಧವಾಗಿ ವಿಷಯಗಳನ್ನು ಮಂಡಿಸಿ ನಿರ್ಣಯ ಕೈಗೊಂಡಿರುವ ಬಗ್ಗೆ ಸಾರ್ವಜನಿಕ ರಿಂದ ದೂರುಗಳು ಬಂದಿದ್ದು, ಮುಡಾ ಅಧ್ಯಕ್ಷರ ವಿರುದ್ಧ ಆಯುಕ್ತರು ಹಾಗೂ ಆಯುಕ್ತರ ವಿರುದ್ಧ ಅಧ್ಯಕ್ಷರು ಪರಸ್ಪರ ಆರೋಪಿಸಿ ದೂರುಗಳನ್ನು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸರ್ಕಾರವು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಮುರಳಿ ನೇತೃತ್ವದಲ್ಲಿ ತಾಂತ್ರಿಕ ಸಮಿತಿಯನ್ನು ರಚಿಸಿತ್ತು. ಅದರಂತೆ ಇಂದು ತನಿಖೆ ಆರಂಭಿಸಿರುವ ಸಮಿತಿ ಸದಸ್ಯರು ಸಂಪೂರ್ಣ ಮಾಹಿತಿಯೊಂದಿಗೆ ಸರ್ಕಾರಕ್ಕೆ ತನಿಖಾ ವರದಿಯನ್ನು ಸಲ್ಲಿಸಲಿದ್ದಾರೆ.

Translate »