ಕೊರೊನಾ ಸೋಂಕಿ ನಿಂದ ಮೃತಪಟ್ಟರೂ  ಮರಣ ಪ್ರಮಾಣ ಪತ್ರದಲ್ಲಿ ಸಾವಿನ ಕಾರಣ ನಮೂದಾಗದು
ಮೈಸೂರು

ಕೊರೊನಾ ಸೋಂಕಿ ನಿಂದ ಮೃತಪಟ್ಟರೂ ಮರಣ ಪ್ರಮಾಣ ಪತ್ರದಲ್ಲಿ ಸಾವಿನ ಕಾರಣ ನಮೂದಾಗದು

August 7, 2020

ಮೈಸೂರು,ಆ.6(ಆರ್‍ಕೆ)- ಕೊರೊನಾ ಸೋಂಕಿ ನಿಂದ ಮೃತಪಟ್ಟರೂ ಮರಣ ಪ್ರಮಾಣ ಪತ್ರ (Death Certificate)ದಲ್ಲಿ ಸಾವಿನ ಕಾರಣ (Cause of Death)ವನ್ನು ನಮೂದಿಸುವುದಿಲ್ಲ.

ಕೋವಿಡ್-19 ಸೋಂಕು ದೃಢಪಟ್ಟು ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಹೋಂ ಐಸೋ ಲೇಷನ್ ಅಥವಾ ಫೆಸಿಲಿಟಿ ಕ್ವಾರಂಟೈನ್ ಆದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆ ಅಂತಹವರ ಮರಣ ಪ್ರಮಾಣ ಪತ್ರದಲ್ಲಿ ‘ಕೊರೋನಾ ಸೋಂಕಿ ನಿಂದ ಸಾವು’ ಎಂದು ನಮೂದಿಸಲಾಗುತ್ತದೆ. ಅವರ ಕುಟುಂಬದವರು ಈ ಪ್ರಮಾಣ ಪತ್ರ ಸಲ್ಲಿಸಿ ಸರ್ಕಾರ ದಿಂದ ಪರಿಹಾರದ ಹಣ ಪಡೆಯಬಹುದು ಎಂಬ ಸುಳ್ಳು ಸುದ್ದಿ ಸಾರ್ವಜನಿಕ ವಲಯದಲ್ಲಿ ಹಬ್ಬಿದೆ.

ಆದರೆ ವಾಸ್ತವ ಸಂಗತಿ ವಿಭಿನ್ನವಾಗಿದೆ. ಯಾವುದೇ ಕಾರಣದಿಂದ ಸಾವನ್ನಪ್ಪಿದರೂ ಮೈಸೂರು ಮಹಾ ನಗರ ಪಾಲಿಕೆಯಾಗಲಿ, ಕೆ.ಆರ್. ಆಸ್ಪತ್ರೆಯಾಗಲೀ ಮರಣ ಪ್ರಮಾಣ ಪತ್ರ ವಿತರಿಸುವ ಯಾವುದೇ ಸರ್ಕಾರಿ ಪ್ರಾಧಿಕಾರಗಳು ವ್ಯಕ್ತಿಯ ಸಾವಿನ ಕಾರಣವನ್ನು ಡೆತ್ ಸರ್ಟಿಫಿಕೇಟ್‍ನಲ್ಲಿ ನಮೂದಿಸುವುದಿಲ್ಲ ಎಂದು ಮೈಸೂರು ಮಹಾನಗರ ಪಾಲಿಕೆ ಸಹಾಯಕ ಸಾಂಖ್ಯಿಕ ಅಧಿಕಾರಿ ಅನಿಲ್ ಕ್ರಿಸ್ಟಿ ತಿಳಿಸಿದ್ದಾರೆ.

