ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುವ ಸಂಸ್ಕøತಿ ಬೆಳೆಯಬೇಕು
ಮೈಸೂರು

ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುವ ಸಂಸ್ಕøತಿ ಬೆಳೆಯಬೇಕು

January 3, 2022

ಮೈಸೂರು, ಜ.2(ಎಸ್‍ಬಿಡಿ)- ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುವ ಸಂಸ್ಕøತಿ ಬೆಳೆಯಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ, ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಮಹಾ ಸಭಾ ವತಿಯಿಂದ ಮೈಸೂರಿನ ಮಾನಸ ಗಂಗೋತ್ರಿ ರಾಣಿ ಬಹದ್ದೂರ್ ಸಭಾಂ ಗಣದಲ್ಲಿ ಭಾನುವಾರ ಏರ್ಪಡಿಸಿದ್ದ `ಕುವೆಂಪು ಜನ್ಮ ದಿನಾಚರಣೆ, ದಿನ ದರ್ಶಿಕೆ ಬಿಡುಗಡೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾ ರಂಭ’ವನ್ನು ಉದ್ಘಾಟಿಸಿ, ಮಾತನಾಡಿದರು.

ಪ್ರತಿಭಾವಂತರಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಜಗತ್ತಿನ ವಿವಿಧೆಡೆ ಯಿಂದ ಪ್ರತಿಭಾನ್ವಿತರನ್ನು ಆಹ್ವಾನಿಸಿ, ಅವರ ಸೇವೆ ಮೂಲಕ ಚೀನಾ ಕೇವಲ ಮೂರು ದಶಕದಲ್ಲೇ ಅಮೇರಿಕಾ ಮೀರಿಸುವಷ್ಟರ ಮಟ್ಟಿಗೆ ಅಭಿ ವೃದ್ಧಿ ಹೊಂದಲು ಸಾಧ್ಯವಾಯಿತು. ಅಧ್ಯಯನ ಹಾಗೂ ವೃತ್ತಿ ಹಿನ್ನೆಲೆಯಲ್ಲಿ ನಾನು ಹಲವು ದೇಶಗಳನ್ನು ಸುತ್ತಿದ್ದೇನೆ. ಹೋದಲೆಲ್ಲಾ ಭಾರತ ಮೂಲದ ಪ್ರತಿಭಾನ್ವಿರನ್ನು ಭೇಟಿ ಯಾಗಿದ್ದೇನೆ. ಅವರೆಲ್ಲಾ ಭಾರತದಲ್ಲೇ ಕೆಲಸ ಮಾಡಿ, ಅಭಿವೃದ್ಧಿಗೆ ನೆರವಾಗುವ ಪರಿಸ್ಥಿತಿ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಪ್ರತಿಭಾನ್ವಿತರನ್ನು ಪ್ರೋತ್ಸಾಹಿ ಸುವ ಸಂಸ್ಕøತಿಯನ್ನೂ ರೂಢಿಸಿಕೊಳ್ಳ ಬೇಕು ಎಂದು ಆಶಯ ವ್ಯಕ್ತಪಡಿಸಿದರು.ಹಳ್ಳಿ, ಹಳ್ಳಿಯಲ್ಲೂ ಪ್ರತಿಭಾವಂತರಿದ್ದಾರೆ. ಆದರೆ ಅವರು ಸೂಕ್ತ ಮಾರ್ಗದರ್ಶನ ದಿಂದ ವಂಚಿತರಾಗಿದ್ದಾರೆ. ಇದರಲ್ಲಿ ಪ್ರತಿ ಯೊಬ್ಬರ ಜವಾಬ್ದಾರಿಯೂ ಇದೆ. ಅದರಲ್ಲೂ ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಇನ್ನಿತರ ಸಂಘಟನೆಗಳು ಹಳ್ಳಿ ಹಳ್ಳಿಗೆ ತೆರಳಿ ಪ್ರತಿಭಾನ್ವಿತರನ್ನು ಗುರು ತಿಸಿ, ಅವರಿಗೆ ಸೂಕ್ತ ಪ್ರೋತ್ಸಾಹ ನೀಡ ಬೇಕು. ಈ ಮೂಲಕ ಉತ್ತಮ ವೈದ್ಯ, ವಿಜ್ಞಾನಿ, ಸಾಹಿತಿ, ಅಧಿಕಾರಿಯನ್ನು ದೇಶಕ್ಕೆ ಕೊಡುಗೆಯಾಗಿ ನೀಡಬೇಕು. ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವಿದೇಶ ಗಳಿಗಿಂತ ಭಾರತ ಹಿಂದಿದೆ. ಜಾಗತಿಕ ವೇಗಕ್ಕೆ ತಕ್ಕಂತೆ ನಾವೂ ಮುಂದುವರೆಯ ಬೇಕಿದೆ ಎಂದು ತಿಳಿಸಿದ ಅವರು, ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಹಾಗಂತ ಇತರೆ ಸಮುದಾಯವನ್ನು ದೂಷಿಸುವುದಲ್ಲ. ಸಂಘಟನಾತ್ಮಕವಾಗಿ ಎಲ್ಲರೊಂದಿಗೆ ಅಭಿವೃದ್ಧಿ ಪಥದಲ್ಲಿ ಸಾಗುವ ನಿಟ್ಟಿನಲ್ಲಿ ಇಂತಹ ಸಂಘಟನೆಗಳು ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಸಾಧಕರಿಗೆ ಸನ್ಮಾನ: ಇತಿಹಾಸ ತಜ್ಞ, ಬೆಂಗಳೂರಿನ ಡಾ.ತಲಕಾಡು ಚಿಕ್ಕರಂಗೇ ಗೌಡರು, ಪಾಂಡವಪುರ ಪುಸ್ತಕ ಮನೆಯ ಅಂಕೇಗೌಡರು ಹಾಗೂ ಬೆಂಗಳೂರು ವಿವಿ ಪುರಂ ಕಾಲೇಜು ಪ್ರಾಂಶುಪಾಲ ಡಾ.ಬೂದನೂರು ಪುಟ್ಟಸ್ವಾಮಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಇದೇ ವೇಳೆ ವಿಧಾನ ಪರಿಷತ್ ನೂತನ ಸದಸ್ಯ ಸಿ.ಎನ್.ಮಂಜೇಗೌಡ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು-ಚಾಮರಾಜನಗರ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ಒಕ್ಕಲಿಗರ ವಾಯ್ಸ್ ಸಂಪಾದಕ ಎಸ್.ನಾಗಭೂಷಣ, ಮೈಸೂರು -ಚಾಮರಾಜನಗರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸುಶೀಲಾ ನಂಜಪ್ಪ ಮತ್ತಿತರರನ್ನು ಅಭಿನಂದಿಸಲಾಯಿತು. ಎಸ್‍ಎಸ್‍ಎಲ್‍ಸಿ, ಪಿಯುಸಿ ಸೇರಿದಂತೆ ವಿವಿಧ ಶೈಕ್ಷಣಿಕ ಹಂತದಲ್ಲಿ ಹೆಚ್ಚು ಅಂಕಗಳಿಸಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ, ಪ್ರೋತ್ಸಾಹಿಸಲಾಯಿತು.

ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಗೌರವಾಧ್ಯಕ್ಷರೂ ಆದ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಹಸಭಾ ಪ್ರಕ ಟಿಸಿರುವ ದಿನದರ್ಶಿಕೆಯನ್ನು ಲಯನ್ ಕೆ.ದೇವೇಗೌಡ ಬಿಡುಗಡೆ ಮಾಡಿದರು. ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡ ಕೆ.ಹರೀಶ್‍ಗೌಡ, ಮಹಸಭಾದ ಗೌರವ ಸಲಹೆಗಾರರೂ ಆದ ಎಂಎಂಸಿ ಮನೋ ವೈದ್ಯ ವಿಭಾಗದ ಮುಖ್ಯಸ್ಥ ಡಾ.ಬಿ. ಎನ್.ರವೀಶ್, ಮಹಾಸಭಾದ ರಾಜ್ಯಾಧ್ಯಕ್ಷ ಎನ್.ಬೆಟ್ಟೇ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಈ.ಸಿ.ನಿಂಗರಾಜ್ ಗೌಡ, ಕಾನೂನು ಸಲಹೆಗಾರ ಎಂ.ಎನ್. ಚಂದ್ರಶೇಖರ್, ಕಾರ್ಯಾಧ್ಯಕ್ಷ ಟಿ.ಸೋಮು, ಉಪಾಧ್ಯಕ್ಷರಾದ ಹೆಚ್.ಹನುಮಯ್ಯ, ಲಕ್ಷ್ಮೀದೇವಿ, ಅಂಜಲಿದೇವಿ, ಪತ್ರಿಕಾ ಕಾರ್ಯದರ್ಶಿ ಯೋಗೇಶ್, ನಿರ್ದೇಶಕ ಕೆ.ರವಿ ಮತ್ತಿತರರು ಉಪಸ್ಥಿತರಿದ್ದರು.

Translate »