ರಾಜ್ಯದಲ್ಲಿ ಮತ್ಸ್ಯ ಕ್ರಾಂತಿಗೆ ನಿರ್ಧಾರ
News

ರಾಜ್ಯದಲ್ಲಿ ಮತ್ಸ್ಯ ಕ್ರಾಂತಿಗೆ ನಿರ್ಧಾರ

August 18, 2022

ಬೆಂಗಳೂರು, ಆ. 17(ಕೆಎಂಶಿ)-ಕೋವಿಡ್-19 ಸೋಂಕಿನ ನಂತರ ಜನರಲ್ಲಿ ಪೌಷ್ಠಿಕ ಆಹಾರ ಕೊರತೆ ನೀಗಿಸಲು ಯಥೇಚ್ಚ ಮೀನು ಸರಬ ರಾಜು ಮಾಡಲು ಸರ್ಕಾರ ನಿರ್ಧರಿಸಿದೆ.

ಪ್ರತಿ ಗ್ರಾಮ ಮತ್ತು ನಗರ ಪಟ್ಟಣಗಳಲ್ಲೂ ವಿವಿಧ ಬಗೆಯ ಮೀನುಗಳು ಸುಲಭವಾಗಿ ದಕ್ಕು ವಂತೆ ಮಾಡಲಾಗುವುದು ಎಂದು ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಎಸ್. ಅಂಗಾರ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಮೀನು ಮತ್ತು ಅದರ ಖಾದ್ಯ ಗಳು ಸುಲಭವಾಗಿ ದೊರಕಿಸಬೇಕೆಂಬ ಉದ್ದೇಶ ದಿಂದ ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಮೀನು ಊಟದ ಹೊಟೇಲ್‍ಗಳನ್ನು ಪ್ರಾರಂಭಿಸ ಲಾಗುವುದು ಎಂದರು. ಕೆಆರ್‍ಎಸ್, ಆಲಮಟ್ಟಿ, ಲಿಂಗನಮಕ್ಕಿ, ಭದ್ರಾ ಸೇರಿದಂತೆ ರಾಜ್ಯದ ಹನ್ನೆರಡು ಪ್ರಮುಖ ಜಲಾಶಯಗಳಲ್ಲಿ ಗರಿಷ್ಟ ಪ್ರಮಾಣದ ಮೀನು ಉತ್ಪಾದನೆ ಮಾಡಲು ತೀರ್ಮಾನಿಸಿದೆ.

ರಾಜ್ಯದಲ್ಲಿ ಮತ್ಸ್ಯ ಕ್ರಾಂತಿ ನಡೆಯಲಿದ್ದು ಇದಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ಮಾಡಿಕೊಂಡಿ ರುವುದಾಗಿ ವಿವರ ನೀಡಿದರು. ಮೀನುಗಾರಿಕಾ ಇಲಾಖೆಯ ವತಿಯಿಂದ ಬೆಂಗಳೂರು ಸೇರಿ ದಂತೆ ಕೆಲವು ಕಡೆ ಮೀನಿನ ಊಟದ ಹೋಟೆಲ್ ಗಳನ್ನು ಈ ಹಿಂದೆ ಸ್ಥಾಪಿಸಲಾಗಿದೆಯಾದರೂ ಹಣಕಾಸಿನ ಕೊರತೆಯ ಹಿನ್ನೆಲೆಯಲ್ಲಿ ವಿಸ್ತರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಖಾಸಗಿ ಸಹ ಭಾಗಿತ್ವದಡಿ ಮೀನುಗಾರಿಕೆ ಇಲಾಖೆ ರಾಜ್ಯದ ಎಲ್ಲೆಡೆ ಮೀನು ಊಟದ ಮನೆಗಳನ್ನು ಪ್ರಾರಂಭಿಸಲಿದೆ ಎಂದರು. ಆರಂಭಿಕ ಹಂತದಲ್ಲಿ ಬೆಂಗಳೂರಿನ ಐದು ಕಡೆ ಮೀನುಗಾರಿಕಾ ಇಲಾಖೆಯೇ ಹೊಸ ಮೀನಿನ ಊಟದ ಹೋಟೆಲ್‍ಗಳನ್ನು ಪ್ರಾರಂಭಿ ಸಲು ತೀರ್ಮಾನಿಸಲಾಗಿದ್ದು ಇದಕ್ಕೆ ಕೆರೆಗಳಿರುವ ಕಡೆ ಬಿಡಿಎ ಜಾಗ ಒದಗಿಸಲು ಒಪ್ಪಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮೀನನ್ನು ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಲು ನಿರ್ಧರಿಸಲಾಗಿದ್ದು ಇದಕ್ಕಾಗಿ ಎಲ್ಲ ಜಿಲ್ಲೆಗಳಲ್ಲಿ ಮೀನು ಮರಿ ಸಾಕಾಣಿಕೆ ಕೇಂದ್ರಗಳನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು,ಇಂತಹ ಸಾಕಾಣಿಕೆ ಕೇಂದ್ರವನ್ನು ಆಲಮಟ್ಟಿ ಜಲಾಶಯದಲ್ಲೂ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದರು. ಆಲಮಟ್ಟಿ ಜಲಾಶಯದಲ್ಲಿ ಮೀನು ಮರಿ ಸಾಕಾಣಿಕೆ ಮಾಡಲು ಇಪತ್ತೈದು ಎಕರೆ ಜಾಗವನ್ನು ನೀರಾವರಿ ಇಲಾಖೆ ಒದಗಿಸಿದ್ದು ಇದೇ ರೀತಿ ಕೆ.ಆರ್.ಎಸ್.ಲಿಂಗನಮಕ್ಕಿ,ಭದ್ರಾ ಸೇರಿದಂತೆ ಹನ್ನೆರಡು ಪ್ರಮುಖ ಜಲಾಶಯಗಳಲ್ಲಿ ಮೀನು ಮರಿ ಸಾಕಾಣಿಕೆ ಕೇಂದ್ರಗಳನ್ನು ಸ್ಥಾಪಿಸಲು,ಆ ಮೂಲಕ ಎಲ್ಲ ಜಲಾಶಯಗಳಲ್ಲಿ ಗರಿಷ್ಟ ಪ್ರಮಾಣದಲ್ಲಿ ಮೀನು ಉತ್ಪಾದಿಲು ತೀರ್ಮಾನಿಸಲಾಗಿದೆ ಎಂದರು.