ವ್ಯಕ್ತಿಯ ಸಾವಿನ ಕಾರಣವನ್ನು ಬಹಿರಂಗಪಡಿ ಸದೇ ಗೌಪ್ಯವಾಗಿರಿಸ ಬೇಕೆಂಬ ನಿಯಮ ರಾಜ್ಯದಲ್ಲಷ್ಟೇ ಅಲ್ಲದೆ, ದೇಶಾ ದ್ಯಂತ ಚಾಲ್ತಿಯಲ್ಲಿ ರುವುದರಿಂದ ಮರಣ ಪ್ರಮಾಣ ಪತ್ರದ ನಮೂನೆಯಲ್ಲಿ (ನಮೂನೆ-6) ಸಾವಿನ ಕಾರಣ ಎಂಬ ಕಾಲಂ ಅನ್ನು ಮುದ್ರಿಸಿಲ್ಲ. ಹಾಗಾಗಿ ಎಲ್ಲಿಯೂ ಸಾವಿನ ಕಾರಣವನ್ನು ತೋರಿ ಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜನನ-ಮರಣ ನೋಂದಣಿ ಅಧಿನಿಯಮ 1969ರ 12/17ನೇ ಪ್ರಕರಣ ಹಾಗೂ ಕರ್ನಾಟಕ ಜನನ-ಮರಣ ನೋಂದಣಿ ನಿಯಮಗಳು 199ರ ನಿಯಮ 8/13ರ ಮೇರೆಗೆ ವಿತರಿಸಲಾಗುವ ಡೆತ್ ಸರ್ಟಿಫಿüಕೇಟ್‍ನಲ್ಲಿ ‘ಮರಣದ ಕಾರಣ’ಗಳ ಬಗ್ಗೆ ಬಹಿರಂಗಗೊಳಿಸು ವಂತಿಲ್ಲ’ ಎಂಬ ಸೂಚನೆಯನ್ನೂ ಸಹ ಸ್ಪಷ್ಟವಾಗಿ ಪ್ರಿಂಟ್ ಮಾಡಲಾಗಿದೆ. ಮೈಸೂರು ಮಹಾನಗರ ಪಾಲಿಕೆಯ ಬಡಾವಣೆಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟರೆ ಹಾಗೂ ಸ್ಮಶಾನ, ಅನಿಲ ಅಥವಾ ವಿದ್ಯುತ್ ಚಿತಾಗಾರಗಳಲ್ಲಿ ಅಂತ್ಯಕ್ರಿಯೆ ನಡೆಸಿದರೆ ಅಲ್ಲಿಂದ ಬರುವ ಮಾಹಿತಿ ಆಧಾರದಲ್ಲಿ ಮೈಸೂರು ಮಹಾ ನಗರ ಪಾಲಿಕೆಯ ಜನನ-ಮರಣ ಪ್ರಮಾಣ ಶಾಖೆ ಯಲ್ಲಿ ಕೇವಲ 5 ರೂ (ಪ್ರತೀ ಪ್ರತಿಗೆ) ಶುಲ್ಕ ಪಾವತಿಸಿ ಕೊಂಡು ಮರಣ ಪ್ರಮಾಣ ಪತ್ರವನ್ನು ಸಂಬಂಧಿಕರಿಗೆ ವಿತರಿಸಲಾಗುವುದು. ಕೆ.ಆರ್.ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮೃತಪಟ್ಟರೆ ಆ ಆಸ್ಪತ್ರೆಗಳ ಸ್ಥಾನಿಕ ವೈದ್ಯಾಧಿಕಾರಿ(ಖಒಔ)ಗಳೇ ಸಂಬಂಧಿಕರಿಂದ ಅರ್ಜಿ ಪಡೆದು ನಿಗದಿತ ಶುಲ್ಕ ಪಾವತಿಸಿಕೊಂಡು ಮರಣ ಪ್ರಮಾಣ ಪತ್ರವನ್ನು ನೀಡುವ ವ್ಯವಸ್ಥೆ ಇದೆ.

