ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಕೋರಿಕೆ ವರ್ಗಾವಣೆಯ ಕೌನ್ಸಿಲಿಂಗ್ ಸ್ಥಗಿತ: ಪ್ರಕ್ರಿಯೆ ಮುಂದುವರಿಸಲು ಆಗ್ರಹಿಸಿ ಪ್ರತಿಭಟನೆ
ಮೈಸೂರು

ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಕೋರಿಕೆ ವರ್ಗಾವಣೆಯ ಕೌನ್ಸಿಲಿಂಗ್ ಸ್ಥಗಿತ: ಪ್ರಕ್ರಿಯೆ ಮುಂದುವರಿಸಲು ಆಗ್ರಹಿಸಿ ಪ್ರತಿಭಟನೆ

October 29, 2018

ಮೈಸೂರು:  ಮೈಸೂ ರಿನ ನಾರಾಯಣಶಾಸ್ತ್ರಿ ರಸ್ತೆ ಎನ್‍ಟಿಎಂ ಶಾಲಾವರಣದಲ್ಲಿ ಭಾನುವಾರ ಆರಂಭ ವಾದ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಕೋರಿಕೆ ವರ್ಗಾವಣೆಯ ಕೌನ್ಸಿಲಿಂಗ್ ಅನ್ನು ಏಕಾಏಕಿ ಸ್ಥಗಿತಗೊಳಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕ್ರಮ ವನ್ನು ಖಂಡಿಸಿ ನೂರಾರು ಶಿಕ್ಷಕರು ಪ್ರತಿ ಭಟನೆ ನಡೆಸಿದ ಪ್ರಸಂಗ ನಡೆಯಿತು.

ಡಿಡಿಪಿಐ ಎಸ್.ಮಮತಾ ಸಮ್ಮುಖ ದಲ್ಲಿ ಸಹ ಶಿಕ್ಷಕರ ಕೋರಿಕೆ ವರ್ಗಾವಣೆ ಕಾರ್ಯ ಬೆಳಿಗ್ಗೆ 9 ಗಂಟೆಯಿಂದ ಆರಂಭ ಗೊಂಡಿತು. ಅಲ್ಲಿವರೆಗೆ 25ಕ್ಕೂ ಹೆಚ್ಚು ಮಂದಿಗೆ ಅವರ ಕೋರಿಕೆಯನ್ನು ಪರಿಶೀಲಿಸಿ ವರ್ಗಾವಣೆ ಆದೇಶವನ್ನು ನೀಡಲಾಗಿತ್ತು. ಆದರೆ 11 ಗಂಟೆಯ ವೇಳೆಗೆ ವರ್ಗಾವಣೆ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ ಡಿಡಿಪಿಐ ಅವರಿಗೆ ಸಂದೇಶ ಬಂದ ಹಿನ್ನೆಲೆಯಲ್ಲಿ ಡಿಡಿಪಿಐ ಎಸ್.ಮಮತಾ ಅವರು ಕೌನ್ಸಿಲಿಂಗ್ ಸ್ಥಗಿತಗೊಳಿಸಿದರು. ಈ ಕುರಿತು ಶಿಕ್ಷಕರಿಗೆ ಮಾಹಿತಿ ನೀಡಿದರು.

ಕೌನ್ಸಿಲಿಂಗ್ ಅನ್ನು ಏಕಾಏಕಿ ಸ್ಥಗಿತಗೊಳಿ ಸಿದ ಇಲಾಖೆ ಅಧಿಕಾರಿಗಳ ಕ್ರಮ ಶಿಕ್ಷಕ ರನ್ನು ಕೆರಳಿಸಿತು. ಇದರಿಂದ ಸ್ಥಳದಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಪ್ರತಿಭಟನೆಗಿಳಿದ ಶಿಕ್ಷಕರು, ಇಲಾಖೆ ಅಧಿಕಾರಿ ಗಳ ವಿರುದ್ಧ ಘೋಷಣೆ ಕೂಗಿದರು. ಈಗಲೇ ವರ್ಗಾವಣೆ ಪ್ರಕ್ರಿಯೆಯನ್ನು ಮುಂದು ವರಿಸಬೇಕು ಎಂದು ಆಗ್ರಹಿಸಿದರು.

