ಪುರಭನವದ ಆವರಣದ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ಡಿಸೆಂಬರ್ ವೇಳೆಗೆ ಪೂರ್ಣ
ಮೈಸೂರು

ಪುರಭನವದ ಆವರಣದ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ಡಿಸೆಂಬರ್ ವೇಳೆಗೆ ಪೂರ್ಣ

August 18, 2022

ಮೈಸೂರು, ಆ.17- ಸಾಂಸ್ಕøತಿಕ ನಗರಿ ಮೈಸೂರಿನ ಹೃದಯ ಭಾಗದಲ್ಲಿ ವಾಹನ ನಿಲುಗಡೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ 2011ರಲ್ಲಿ ಪುರಭವನದ ಆವರಣದಲ್ಲಿ 18.28 ಕೋಟಿ ರೂ ವೆಚ್ಚದಲ್ಲಿ ಆರಂಭಿಸಿದ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ಕಾಮಗಾರಿ ದಶಕಗಳ ಸುದೀರ್ಘ ಅವಧಿಯ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ದಸರಾ ಸಂದರ್ಭ ದಲ್ಲಿ ತಾತ್ಕಾಲಿಕವಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ. ದೇಶ-ವಿದೇ ಶದ ವಿವಿಧೆಡೆಯಿಂದ ಪ್ರವಾಸಿಗರನ್ನು ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿರುವ ಮೈಸೂರು ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಹೃದಯ ಭಾಗದಲ್ಲಿ ವಾಹನ ನಿಲುಗಡೆಯದ್ದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಪಾರ್ಕಿಂಗ್ ಸಮಸ್ಯೆ ಕಾಡಲಾರಂಭಿಸಿದ್ದು, ಪಾಲಿಕೆ ಹಾಗೂ ಪೊಲೀಸರಿಗೆ ತಲೆ ನೋವಾಗಿ ಪರಿಣಮಿ ಸಿದೆ. ಈ ಹಿನ್ನೆಲೆಯಲ್ಲಿ ಪುರಭವನದ ಆವರಣದಲ್ಲಿ 6 ಸಾವಿರ ಚ.ಅಡಿ ವಿಸ್ತೀರ್ಣದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಿಸಿ, 400 ಕಾರು ಹಾಗೂ 200 ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ದಶಕ ಕಳೆದರೂ ಉದ್ದೇಶಿತ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ಪೂರ್ಣಗೊಳ್ಳದ ಕಾರಣ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣಕ್ಕೆ 18.28 ಕೋಟಿ ರೂ. ಯೋಜನೆಗೆ ಗುತ್ತಿಗೆ ಪಡೆದಿದ್ದ ಹೈದ್ರಾಬಾದ್ ಮೂಲದ ಛಾಬ್ರಿಯಾ ಅಸೋಸಿಯೇಟ್ಸ್ ಸಂಸ್ಥೆ 2011ರ ಏಪ್ರಿಲ್ 29ರಂದು ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿತ್ತು. 2012ರ ಏಪ್ರಿಲ್ ತಿಂಗಳಲ್ಲಿ ಪೂರ್ಣಗೊಳಿಸುವ ಷರತ್ತುನೊಂದಿಗೆ ಕಾಮಗಾರಿ ಆರಂಭಿಸಿತ್ತು. ಆದರೆ, ಕಟ್ಟಡ ನಿರ್ಮಾಣದ ವಸ್ತುಗಳ ಬೆಲೆ ಏರಿಕೆ ಮುಂದಿಟ್ಟುಕೊಂಡು ಹೆಚ್ಚುವರಿ ಅನುಧಾನ ನೀಡುವಂತೆ ಪೀಡಿಸಿದ್ದ ಗುತ್ತಿಗೆದಾರ ಕಾಮಗಾರಿ ಸ್ಥಗಿತಗೊಳಿಸಿದ ಹೈದ್ರಾಬಾದ್‍ಗೆ ಪಲಾಯನ ಮಾಡಿದ್ದ.

ಏನಿದೆ ಕಟ್ಟಡದಲ್ಲಿ: ಸುಮಾರು 6000 ಚದರ ಅಡಿ ವಿಸ್ತೀರ್ಣದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲಾಗುತ್ತಿದೆ. ಮೂರು ಅಂತಸ್ಥಿನಲ್ಲಿ ಪಿಲ್ಲರ್‍ಗಳನ್ನು ಬಳಸಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 400 ಕಾರು ಹಾಗೂ 200 ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತದೆ. ಈ ಕಟ್ಟಡದ ಮೇಲ್ಭಾಗದಲ್ಲಿ ಬಯಲು ರಂಗಮಂದಿರ ನಿರ್ಮಿಸಲಾಗಿದೆ. ಈಗಾಗಲೇ ಬಯಲು ರಂಗಮಂದಿರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಪಾರ್ಕಿಂಗ್ ಕಟ್ಟಡ ಮಾತ್ರ ಶೇ.80ರಷ್ಟು ಪೂರ್ಣಗೊಂಡಿದ್ದು, ಶೇ.20 ರಷ್ಟು ಕಾಮಗಾರಿ ಬಾಕಿ ಇದೆ. ಅಲ್ಲದೆ, ದ್ವಿಚಕ್ರ ವಾಹನ ನಿಲುಗಡೆಗೆ ನಿರ್ಮಿಸಬೇಕಾದ ಕಟ್ಟಡದ ಕಾಮಗಾರಿಗೆ ಕೇವಲ ಪಿಲ್ಲರ್‍ಗಳನ್ನಷ್ಟೇ ಅಳವಡಿಸಲಾಗಿತ್ತು. ಆದರೆ ಈಗ ಕಾಮಗಾರಿ ಆರಂಭಿಸಲಾಗಿದೆ.

ತಾತ್ಕಾಲಿಕ ಪಾರ್ಕಿಂಗ್: ಪ್ರಸಕ್ತ ಸಾಲಿನ ನಾಡ ಹಬ್ಬ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಮೈಸೂರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದು ಖಚಿತ. ಈ ಹಿನ್ನೆಲೆಯಲ್ಲಿ ಪಾರ್ಕಿಂಗ್ ಸಮಸ್ಯೆ ಉದ್ಭವಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪುರ ಭವನದ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಪಾಲಿಕೆ ಉದ್ದೇಶಿಸಿದೆ. 2018 ಹಾಗೂ 19ನೇ ಸಾಲಿನ ದಸರಾ ಮಹೋತ್ಸವದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ಬಾರಿಯೂ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿರುವುದು ದಸರಾ ಸಂದರ್ಭದಲ್ಲಿ ಪ್ರವಾಸಿಗರಿಗೆ ಸಹಕಾರಿಯಾಗಲಿದೆ.

ಸ್ಥಗಿತಗೊಳಿಸದಂತೆ ಆಗ್ರಹ: 11 ವರ್ಷದ ಹಿಂದೆ ಆರಂಭವಾಗಿರುವ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡದ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಇಚ್ಛಾಶಕ್ತಿ ಪ್ರದರ್ಶಿಸದೇ ಇರುವುದಕ್ಕೆ ನಾಗರಿಕರು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಸ್ತುತ ಆರಂಭವಾಗಿರುವ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸದಂತೆ ಆಗ್ರಹಿಸಿದ್ದಾರೆ. ಅಲ್ಲದೇ ನಿಗದಿತ ಸಮಯದೊಳಗೆ ಈಗಲಾದರೂ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡವನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿದ್ದಾರೆ.

Translate »