ಕೆಆರ್.ಆಸ್ಪತ್ರೆಯಲ್ಲಿ ಸಾವನ್ನಪ್ಪಿದವರ ಮರಣ ಪ್ರಮಾಣ ಪತ್ರವನ್ನು ಅಲ್ಲಿಯೇ ನೀಡಲಾಗುತ್ತಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದವರ ಡೆತ್ ಸರ್ಟಿಫಿ ಕೇಟ್ ಅನ್ನೂ ಸಹ ಅದೇ ಆಸ್ಪತ್ರೆಯಲ್ಲಿ ನೀಡಬೇಕು. ಆದರೆ ಪ್ರಕ್ರಿಯೆ ಆರಂಭಿಸಲು ಜಿಲ್ಲಾಧಿಕಾರಿಗಳು ಇನ್ನೂ ಆದೇಶ ನೀಡದಿರುವುದರಿಂದ ಸಂಬಂಧಿಕರಿಗೆ ತೊಂದರೆ ಉಂಟಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೌಂಟರ್ ತೆರೆದು ಇಂಟರ್‍ನೆಟ್, ಸಾಫ್ಟ್‍ವೇರ್ ತಂತ್ರಜ್ಞಾನ ಅಳವಡಿಸಿ ಡೆತ್ ಸರ್ಟಿಫಿಕೇಟ್ ಫಾಮ್ರ್ಯಾಟ್ ಗಳಿಗೆ ಸಹಿ ಮಾಡುವ ಅಧಿಕಾರಿ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇನ್ನೊಂದು ವಾರದಲ್ಲಿ ಅಲ್ಲಿಯೂ ಮರಣ ಪ್ರಮಾಣ ಪತ್ರ ವಿತರಿಸುವ ಕಾರ್ಯ ಆರಂಭ ವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾಡಳಿತದಿಂದಲೇ ಕೊರೊನಾ  ಸೋಂಕಿನಿಂದ ಸತ್ತವರ ಅಂತ್ಯಕ್ರಿಯೆ
ಮೈಸೂರು, ಆ.6(ಆರ್‍ಕೆ)- ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕೋವಿಡ್-19 ಮಾರ್ಗಸೂಚಿಯನ್ವಯ ಅಗತ್ಯ ಮುಂಜಾಗ್ರತಾ ಕ್ರಮ ಗಳೊಂದಿಗೆ ನೆರವೇರಿಸಲಾಗುತ್ತಿದೆ.

ಮೈಸೂರಿನ ವಿಜಯನಗರ 4ನೇ ಹಂತದಲ್ಲಿ ಮುಡಾದಿಂದ ನಿರ್ಮಿಸಿರುವ ಹೈಟೆಕ್ ಅನಿಲ ಮತ್ತು ವಿದ್ಯುತ್ ಚಿತಾಗಾರ, ಟಿಪ್ಪು ಸರ್ಕಲ್ ಬಳಿಯ ಖಬರ್‍ಸ್ತಾನ್, ಬನ್ನಿಮಂಟಪದ ಹೈವೇ ಸರ್ಕಲ್ ಬಳಿಯ ಜೋಡಿ ತೆಂಗಿನಮರ ರಸ್ತೆಯ ಸ್ಮಶಾನ ಹಾಗೂ ರಮ್ಮನಹಳ್ಳಿ ಸ್ಮಶಾನದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.

