ಮೈಸೂರು, ಅ.8(ಆರ್‍ಕೆ)-ಜಂಬೂ ಸವಾರಿ ಯಲ್ಲಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ವಿಗೆ 350 ಕೆ.ಜಿ. ತೂಕದ ಮರಳಿನ ಮೂಟೆ ಭಾರ ಹೊರುವ ತಾಲೀಮು ಇಂದಿನಿಂದ ಆರಂಭವಾಯಿತು. ಮೈಸೂರಿನ ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ಅಭಿಮನ್ಯುವಿಗೆ ಪೂಜೆ ಸಲ್ಲಿಸಿದ ನಂತರ ಗಾದಿ ನಮ್ದಾ (ಕುಷನ್ ಹಾಸಿಗೆ) ಮತ್ತು ಮರಳಿನ ಮೂಟೆಯನ್ನು ಆನೆ ಮಾವುತರು ಹಾಗೂ ಕಾವಾಡಿಗಳ ಸಹಾಯದಿಂದ ಅರ ಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕಟ್ಟಿದರು.
ಕಾಟನ್‍ನಂತಹ ಸಾಫ್ಟ್ ಬಟ್ಟೆಗಳನ್ನು ಹಗ್ಗ ಕಟ್ಟುವ ಜಾಗಕ್ಕೆ ಹಾಕಿ ಕುಷನ್ ಹಾಸಿಗೆಯನ್ನು ಅಭಿಮನ್ಯುವಿನ ಮೇಲಿಟ್ಟು ಕಟ್ಟಿದ ನಂತರ ಅದರ ಮೇಲೆ 350 ಕೆ.ಜಿ. ತೂಕದ ಮರಳು ಮೂಟೆಯನ್ನು ಹೊರಿಸಿ, ಹಗ್ಗದಿಂದ ಬಿಗಿ ಯಾಗಿ ಕಟ್ಟಲಾಯಿತು. ಅದರ ಮೇಲೆ ಕಬ್ಬಿ ಣದ ತೊಟ್ಟಿಲನ್ನೂ ಕಟ್ಟಿದ ಮೇಲೆ ಸುಮಾರು 750 ಕೆ.ಜಿ. ತೂಗುವ ಭಾರವನ್ನು ಹೊತ್ತು ಅಭಿಮನ್ಯು ಇತರ ಆನೆಗಳಾದ ವಿಜಯ, ಕಾವೇರಿ, ಗೋಪಿ ಮತ್ತು ವಿಕ್ರಮನೊಂದಿಗೆ ಅರಮನೆ ಆವರಣದಲ್ಲಿ ನಿಧಾನವಾಗಿ ಹೆಜ್ಜೆ ಹಾಕಿದ. ಮಾವುತ ವಸಂತ ಆನೆಗಳ ತಾಲೀಮಿನಲ್ಲಿ ಸಾಗಿದರೆ,ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಜಿ.ಅಲೆಗ್ಸಾಂಡರ್, ಪಶುವೈದ್ಯಾಧಿಕಾರಿ ಡಾ.ನಾಗರಾಜ್ ಹಾಗೂ ಆನೆ ಪೋಷಕರಾದ ರಂಗರಾಜು ಮತ್ತು ಅಕ್ರಂ ತಾಲೀಮಿನ ಉಸ್ತುವಾರಿ ವಹಿಸಿದ್ದರು. ಕಳೆದ ವರ್ಷ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡ ಆನೆಗಳು ಅರಮನೆ ಹೊರಗೆ ವಿಜಯದಶಮಿ ಮೆರವಣಿಗೆ ಮಾರ್ಗದಲ್ಲಿ ಬನ್ನಿಮಂಟ ಪದ ಪಂಜಿನ ಕವಾಯಿತು ಮೈದಾನ ದವರೆಗೆ ಸಾಗಿ ತಾಲೀಮು ನಡೆಸಿದ್ದವು. ಆದರೆ ಕೊರೊನಾ ಹಿನ್ನೆಲೆ ಈ ಬಾರಿ ಸರಳವಾಗಿ ದಸರಾ ಆಚರಿಸುತ್ತಿರುವುದರಿಂದ ಅರಮನೆ ಆವರಣದಲ್ಲಿ ಮಾತ್ರ ಭಾರ ಹೊರುವ ತಾಲೀಮು ನಡೆಸಲಾಗುತ್ತಿದೆ.