ವೀಕೆಂಡ್ ಕಫ್ರ್ಯೂಗೆ 2ನೇ ದಿನವೂ ಮೈಸೂರು ಸ್ತಬ್ಧ
ಮೈಸೂರು

ವೀಕೆಂಡ್ ಕಫ್ರ್ಯೂಗೆ 2ನೇ ದಿನವೂ ಮೈಸೂರು ಸ್ತಬ್ಧ

April 26, 2021

ಮೈಸೂರು,ಏ.25(ಎಂಟಿವೈ)-ತೀವ್ರ ಸ್ವರೂಪ ಪಡೆದು ಎಡೆಬಿಡದೆ ಕಾಡುತ್ತಿರುವ ಕೊರೊನಾ ಎರಡನೇ ಅಲೆಯ ವೇಗಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ರಾಜ್ಯದಾದ್ಯಂತ ಜಾರಿಗೊಳಿಸಿರುವ ವೀಕೆಂಡ್ ಕಫ್ರ್ಯೂಗೆ ಮೈಸೂರಲ್ಲಿ ಎರಡನೇ ದಿನವಾದ ಭಾನು ವಾರವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನರು ಸ್ವಯಂ ಪ್ರೇರಣೆಯಿಂದ ಮನೆಯಲ್ಲಿಯೇ ಕ್ವಾರಂಟೈನ್ ಆಗುವ ಮೂಲಕ ಕೊರೊನಾ ಸೋಂಕು ಹರಡುವಿಕೆ ತಡೆಗೆ ಜಿಲ್ಲಾಡಳಿತಕ್ಕೆ ಸಹಕರಿಸಿದರು.

ರೂಪಾಂತರಗೊಂಡಿರುವ ಕೊರೊನಾ ವೈರಾಣು ಎರಡನೇ ಅಲೆ ಮೂಲಕ ತೀವ್ರ ಸ್ವರೂಪದಲ್ಲಿ ಜನರನ್ನು ಕಾಡುತ್ತಿದ್ದು, ಪರಿಸ್ಥಿತಿ ಹತೋಟಿಗೆ ಬಾರದಂತಹ ಸಂದಿಗ್ಧ ಪರಿಸ್ಥಿತಿ ನಿರ್ಮಿ ಸುತ್ತಿದೆ. 2ನೇ ಅಲೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗುತ್ತಿರು ವವರ ಸಂಖ್ಯೆ ಹಾಗೂ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿ ದ್ದರೆ, ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಏ.23 ರಿಂದ ಮೇ4ರವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಕೆಲವು ಕಟ್ಟುನಿಟ್ಟಿನ ನಿಯಮ ಪಾಲಿಸುವಂತೆ ನಿರ್ದೇಶಿಸಿದೆ. ವಾರಾಂತ್ಯ ದಲ್ಲಿ ಜನರು ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣಿಸುವುದು ಸಾಮಾನ್ಯ ಸಂಗತಿಯಾಗಿದ್ದು, ಕೊರೊನಾ ಸೋಂಕು ಹರಡುವಿಕೆ ಸಾಧ್ಯತೆ ಇದ್ದುದರಿಂದ ಏ.24 ಮತ್ತು 25 ಹಾಗೂ ಮೇ.1 ಮತ್ತು 2ರಂದು ವಾರಾಂತ್ಯ ಕಫ್ರ್ಯೂ(ವಿಕೇಂಡ್ ಕಫ್ರ್ಯೂ)ಗೆ ಆದೇಶಿಸ ಲಾಗಿದೆ. ಮೊದಲ ವಾರಾಂತ್ಯ ಕಫ್ರ್ಯೂ ಮೈಸೂರಲ್ಲಿ ಯಶಸ್ವಿ ಯಾಗಿದ್ದು, ಜಿಲ್ಲೆಯ ಜನತೆ ಸಂಪೂರ್ಣ ಸಹಕಾರ ನೀಡಿ ಕೊರೊನಾ ಮಹಾಮಾರಿ ವಿರುದ್ಧದ ಹೋರಾಟಕ್ಕೆ ಸಹಕರಿಸಿದ್ದಾರೆ.