ರಾಜ್ಯದಲ್ಲಿ ಒಳನಾಡು ಮೀನುಗಾರಿಕೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವುದಾಗಿ ನುಡಿದ ಅವರು,ಹೊರರಾಜ್ಯಗಳಿಂದ ಮೀನು ಮರಿಗಳನ್ನು ಆಮದು ಮಾಡಿಕೊಳ್ಳುವ ಅನಿವಾರ್ಯತೆಯಿಂದ ಇದುವರೆಗೆ ಇದು ನಮಗೆ ಸಾಧ್ಯವಾಗಿರಲಿಲ್ಲ.ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ಮೇಲಿದ್ದ ಇಂತಹ ಅವಲಂಬನೆಯನ್ನು ತಪ್ಪಿಸಲು ನಮ್ಮಲ್ಲೇ ಹೆಚ್ಚು ಮೀನು ಸಾಕಾಣಿಕಾ ಕೇಂದ್ರಗಳನ್ನು ಸ್ಥಾಪನೆ ಮಾಡುತ್ತಿರು ವುದರಿಂದ ಅನುಕೂಲವಾಗಲಿದೆ ಎಂದರು. ಪ್ರತಿ ಜಿಲ್ಲೆಗಳಲ್ಲಿ ಸ್ಥಳೀಯ ಅಗತ್ಯಗಳಿಗೆ ಅನುಗುಣವಾದ ಮೀನಿನ ತಳಿಗಳನ್ನು ಉತ್ಪಾದಿಸುವುದು ನಮ್ಮ ಉದ್ದೇಶ,ಮಡೆಂಜಿ, ಮರೆಂಜಿ ತಳಿಯ ಮೀನುಗಳು ದಕ್ಷಿಣ ಕನ್ನಡದಲ್ಲಿ ಹೆಚ್ಚು.ಇದೇ ರೀತಿ ಆಯಾ ಜಿಲ್ಲೆಗಳಿಗೆ ವಿಶಿಷ್ಟವಾದ ತಳಿಗಳು ಇದ್ದು ಅವನ್ನು ಅಭಿವೃದ್ದಿಪಡಿಸುವುದು ನಮ್ಮ ಯೋಚನೆ ಎಂದರು. ಕರಾವಳಿ ಭಾಗದಲ್ಲಿ ಸಮುದ್ರ ಕೊರತೆಯಿಂದ ಅಪಾರ ನಷ್ಟವಾಗುತ್ತಿದ್ದು ತಡೆಗೋಡೆಗಳನ್ನು ನಿರ್ಮಿಸುವ ಮೂಲಕ ತಾತ್ಕಾಲಿಕವಾಗಿ ಸಮಸ್ಯೆ ನಿವಾರಣೆ ಮಾಡಿದರೂ ಕೆಲವೇ ಕಾಲದಲ್ಲಿ ಅದು ಮರುಕಳಿಸುತ್ತಿದೆ.ಇದೇ ಕಾರಣಕ್ಕಾಗಿ ಉಲ್ಲಾಲದ ಬಟ್ಟಂಪಾಡಿ ಮತ್ತು ಮರವಂತೆಗಳಲ್ಲಿ ಎರಡು ಪ್ರತ್ಯೇಕ ತಂತ್ರಜ್ಞಾನಗಳನ್ನು ಪ್ರಾಯೋಗಿಕವಾಗಿ ಅಳವಡಿಸಿ ಸಮುದ್ರ ಕೊರೆತವನ್ನು ತಡೆಗಟ್ಟಲು ನಿರ್ಧರಿಸಲಾಗಿದೆ ಎಂದರು. ಬಟ್ಟಂಪಾಡಿಯಲ್ಲಿ ಸೀ ವೇವ್ ಬ್ರೇಕರ್ ತಂತ್ರಜ್ಞಾನ ಅಳವಡಿಸಲಾಗುವುದು ಇದೇ ರೀತಿ ಮರವಂತೆಯಲ್ಲೂ ಪ್ರತ್ಯೇಕ ತಂತ್ರಜ್ಞಾನ ಬಳಸಿ ಸಮುದ್ರ ಕೊರೆತವನ್ನು ತಡೆಗಟ್ಟಲಾಗುವುದು ಎಂದ ಅವರು,ಈ ತಂತ್ರಜ್ಞಾನ ಬೇರೆ ರಾಜ್ಯಗಳಲ್ಲಿ ಯಶಸ್ವಿಯಾ ಗಿದ್ದು ನಮ್ಮಲ್ಲೂ ಪರಿಣಾಮಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕಾಗಿ ಸುಮಾರು ಇಪ್ಪತ್ತೈದು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗು ವುದು ಎಂದ ಅವರು,ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಮುದ್ರ ಕೊರೆತ ತಡೆಗಟ್ಟಲು ಜಾರಿಗೊಳಿಸಿದ ಮುನ್ನೂರೈವತ್ತು ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಕಳಪೆಯಾ ಗಿದ್ದು ಈ ಸಂಬಂಧ ತನಿಖೆ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದರು.