ಮೊದಲೇ ಪ್ರಕಟಿಸಿದ್ದಂತೆ ಅ.23ರಿಂದ ವರ್ಗಾವಣೆ ಕೌನ್ಸಿಲಿಂಗ್ ನಡೆಯಬೇಕಿತ್ತು. ಆದರೆ ಅದನ್ನು ತಾಂತ್ರಿಕ ಕಾರಣ ನೀಡಿ, ಅ.25ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ಮತ್ತೊಮ್ಮೆ ಅ.28ಕ್ಕೆ ಕೌನ್ಸಿಲಿಂಗ್ ಮುಂದೂಡಲಾಗಿತ್ತು. ಸಾಕಷ್ಟು ವರ್ಷಗಳಿಂದ ವರ್ಗಾವಣೆಯನ್ನೇ ಕಾಣದ ನೂರಾರು ಶಿಕ್ಷಕರು ಆಸೆಯಿಂದ ಕೌನ್ಸಿಲಿಂಗ್ ನಲ್ಲಿ ಭಾಗವಹಿಸಿದ್ದರು. ಆದರೆ ಬೆಳಿಗ್ಗೆ ಒಂದೆರಡು ಗಂಟೆ ಕೌನ್ಸಿಲಿಂಗ್ ನಡೆದು ಏಕಾಏಕಿ ಸ್ಥಗಿತಗೊಳಿಸಲಾಗಿದೆ. ಇದ ರಿಂದ ಸಾಕಷ್ಟು ಸಹ ಶಿಕ್ಷಕರು ತೊಂದರೆ ಗೊಳಗಾಗಿದ್ದಾರೆ. ಕೌನ್ಸಿಲಿಂಗ್ ನಡೆಸಲೇ ಬೇಕು ಎಂದು ಪ್ರತಿಭಟನಾನಿರತ ಶಿಕ್ಷಕರು ಒತ್ತಾಯಿಸಿದರು. ಮೈಸೂರು ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಶಿಕ್ಷಕರು ತಮಗಾದ ಅನ್ಯಾಯಕ್ಕೆ ಖಂಡಿ ಸಿದರು. ಇದರಲ್ಲಿ ಕೆಲವು ಶಿಕ್ಷಕರು ಗುಡ್ಡಗಾಡು ಪ್ರದೇಶಗಳಲ್ಲಿ ಹತ್ತಾರು ವರ್ಷಗಳಿಂದ ವರ್ಗಾವಣೆಯನ್ನೇ ಕಾಣದೆ ಇದ್ದಲ್ಲೇ ಇದ್ದು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದ ಬಗ್ಗೆ `ಮೈಸೂರು ಮಿತ್ರ’ನೊಂದಿಗೆ ದೂರಿದರು. ಅವಿವಾಹಿತರು, ವಿಧವೆಯರು, ಅಂಗವಿಕಲರು ಹೀಗೆ ಅನೇಕ ಶಿಕ್ಷಕಿಯರು ಕನಿಷ್ಠ 50ರಿಂದ 100 ಕಿ.ಮೀ.ವರೆಗೂ ಅಲೆದು, ಹತ್ತಾರು ವರ್ಷದಿಂದ ವರ್ಗಾ ವಣೆಯಿಲ್ಲದೆ ಕಷ್ಟಪಟ್ಟಿದ್ದೇವೆ. ಈಗ ವರ್ಗಾವಣೆಯ ಆಶಯದೊಂದಿಗೆ ಕೌನ್ಸಿಲಿಂಗ್‍ನಲ್ಲಿ ಭಾಗವಹಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಏಕಾಏಕಿ ಕೌನ್ಸಿಲಿಂಗ್ ಸ್ಥಗಿತಗೊಳಿಸಿರುವುದು ಯಾವ ನ್ಯಾಯ? ಎಂದು ಅನೇಕ ಅವಿವಾಹಿತ ಶಿಕ್ಷಕಿಯರು, ವಿಧವಾ ಮತ್ತು ಅಂಗವಿಕಲ ಶಿಕ್ಷಕಿಯರು, ಶಿಕ್ಷಕರು ದೂರಿದರು. ಈ ವರ್ಗಾವಣೆ ಏಕಾಏಕಿ ಸ್ಥಗಿತಗೊಳಿಸಿರುವುದರ ಹಿಂದೆ ನಗರ ಪಟ್ಟಣಗಳಲ್ಲಿ ಹತ್ತಾರು ವರ್ಷಗಳಿಂದ ಇರುವ ಪಟ್ಟಭದ್ರ ಹಿತಾಸಕ್ತ ಶಿಕ್ಷಕರ ಕೈವಾಡವಿದೆ ಎಂದು ಆರೋಪಿಸಿದರು.

