ಅರಮನೆ ಆವರಣದ ಫಲಪುಷ್ಪ ಪ್ರದರ್ಶನಕ್ಕೆ ಆಕರ್ಷಕ ತೆರೆ
ಮೈಸೂರು

ಅರಮನೆ ಆವರಣದ ಫಲಪುಷ್ಪ ಪ್ರದರ್ಶನಕ್ಕೆ ಆಕರ್ಷಕ ತೆರೆ

January 3, 2022

ಮೈಸೂರು, ಜ.2(ಎಂಕೆ)- ಮೈಸೂರು ಅರಮನೆ ಆವರಣ ದಲ್ಲಿ ಪ್ರವಾಸಿಗರ ಕಣ್ಮನ ಸೆಳೆದ ‘ಅರಮನೆ ಫಲಪುಷ್ಟ ಪ್ರದರ್ಶನ-2021’ಕ್ಕೆ ಭಾನುವಾರ ತೆರೆಬಿದ್ದಿತು. ಕಳೆದ 9 ದಿನಗಳಿಂದ ಮೈಸೂ ರಿಗರನಷ್ಟೇ ಅಲ್ಲದೆ ನೆರೆ ರಾಜ್ಯಗಳು, ವಿದೇಶಿ ಪ್ರವಾಸಿಗರನ್ನು ಸೆಳೆದ ಅರಮನೆ ಫಲಪುಷ್ಪ ಪ್ರದರ್ಶನ ಮುಕ್ತಾಯಗೊಂಡಿದ್ದು, ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಸುಮಾರು 15 ಸಾವಿರ ವಿಭಿನ್ನ ಬಗೆಯ ಪುಷ್ಪರಾಶಿಯೊಂದಿಗೆ ಅಲಂಕಾರಗೊಂಡಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಎಲ್ಲರ ನೆಚ್ಚಿನ ಅತ್ಯಾಕರ್ಷಣೆಯಾಗಿದ್ದ ‘ಶ್ರೀ ರಾಮ ಮಂದಿರ’, ಚಾಮುಂಡಿ ದೇವತೆ, ನಂದಿ ಮತ್ತು ಮಹಿಷಾಸುರ, ಜಯಚಾಮರಾಜ ಒಡೆಯರ್, ಹೂವಿನ ಪಲ್ಲಕ್ಕಿಯನ್ನು ಹೊತ್ತ 2 ಜನ ಸೇವಕರೊಂದಿಗೆ ಮಹಾ ರಾಣಿ, ಖೆಡ್ಡಾ ಆಪರೇಷನ್, ನೇಗಿಲು ಹೊತ್ತ ರೈತ, ಒನಕೆ ಓಬವ್ವ, ಕ್ವಿಟ್ ಇಂಡಿಯಾ ಚಳವಳಿ, ಭಾರತೀಯ ಸೇನಾಪಡೆಗಳ ಮುಖ್ಯಸ್ಥ ರಾಗಿದ್ದ ಜನರಲ್ ಬಿಪಿನ್ ರಾವತ್, ಭಾರತೀಯ ಸೇನಾ ಯುದ್ಧ ವಿಮಾನ ಹಾಗೂ ಪರಮವೀರ ಚಕ್ರ ಪ್ರಶಸ್ತಿ ಪಡೆದ ಅಭಿನಂದನ್ ಇನ್ನಿತರೆ ಮಾದರಿಗಳು ಎಲ್ಲರ ಗಮನ ಸೆಳೆದವು.