ಸೆಪ್ರೆಂಬರ್ ಹತ್ತರೊಳಗಾಗಿ ತನಿಖೆಯನ್ನು ಪೂರ್ಣಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನುಡಿದ ಅವರು,ರಾಜ್ಯದಲ್ಲಿ ಬಂದರುಗಳ ಅಭಿವೃದ್ದಿಗೆ ವಿಶೇಷ ಕ್ರಮ ಕೈಗೊಳ್ಳಲಾಗಿದೆ ಎಂದರು. ವಾಣಿಜ್ಯ ವಹಿವಾಟುಗಳಿಗಾಗಿ ಕೊಚ್ಚಿನ್ ಸೇರಿದಂತೆ ಬೇರೆ ಬಂದರುಗಳ ಮೇಲೆ ನಾವು ಹೆಚ್ಚು ಅವಲಂಬಿತವಾಗಿದ್ದೆವಾದರೂ ಈಗ ಮಂಗಳೂರು ಬಂದರನ್ನು ಅಭಿವೃದ್ಧಿಪಡಿಸಿ ವಾಣಿಜ್ಯ ಚಟುವಟಿಕೆಗಳ ಕೇಂದ್ರ ಬಿಂದುವನ್ನಾಗಿ ಮಾಡಲು ತೀರ್ಮಾನಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು. ಬಂದರಿನಲ್ಲಿ ಹೆಚ್ಚು ಹಡಗು,ದೋಣಿಗಳು ಬಂದು ತಂಗಲು ಅವಕಾಶ ಮಾಡಿಕೊಡಲಾಗುವುದು ಎಂದ ಅವರು, ಆ ಮೂಲಕ ವಾಣಿಜ್ಯ ಚಟುವಟಿಕೆಗಳಿಗೆ, ಆಮದು-ರಪ್ತು ಕಾರ್ಯಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಸ್ಪಷ್ಟ ಪಡಿಸಿದರು.

Translate »