ಆರ್ಭಟಿಸಿ ಹಾರಿ ಬಂದ ಆನಂದ್‍ಸಿಂಗ್  ಸಿಎಂ, ಮಾಜಿ ಸಿಎಂ ಭೇಟಿ ನಂತರ ಕೂಲ್…!
News

ಆರ್ಭಟಿಸಿ ಹಾರಿ ಬಂದ ಆನಂದ್‍ಸಿಂಗ್ ಸಿಎಂ, ಮಾಜಿ ಸಿಎಂ ಭೇಟಿ ನಂತರ ಕೂಲ್…!

August 12, 2021

ಬೆಂಗಳೂರು, ಆ.11- ತನಗೆ ಪ್ರಬಲವಾದ ಖಾತೆ ಕೊಡದಿದ್ದರೆ ರಾಜೀನಾಮೆ ನೀಡುವುದಾಗಿ ಪರೋಕ್ಷವಾಗಿ ಎಚ್ಚರಿಕೆ ನೀಡುವ ಮೂಲಕ ಬಂಡಾಯವೆದ್ದಿದ್ದ ಪ್ರವಾಸೋದ್ಯಮ ಸಚಿವ ಆನಂದ್‍ಸಿಂಗ್ ಅವರ ಕೋಪವನ್ನು ತಾತ್ಕಾಲಿಕ ವಾಗಿ ಶಮನ ಮಾಡುವಲ್ಲಿ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಬುಧವಾರ ರಾತ್ರಿ ಯಶಸ್ವಿಯಾದರು.

ಮುಖ್ಯಮಂತ್ರಿ ಬದಲಾವಣೆಯಾಗಿ ಸಂಪುಟ ರಚನೆಯಾದಾಗ ತಮಗೆ ಪ್ರವಾಸೋದ್ಯಮ ಖಾತೆ ನೀಡಿದ್ದರಿಂದ ಅಸಮಾಧಾನ ಗೊಂಡಿದ್ದ ಆನಂದ್‍ಸಿಂಗ್ ಸಿಎಂ ಮತ್ತು ಪಕ್ಷದ ವರಿಷ್ಠರ ವಿರುದ್ಧ ಬಂಡಾಯವೆದ್ದಿದ್ದರು. ಇಂದು ಬೆಳಗ್ಗೆ ಹೊಸ ಪೇಟೆಯ ವೇಣುಗೋಪಾಲಸ್ವಾಮಿ ದೇವಸ್ಥಾನದ ಜೀರ್ಣೋ ದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಂಗ್, ‘ನನ್ನ ರಾಜ ಕೀಯ ಜೀವನ ಇದೇ ವೇಣುಗೋಪಾಲಸ್ವಾಮಿ ಸನ್ನಿಧಿಯಿಂದ ಆರಂಭಿಸಿದ್ದೇನೆ. ಇಲ್ಲಿಯೇ ರಾಜಕೀಯ ಜೀವನ ಅಂತ್ಯವಾಗಲೂ ಬಹುದು ಅಥವಾ ಪುನರಾರಂಭವಾಗಲೂಬಹುದು’ ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಪರೋಕ್ಷವಾಗಿ ರಾಜೀ ನಾಮೆ ಎಚ್ಚರಿಕೆ ನೀಡಿದ್ದರು. ಅಷ್ಟಕ್ಕೆ ನಿಲ್ಲದ ಆನಂದ್‍ಸಿಂಗ್ ‘ಪಕ್ಷದಲ್ಲಿ ನನ್ನ ಜೊತೆ ನಾಯಕರು ಹಾಗೂ ಸಹೋದ್ಯೋಗಿಗಳಿ ರುತ್ತಾರೆ ಎಂಬ ಭ್ರಮೆಯಲ್ಲಿದ್ದೆ. ಆದರೆ ಇಂದು ಆ ಭ್ರಮೆಯಿಂದ ಹೊರ ಬಂದಿದ್ದೇನೆ’ ಎಂದು ಹೇಳುವ ಮೂಲಕ ತಮಗೆ ಬೆಂಬಲ ವಾಗಿ ನಿಲ್ಲದ ಸಹೋದ್ಯೋಗಿಗಳ ವಿರುದ್ಧವೂ ಅಸಮಾಧಾನ ಹೊರಹಾಕಿದ್ದರು. ಆಗಸ್ಟ್ 8 ರಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಅವರಿಗೆ ಏನು ಹೇಳಿದ್ದೇನೊ ಅದಕ್ಕೆ ಈಗಲೂ ಬದ್ಧನಾಗಿದ್ದೇನೆ ಎಂದು ಹೇಳಿಕೆ ನೀಡುವ ಮೂಲಕ ಖಾತೆ ಬದಲಾವಣೆಯಾಗಲೇಬೇಕು ಎಂಬ ನಿಲುವಿನಲ್ಲಿ ತಾವು ಕಟಿಬದ್ಧರಾಗಿರುವುದಾಗಿ ತಿಳಿಸಿದ್ದರು.