ಮೆರಿಗೋಲ್ಡ್, ಸಾಲ್ವಿಯ, ಡೇಲಿಯಂ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯ, ನಸ್ಟರ್‍ಸಿಯಂ, ಆಂಟಿರೈನಂ, ಬೋನ್ಸಾಯ್ ಗಿಡಗಳು ಸೇರಿದಂತೆ 32 ಜಾತಿಯ ಹೂವಿನ ಗಿಡಗಳು ಹಾಗೂ 4 ಲಕ್ಷ ವಿವಿಧ ಹೂವುಗಳಾದ ಗುಲಾಬಿ, ಕ್ರೀಸಾಂಥಿಮಮ್, ಪಿಂಗ್ ಪಾಂಗ್, ಕಾರ್ನೆಷನ್, ಆಸ್ಟ್ರಮೇರಿಯ, ಜರ್ಬೆರಾ, ಆಂಥೋರಿ ಯಮ್, ಆರ್ಕಿಡ್ಸ್, ಬ್ಲೂ ಡೈಸಿ, ಡ್ರಿಸಿನಾ ಹಾಗೂ ಇತರೆ ಅಲಂಕಾರಿಕ ಹೂ ಹಾಗೂ ಊಟಿ ಕಟ್ ಪ್ಲವರ್‍ಗಳು ಪರಿಮಳ ಬೀರಿದವು.

ಸೆಲ್ಫಿಗೆ ಮುಗಿಬಿದ್ದರು: ಪ್ರದರ್ಶನದ ಮೂರ್ನಾಲ್ಕು ಕಡೆಗಳಲ್ಲಿ ಸೆಲ್ಫಿ ಸ್ಪಾಟ್‍ಗಳಲ್ಲಿ ತಮ್ಮ ಫೋಟೊ ಕ್ಲಿಕ್ಕಿಸಿಕೊಳ್ಳಲು ಜನ ಮುಗಿ ಬಿದ್ದರು. ಕೆಂಪು ಗುಲಾಬಿ ಹೂಗಳಿಂದ ಅಲಂಕರಿಸಿದ್ದ ‘ಕನ್ನಡಕ’, ‘ಹೃದಯ(ಪ್ರೀತಿ ಸಂಕೇತ)’ ಹಾಗೂ ಪುನೀತ್ ರಾಜ್‍ಕುಮಾರ್ ಭಾವಚಿತ್ರದ ಬಳಿ ನಿಂತು ಫೋಟೊ ತೆಗೆದುಕೊಂಡರು. ಹೂ ರಾಶಿ ಯಿಂದಲೇ ತಲೆ ಎತ್ತಿದ್ದ ಅಯೋದ್ಯೆ ಶ್ರೀ ರಾಮಮಂದಿರದ ಎದುರು ಹಲವು ಹಿಂದೂಪರ ಸಂಘಟನೆಗಳಿಂದ ರಾಮಧ್ಯಾನ ಮಾಡಲಾಯಿತು. ಕಡೆಯ ದಿನವೂ ಹಲವು ಸಂಘಟನೆಗಳಿಂದ ವಾದ್ಯಗೋಷ್ಠಿ ನಡೆಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕೊರೊನಾ ಆತಂಕದ ನಡುವೆಯೂ ಫಲಪುಷ್ಪ ಪ್ರದರ್ಶನಕ್ಕೆ ಜನಸಾಗರವೇ ಹರಿದು ಬಂತು. ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡಿ, ಪುಷ್ಪ ಅಲಂಕಾರವನ್ನು ಕಣ್ತುಂಬಿ ಕೊಂಡರು. ಲಾಕ್‍ಡೌನ್ ಬಳಿಕ ಈ ಪ್ರದರ್ಶನಕ್ಕೆ ಬಂದಿದ್ದೇವೆ. ಇನ್ನಷ್ಟು ದಿನಗಳು ವಿಸ್ತರಣೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸಾಕಷ್ಟು ಮಂದಿ ಪ್ರವಾಸಿಗರು ತಮ್ಮ ತಮ್ಮ ನಡುವೆ ಮಾತನಾಡಿಕೊಳ್ಳು ತ್ತಲೇ ಮನೆಯತ್ತಾ ಸಾಗುತ್ತಿದ್ದ ದೃಶ್ಯಗಳ ಸಾಮಾನ್ಯವಾಗಿತ್ತು.

Translate »