ಬಿಕೋ ಎಂದ ಮೈಸೂರು: ಸದಾ ಜನ ಹಾಗೂ ವಾಹನ ದಟ್ಟಣೆ ಯಿಂದ ಗಿಜಿಗುಡುತ್ತಿದ್ದ ಮೈಸೂರು ನಗರ ಅಕ್ಷರಶಃ ಮೌನಕ್ಕೆ ಶರಣಾಗಿತ್ತು. ಹೃದಯ ಭಾಗವಂತೂ ಸ್ತಬ್ಧವಾಗಿತ್ತು. ಬೆರಳೆಣಿಕೆ ಯಷ್ಟು ವಾಹನ ಸಂಚಾರ ಹೊರತುಪಡಿಸಿದರೆ ಉಳಿದೆಲ್ಲಾ ಚಟುವಟಿಕೆ ಸ್ತಬ್ಧವಾಗಿ ಭಣಗುಡುತ್ತಿತ್ತು.

ಮೈಸೂರಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಡಿ.ದೇವರಾಜ ಅರಸ್ ರಸ್ತೆ, ಸಯ್ಯಾಜಿ ರಾವ್ ರಸ್ತೆ, ಅಶೋಕ ರಸ್ತೆ, ವಿನೋಬಾ ರಸ್ತೆ, ಸಂತೇಪೇಟೆ, ಕಾಳಿದಾಸ ರಸ್ತೆ, ಒಂಟಿಕೊಪ್ಪಲ್, ನ್ಯೂ ಕಾಂತರಾಜ ಅರಸ್ ರಸ್ತೆ ಸೇರಿಂತೆ ಬಹುತೇಕ ಎಲ್ಲಾ ರಸ್ತೆಗಳಲ್ಲೂ ಅಂಗಡಿ, ವಾಣಿಜ್ಯ ಮಳಿಗೆ ಮುಚ್ಚಿದ್ದವು. ಎಲ್ಲಾ ಬಡಾವಣೆಗಳು ಬಿಕೋ ಎನ್ನುತ್ತಿದ್ದವು. ವಾಹನ ಹಾಗೂ ಜನ ಸಂಚಾರವಿಲ್ಲದೆ ಶಾಂತ ವಾತಾವರಣ ನಿರ್ಮಾಣವಾಗಿತ್ತು.

ಹಸಿದವರಿಗೆ ಆಶ್ರಯವಾದ ಇಂದಿರಾ ಕ್ಯಾಂಟೀನ್: ವಾರಾಂತ್ಯ ಕಫ್ರ್ಯೂ ಹಿನ್ನೆಲೆಯಲ್ಲಿ ಹಲವು ಹೋಟೆಲ್‍ಗಳು ಮುಚ್ಚಲ್ಪಟ್ಟಿದ್ದರೆ, ಕೆಲವೇ ಕೆಲವು ಹೋಟೆಲ್‍ಗಳಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶವಿತ್ತು. ಇದರಿಂದ ಕೆಲವರು ಊಟ, ಉಪಹಾರ ಸಿಗದೆ ಪರದಾಡುತ್ತಿದ್ದರು. ಲಾಕ್‍ಡೌನ್ ವೇಳೆ ನೂರಾರು ಮಂದಿಗೆ ಹಸಿವು ತಣಿಸಿದ್ದ ಇಂದಿರಾ ಕ್ಯಾಂಟೀನ್ ಕಳೆದ 2 ದಿನದಿಂದ ವೀಕೆಂಡ್ ಕಫ್ರ್ಯೂನಲ್ಲಿ ತತ್ತರಿಸಿದ ಅಸಂಘಟಿತರು, ವಸತಿಹೀನರ ಹಸಿವು ತಣಿಸಲು ಯಶಸ್ವಿಯಾದವು. ವಿವಿಧೆಡೆ ಇರುವ ಇಂದಿರಾ ಕ್ಯಾಂಟೀನ್‍ಗೆ ಹಸಿದ ನೂರಾರು ಮಂದಿ ತೆರಳಿ 5 ರೂ ಹಾಗೂ 10 ರೂ.ಗೆ ಊಟ, ತಿಂಡಿ ಮಾಡಿ ಹಸಿವು ನೀಗಿಸಿಕೊಂಡರು. ಬೆರಳೆಣಿಕೆಯಷ್ಟಿದ್ದ ಹೋಟೆಲ್‍ಗಳಲ್ಲಿ ಹೆಚ್ಚು ಹಣ ನೀಡಿ ಊಟ ಮಾಡಲಾಗದೇ ಇದ್ದ ಹಲವು ಮಂದಿ ಇಂದಿರಾ ಕ್ಯಾಂಟೀನ್ ಅನ್ನೇ ಅವಲಂಭಿಸಿದರು. ಕೆಲವರ ಬಳಿ ಹಣ ಇಲ್ಲದೇ ಇದ್ದರೂ, ದಾರಿ ಹೋಕರು ಇಂದಿರಾ ಕ್ಯಾಂಟೀನ್‍ನಲ್ಲಿ ಊಟ ಕೊಡಿಸುವ ಮೂಲಕ ಮಾನವೀಯತೆ ಮೆರೆದರು.

