ಸಂಶೋಧಕರಿಗೆ `ತ್ರಿವಿಕ್ರಮ ಎನ್.ಎಸ್.ವಾಮನ್’ರ ಕೊಡುಗೆ ಕಾಣಲಿಲ್ಲವೇಕೆ?
ಮೈಸೂರು

ಸಂಶೋಧಕರಿಗೆ `ತ್ರಿವಿಕ್ರಮ ಎನ್.ಎಸ್.ವಾಮನ್’ರ ಕೊಡುಗೆ ಕಾಣಲಿಲ್ಲವೇಕೆ?

January 3, 2022

ಮೈಸೂರು, ಜ.2(ಆರ್‍ಕೆಬಿ)- ವಿಶ್ವ ವಿದ್ಯಾನಿಲಯದ ಪಿಎಚ್‍ಡಿ ಮಾಡುವ ಸಂಶೋಧಕರಿಗೆ ಬಾನುಲಿ ಹಾಗೂ ರಂಗಭೂಮಿ ಕಲಾವಿದ ಮತ್ತು ನಿರ್ದೇಶಕರಾಗಿದ್ದ `ತ್ರಿವಿಕ್ರಮ ಎನ್.ಎಸ್.ವಾಮನ್’ ಅವರ ಕೊಡುಗೆ ಕಾಣಲಿಲ್ಲವೇಕೆ? ಎಂದು ವಿದ್ವಾಂಸ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಇಂದಿಲ್ಲಿ ವಿಷಾದಿಸಿದರು.

ಮೈಸೂರಿನ ಕಲಾಮಂದಿರ ಕಿರುರಂಗ ಮಂದಿರದಲ್ಲಿ ಕರ್ನಾಟಕ ನಾಟಕ ಅಕಾ ಡೆಮಿ, ಅಭಿರುಚಿ ಬಳಗ, ಆಸಕ್ತಿ ಪ್ರಕಾಶನ ಜಂಟಿಯಾಗಿ ಆಯೋಜಿಸಿದ್ದ ಬಾನುಲಿ ಹಾಗೂ ರಂಗಭೂಮಿ ಕಲಾವಿದ, ನಿರ್ದೇಶಕ ಎನ್.ಎಸ್.ವಾಮನ್ ಅವರ ಶತಮಾನೋ ತ್ಸವ ಕಾರ್ಯಕ್ರಮದಲ್ಲಿ `ತ್ರಿವಿಕ್ರಮನಾದ ವಾಮನ’, `ರಂಗದ ರಂಗು’ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕೆಲಸಕ್ಕೆ ಬಾರದ ವಿಷಯಗಳನ್ನು ತೆಗೆದುಕೊಂಡು ಸಂಶೋಧನೆ ನಡೆಸುವ ವಿಶ್ವವಿದ್ಯಾನಿಲಯಗಳು ಎನ್.ಎಸ್. ವಾಮನ್ ಅವರ ಬಗ್ಗೆ ಸಂಶೋಧನಾ ಕ್ಷೇತ್ರ ನಿರ್ಲಕ್ಷ್ಯ ವಹಿಸಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸ್ಥಳನಾಮಗಳ ಬಗ್ಗೆ ಸಂಶೋಧನೆ ಮಾಡುವವರು, ಒಂದು ವಿಷಯವನ್ನು ಕಟ್ ಅಂಡ್ ಪೇಸ್ಟ್ ಮಾಡಿ, ಪಿಎಚ್‍ಡಿ ಪಡೆಯು ವರಿಗೆ ವಾಮನ್ ಅವರ ಕೊಡುಗೆ ಕಾಣಿಸಲಿಲ್ಲವೇಕೆ ಎಂದು ಪ್ರಶ್ನಿಸಿದರು.

ಸುಮಾರು 2,500ಕ್ಕೂ ಹೆಚ್ಚು ನಾಟಕ ಗಳನ್ನು ನಿರ್ದೇಶಿಸುವುದು, ಅದರಲ್ಲೂ ಬಾನುಲಿ ನಾಟಕಗಳನ್ನು ನಿರ್ದೇಶಿಸುವುದು ಸುಲಭದ ಮಾತಲ್ಲ. ನಂಜನಗೂಡಿನ ವಾಮನ್ ತ್ರಿವಿಕ್ರಮನಂತೆ ಬೆಳೆದು, ದೆಹಲಿ ಯಲ್ಲೂ ಕನ್ನಡ ನಾಟಕಗಳನ್ನು ಪ್ರದರ್ಶಿ ಸುವ ಮೂಲಕ ಕನ್ನಡದ ಬಾವುಟ ಹಾರಿಸಿದ್ದು ಸುಲಭದ ಮಾತಲ್ಲ ಎಂದು ಹೇಳಿದರು.

ಆಕಾಶವಾಣಿಯಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ ವಾಮನ್ ಅವರು ಡಾ.ರಾಜ್‍ಕುಮಾರ್, ಕೆ.ಎಸ್.ಅಶ್ವಥ್, ಮಾ.ಹಿರಣ್ಣಯ್ಯ ಸೇರಿದಂತೆ ಹಲವಾರು ದಿಗ್ಗಜರನ್ನು ಬಾನುಲಿಗೆ ಕರೆಸಿ, ಕಾರ್ಯಕ್ರಮ ನಡೆಸಿದರು. ಅಂಥವರು ಯಾವುದೇ ಪಿಂಚಣಿ ಇಲ್ಲದೇ ನಿವೃತ್ತರಾಗುತ್ತಾರೆ. ದಪ್ಪ ಚರ್ಮದ ಸರ್ಕಾರಗಳು ಅವರಿಗೆ ಆರ್ಥಿಕ ಸೌಲಭ್ಯ ನೀಡುವುದಿರಲಿ ಅವರ ಕೊಡುಗೆಯನ್ನು ಸ್ಮರಿಸಿ, ಪ್ರಶಸ್ತಿ ಪುರಸ್ಕಾರ ನೀಡುವ ಕೆಲಸವನ್ನು ಕೂಡ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿ, ವಾಮನ್‍ರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ವಾಮನ್‍ರ ಶತಮಾನೋತ್ಸವವನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುವುದು ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಆರ್.ಭೀಮಸೇನ ಅಧ್ಯಕ್ಷತೆ ವಹಿಸಿದ್ದರು. ಕಾದಂಬರಿಗಾರ್ತಿ ಉಷಾ ನರಸಿಂಹನ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕೃತಿಗಳನ್ನು ಕುರಿತು ಕವಿ ಜಯಪ್ಪ ಹೊನ್ನಾಳಿ, ಮಹಾರಾಣಿ ವಾಣಿಜ್ಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಮೈಸೂರು ಕೃಷ್ಣಮೂರ್ತಿ ಮಾತನಾಡಿ ದರು. `ಎನ್.ಎಸ್.ವಾಮನ್ ಅವರ ಜೀವನ- ಸಾಧನೆ’ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಗಮಕ ವಿದ್ವಾಂಸ ಡಾ.ಎನ್.ಕೆ. ರಾಮಶೇಷನ್, ನೃತ್ಯ ಕಲಾವಿದೆ ಜಮುನಾ ರಾಣಿ ಮಿರ್ಲೆ ಉದ್ಘಾಟಿಸಿದರು. ಕಿರುತೆರೆ ನಟಿ ಇಂದ್ರಸುಧಾ ವಾಮನ್‍ರನ್ನು ಕುರಿತ ಸಾಕ್ಷ್ಯಚಿತ್ರಕ್ಕೆ ಚಾಲನೆ ನೀಡಿದರು. ವಿಜ್ಞಾನ ಸಾಹಿತಿ ಎಸ್.ರಾಮಪ್ರಸಾದ್, ಅಭಿರುಚಿ ಬಳಗದ ಅಧ್ಯಕ್ಷ ಎನ್.ವಿ.ರಮೇಶ್, ಚೈತ್ರಾ ಫೌಂಡೇಷನ್‍ನ ಡಾ.ಸುಧಾ ರಮೇಶ್, ಎನ್.ವಿ.ಬಾಲಚಂದ್ರ, ಎನ್.ವಿ.ಬಾಲ ರಾಜ ಇನ್ನಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎನ್.ಎಸ್. ವಾಮನ್ ಅವರ ಕುರಿತ ಭಾವಚಿತ್ರಗಳ ಪ್ರದರ್ಶನ ಗಮನ ಸೆಳೆಯಿತು.

Translate »