ಆನಂದ್‍ಸಿಂಗ್ ಇಂಧನ ಅಥವಾ ಜಲಸಂಪನ್ಮೂಲ ಖಾತೆ ಬಯಸಿದ್ದರು ಎಂದು ಹೇಳಲಾಗಿದ್ದು, ಅವರಿಗೆ ಶಾಸಕ ರಾಜೂಗೌಡ ಸಾಥ್ ನೀಡಿದ್ದಾರೆ. ಇಂದು ಬೆಳಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಆನಂದ್‍ಸಿಂಗ್ ನನ್ನ ಆತ್ಮೀಯ ಸ್ನೇಹಿತರು. ಅವರನ್ನು ಬಿಜೆಪಿಗೆ ಕರೆತರುವಲ್ಲಿ ನನ್ನ ಪ್ರಯತ್ನವೂ ಹೆಚ್ಚಾಗಿದೆ. ಹೀಗಾಗಿ ಅವರ ಭಾವನೆಗಳಿಗೆ ಸ್ಪಂದಿಸಬೇಕಾಗಿದೆ. ಆನಂದ್‍ಸಿಂಗ್ ಅವರ ಅಸಮಾಧಾನದ ಬಗ್ಗೆ ನಾನೂ ಕೂಡ ಮುಖ್ಯಮಂತ್ರಿಗಳು ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಮಾತನಾಡುತ್ತೇನೆ’ ಎಂದರು.

ಈ ನಡುವೆ ಮುಖ್ಯಮಂತ್ರಿಗಳ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕರೆ ಮೇರೆಗೆ ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ಆಗಮಿಸಿದ ಆನಂದ್‍ಸಿಂಗ್, ಶಾಸಕ ರಾಜೂ ಗೌಡ ಅವರೊಡಗೂಡಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ನಂತರ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ಅಪಾರ್ಟ್‍ಮೆಂಟ್‍ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್ ಅವರುಗಳು ಸಚಿವ ಆನಂದ್‍ಸಿಂಗ್ ಮತ್ತು ಶಾಸಕ ರಾಜೂಗೌಡ ಜೊತೆ ಸುಮಾರು 2 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ವರಿಷ್ಠರ ಗಮನಕ್ಕೆ ತಂದು, ಅವರ ಒಪ್ಪಿಗೆ ಪಡೆದು ಖಾತೆ ಬದಲಾವಣೆ ಮಾಡುವು ದಾಗಿ ಮುಖ್ಯಮಂತ್ರಿಗಳು ಆನಂದ್‍ಸಿಂಗ್ ಅವರಿಗೆ ಭರವಸೆ ನೀಡಿ, ಅವರನ್ನು ಸಮಾಧಾನ ಪಡಿಸಿದರು ಎಂದು ಹೇಳಲಾಗಿದೆ.

ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಆನಂದ್‍ಸಿಂಗ್ ಇನ್ನೂ ಉತ್ತಮವಾದ ಖಾತೆ ಬೇಕು ಎಂದು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ 2 ಗಂಟೆಗಳ ಕಾಲ ಚರ್ಚೆ ನಡೆಸಿದ್ದೇವೆ. ಈ ವಿಚಾರವನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಸಿಂಗ್ ಅವರು ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜೀ ನಾಮೆ ನೀಡುವುದಿಲ್ಲ. ಹಾಲಿ ಇರುವ ಖಾತೆಯಲ್ಲಿ ಮುಂದು ವರೆಯುತ್ತಾರೆ. ಸ್ವಾತಂತ್ರ್ಯೋತ್ಸವದಂದು ವಿಜಯನಗರದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಆನಂದ್ ಸಿಂಗ್, ನಾನು ರಾಜೀನಾಮೆ ಕೊಡುತ್ತೇನೆ ಎಂದು ಹೇಳಲೇ ಇಲ್ಲ. ನನಗೆ ಅಸಮಾಧಾನವಾಗಿರುವುದು ನಿಜ. ಎಲ್ಲಾ ವಿಚಾರಗಳನ್ನೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ವಿವರಿಸಿದ್ದೇನೆ. ಪಕ್ಷದ ವರಿಷ್ಠರು ಒಳ್ಳೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ವಿಶ್ವಾಸವಿದೆ ಎಂದು ಹೇಳಿದರು. ಒಟ್ಟಾರೆ ಖಾತೆ ವಿಚಾರ ವಾಗಿ ಬಂಡಾಯವೆದ್ದಿದ್ದ ಆನಂದ್‍ಸಿಂಗ್ ಅವರನ್ನು ಮುಖ್ಯ ಮಂತ್ರಿಗಳು ತಾತ್ಕಾಲಿಕವಾಗಿ ಸಮಾಧಾನಪಡಿಸಿದಂತಾಗಿದೆ.

Translate »