ವಾಹನ ನೋಂದಣಿ ಸಂಖ್ಯೆ ನÀಮೂದು: ಮೈಸೂರಲ್ಲಿ ಕಫ್ರ್ಯೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಹೊರಗೆ ಬರುವವರಿಗೆ ಬಿಸಿ ಮುಟ್ಟಿಸಲು 60 ಕಡೆ ವಾಹನ ತಪಾಸಣೆಗೆ ಪಾಯಿಂಟ್ ಗುರುತಿಸಲಾಗಿತ್ತು. ರಸ್ತೆಯಲ್ಲಿ ಬರುತ್ತಿದ್ದ ಎಲ್ಲಾ ವಾಹನಗಳನ್ನು ತಡೆದು ಎಲ್ಲಿಂದ, ಎಲ್ಲಿಗೆ ಹೋಗುತ್ತಿರುವ ಬಗ್ಗೆ ಮಾಹಿತಿ ಪಡೆದರು. ಅನಗತ್ಯವಾಗಿ ಓಡಾಡುತ್ತಿರುವವರ ವಾಹನ ಸಂಖ್ಯೆಯನ್ನು ಬರೆದುಕೊಂಡು ಎಚ್ಚರಿಕೆ ನೀಡಿ, ಕಳುಹಿಸುತ್ತಿದ್ದರು. ಎರಕ್ಕಿಂತ ಹೆಚ್ಚು ಬಾರಿ ಸಂಚರಿಸುತ್ತಿದ್ದ ವಾಹನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಪೊಲೀಸರು, ಅವುಗಳ ಮಾಲೀಕರಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ನೋಟಿಸ್ ನೀಡಲು ವಾಹನಗಳ ಸಂಖ್ಯೆಯನ್ನು ಪಟ್ಟಿಮಾಡಿಕೊಳ್ಳುತ್ತಿದ್ದರು.

ರಸ್ತೆಗಿಳಿಯದೇ ಆಟೋ ರಿಕ್ಷಾ, ಟ್ಯಾಕ್ಸಿ: ಕಫ್ರ್ಯೂ ಹಿನ್ನೆಲೆ ಆಟೋ ರಿಕ್ಷಾ, ಟ್ಯಾಕ್ಸಿ ರಸ್ತೆಗಿಳಿಯಲಿಲ್ಲ. ಕೆಲವೇ ಕೆಲವು ಆಟೋ ರಿಕ್ಷಾಗಳು ಆಸ್ಪತ್ರೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಮುಂದೆ ಪ್ರಯಾಣಿಕರಿಗಾಗಿ ನಿಂತಿದ್ದವು. ಅದನ್ನು ಹೊರತುಪಡಿಸಿದರೆ ಬೇರೆ ಎಲ್ಲೂ ಆಟೋ ರಿಕ್ಷಾ, ಟ್ಯಾಕ್ಸಿಗಳ ಅನಗತ್ಯ ಸಂಚಾರ ಕಂಡು ಬರಲಿಲ್ಲ.

ಹೊರಗೆ ಬರದಂತೆ ಪೆÇಲೀಸರಿಂದ ಸೂಚನೆ: ನಗರದ ಪ್ರಮುಖ ರಸ್ತೆ, ಬಡಾವಣೆಗಳಲ್ಲಿ ಪೊಲೀಸರು ಮೈಕ್ ಮೂಲಕ ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಬರದಂತೆ ಸೂಚನೆ ಕೊಡುತ್ತಿದ್ದರು. ಪಿಸಿಆರ್ ವಾಹನಗಳಲ್ಲಿ ಸಂಚರಿಸುತ್ತಿದ್ದ ಸಿಬ್ಬಂದಿ ಧ್ವನಿವರ್ಧಕ ದಲ್ಲಿ ಪ್ರಚಾರ ಮಾಡಿ ಸಾರ್ವಜನಿಕರು ಯಾರು ಹೊರಬಾರದು. ಅನಗತ್ಯವಾಗಿ ಬಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ವಾಹನ ಜಪ್ತಿ ಮಾಡುವುದಾಗಿ ಎಚ್ಚರಿಕೆ ನೀಡುತ್ತಿದ್ದರು.

Translate »