ಜೋಡಿ ತೆಂಗಿನಮರ ರಸ್ತೆಯ ಸ್ಮಶಾನ ಹೊರತುಪಡಿಸಿ ಉಳಿದ 3 ಕಡೆ ಈಗಾಗಲೇ ಅಂತ್ಯಸಂಸ್ಕಾರ ಮಾಡಲಾಗು ತ್ತಿದ್ದು, ಬಹುತೇಕ ಸಂಬಂಧಿಕರು ಸುಡುವ ಪ್ರಕ್ರಿಯೆ ಬಯಸು ತ್ತಿರುವುದರಿಂದ ಹೂಳುವ ಪದ್ಧತಿ ಕಡಿಮೆ ಇದೆ ಎಂದು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 38 ಸ್ಮಶಾನಗಳಿವೆಯಾದರೂ, ಕೋವಿಡ್-19 ವೈರಸ್ ಸೋಂಕಿನಿಂದ ಮೃತಪಟ್ಟವರ ಅಂತ್ಯ ಕ್ರಿಯೆಗೆ ಕೇವಲ 4 ಸ್ಮಶಾನಗಳನ್ನು ಗುರುತಿಸಲಾಗಿದೆ. ಆಗಸ್ಟ್ 5ರ ಸಂಜೆವರೆಗೆ ಮೈಸೂರಲ್ಲಿ 194 ಮಂದಿಯ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಆ ಪೈಕಿ ವಿಜಯನಗರ 4ನೇ ಹಂತದ ಅನಿಲ ಮತ್ತು ವಿದ್ಯುತ್ ಚಿತಾಗಾರದಲ್ಲಿ ದಹನ ಪದ್ಧತಿಯಂತೆ ಬಹುತೇಕ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋವಿಡ್ ಆಸ್ಪತ್ರೆ, ಕೆ.ಆರ್. ಆಸ್ಪತ್ರೆ ಅಥವಾ ಇನ್ನಿತರ ಆಸ್ಪತ್ರೆಗಳಲ್ಲಿ ಸೋಂಕಿತರು ಮೃತಪಟ್ಟ ಬಗ್ಗೆ ಮಾಹಿತಿ ಬಂದ ತಕ್ಷಣವೇ ಪಾಲಿಕೆಯ ವಾಹನ ಹಾಗೂ ಸಿಬ್ಬಂದಿ ಅಲ್ಲಿಗೆ ಹೋಗಿ ಪಿಪಿಇ ಕಿಟ್ ಧರಿಸಿ, ಮೃತದೇಹವನ್ನು ಸುರಕ್ಷಿತವಾಗಿ ಪ್ಯಾಕ್ ಮಾಡಿ, ಸ್ಮಶಾನಕ್ಕೆ ಸಾಗಿಸಲಾಗುತ್ತದೆ.

ಸ್ಥಾನಿಕ ವೈದ್ಯಾಧಿಕಾರಿಗಳು ಮೃತರ ಸಂಬಂಧಿಕರಿಗೆ ಮಾಹಿತಿ ನೀಡಿ, ರಕ್ತ ಸಂಬಂಧಿಯೊಬ್ಬರನ್ನು ಕರೆಸಿಕೊಂಡು ಸಹಿ ಪಡೆದ ನಂತರವೇ ಮೃತದೇಹವನ್ನು ಅಂತ್ಯಕ್ರಿಯೆ ನಡೆಸುವ ಸಿಬ್ಬಂದಿಗೆ ಹಸ್ತಾಂತರಿಸುತ್ತಾರೆ. ಹಾಗೆಯೇ ಸಂಬಂಧಿಕರು ಬಯಸಿದ ಪದ್ಧತಿಯಂತೆ, ಇಬ್ಬರು ಅಥವಾ ಮೂವರನ್ನು ಮಾತ್ರ ಸ್ಮಶಾನದ ಬಳಿ ಬರಲು ಹೇಳಿ, ಅವರಿಗೆ ಪಿಪಿಇ ಕಿಟ್ ಧರಿಸಿ, ಪೂಜಾ ವಿಧಿ-ವಿಧಾನ ಪೂರೈಸಿದ ನಂತರವೇ ಅಂತ್ಯಕ್ರಿಯೆ ನಡೆಸಿ ಮರುದಿನ ಅವರಿಗೆ ಚಿತಾಭಸ್ಮವನ್ನು ನೀಡಲಿದ್ದಾರೆ. ಸಂಬಂಧಿಕರು ಅದನ್ನು ಕೊಂಡೊಯ್ದು ತಮ್ಮ ಸಂಪ್ರದಾಯದಂತೆ ಶ್ರೀರಂಗಪಟ್ಟಣ ಬಳಿಯ ಪಶ್ಚಿಮ ವಾಹಿನಿಯಲ್ಲಿ ವಿಸರ್ಜನೆ ಮಾಡಿ ಬರುತ್ತಿದ್ದಾರೆ.

Translate »