ಕಾಡಲ್ಲಿರುವ ಶಿಕ್ಷಕರು ಕಾಡಿನಲ್ಲೇ ಇರಬೇಕೇ? ಕಾಡಲ್ಲಿರುವ ಶಿಕ್ಷಕರು ಕಾಡಿನಲ್ಲೇ ಇರಬೇಕೇ? ಪಟ್ಟಣಗಳಲ್ಲಿರುವ ಶಿಕ್ಷಕರು ಪಟ್ಟಣಗಳಲ್ಲೇ ಇರಬೇಕೇ? ಎಂದು ಮಹಿಳಾ ಶಿಕ್ಷಕಿಯೊಬ್ಬರು ದೊಡ್ಡ ಧ್ವನಿಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವು ಶಿಕ್ಷಕ, ಶಿಕ್ಷಕಿಯರು ತಮ್ಮ ವರ್ಗಾವಣೆ ಸ್ಥಗಿತದ ಹಿಂದೆ ರಾಜಕೀಯ ಅಡಗಿದೆ. ನಾವು ಯಾವ ರಾಜಕಾರಣಿ ಬಳಿಗೂ ಹೋಗುವುದಿಲ್ಲ. ನಮಗೆ ನ್ಯಾಯ ಬೇಕು. ನಾವು ಕೇಳಿದ ಕಡೆಗೆ ವರ್ಗಾವಣೆ ಕೊಡಬೇಕು ಎಂದು ಆಗ್ರಹಿಸಿದರು. ಈ ಪ್ರತಿಭಟನೆ ನಡುವೆಯೇ ಡಿಡಿಪಿಐ ಎಸ್.ಮಮತಾ ಅವರು ವರ್ಗಾವಣೆ ಕಾರ್ಯಕ್ಕೆಂದು ತಂದಿದ್ದ ಕಂಪ್ಯೂಟರ್ ಸೇರಿದಂತೆ ಇನ್ನಿತರ ಕಡತಗಳನ್ನು ಕೊಂಡೊಯ್ದರು.

ಆಯುಕ್ತರ ಆದೇಶವನ್ನಷ್ಟೇ ಪಾಲಿಸಿದ್ದೇನೆ: ಡಿಡಿಪಿಐ ಎಸ್.ಮಮತಾ
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದಂತೆ ನಾನು ಶಿಕ್ಷಕರ ವರ್ಗಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಿರುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎಸ್.ಮಮತಾ `ಮೈಸೂರು ಮಿತ್ರ’ನಿಗೆ ತಿಳಿಸಿದರು. ಭಾನುವಾರ ಬೆಳಿಗ್ಗೆ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಆರಂಭವಾಗಿತ್ತು. 1ರಿಂದ 400 ಕ್ರಮಸಂಖ್ಯೆವರೆಗೆ ನಡೆಯುವುದಿತ್ತು. ಬೆಳಿಗ್ಗೆ 11.30ರವರೆಗೆ ಶಿಕ್ಷಕರು ಕೋರಿದ್ದ ಸ್ಥಳಗಳಿಗೆ 23 ಮಂದಿಯ ಪ್ರಕ್ರಿಯೆ ನಡೆದು ಅವರು ಆಯ್ಕೆ ಮಾಡಿದ ಸ್ಥಳಕ್ಕೆ ವರ್ಗಾವಣೆ ಆದೇಶ ಜಾರಿ ಮಾಡಿದ್ದೆ. ಆದರೆ 11.36ರ ವೇಳೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಂದ ನನಗೆ ವಾಟ್ಸ್‍ಅಪ್ ಸಂದೇಶ ಬಂತು. ಚಾಲ್ತಿಯಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಯನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂಬ ಸಂದೇಶ ನೀಡಿದ್ದರು. ಅವರ ಆದೇಶವನ್ನು ಪಾಲಿಸಿದ್ದೇನೆ. ವರ್ಗಾವಣೆಯನ್ನು ಸ್ಥಗಿತಗೊಳಿಸಿದ್ದೇನೆ. ಪ್ರತಿಭಟನೆ ನಡೆಸುತ್ತಿರುವ ಶಿಕ್ಷಕರು ಲಿಖಿತ ಮನವಿ ನೀಡಿದರೆ ಅದನ್ನು ಆಯುಕ್ತರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

Translate »