ಬಡತನ, ಅಸ್ಪøಶ್ಯತೆ ನಿವಾರಿಸಬಹುದು
ಮೈಸೂರು

ಬಡತನ, ಅಸ್ಪøಶ್ಯತೆ ನಿವಾರಿಸಬಹುದು

August 12, 2021

ಮೈಸೂರು,ಆ.11(ಪಿಎಂ)-ದೇಶದಲ್ಲಿ ಬಡತನ ಮತ್ತು ಅಸ್ಪøಶ್ಯತೆ ನಿವಾರಿಸುವ ಸಂಬಂಧ ಸೂಕ್ತ ಕಾರ್ಯಕ್ರಮ ರೂಪಿಸಲು ಜಾತಿ ಜನಗಣತಿಯಿಂದ ಸಾಧ್ಯವಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾತಿ ಜನಗಣತಿ ಏಕೆ ಮಾಡಬಾರದು? ಎಂದು ಮಾಜಿ ಮುಖ್ಯ ಮಂತ್ರಿಗಳೂ ಆದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಮೈಸೂರಿನ ತಮ್ಮ ನಿವಾಸದಲ್ಲಿ ಬುಧವಾರ ಮಾಧ್ಯಮದವ ರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಮಾಡಿದರೆ ಬಡತನ ಮತ್ತು ಅಸ್ಪøಶ್ಯತೆ ತೊಡೆದು ಹಾಕಲು ಅನುಕೂಲವಾಗಲಿದೆ ಎಂದು ಹೇಳಿದರು. ಅಟಲ್ ಬಿಹಾರಿ ವಾಜಪೇಯಿ ಆರು ವರ್ಷಗಳು ಪ್ರಧಾನಿಯಾಗಿದ್ದರು. ಈಗ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎರಡನೇ ಅವಧಿಗೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದೆ. ಇವರು ಏಕೆ ಜಾತಿ ಜನಗಣತಿ ಮಾಡುತ್ತಿಲ್ಲ? ನ್ಯಾಯಾಲಯದಲ್ಲಿ ಮೀಸಲಾತಿ ವಿಚಾರ ಬಂದ ಸಂದರ್ಭದಲ್ಲಿ ವಸ್ತುನಿಷ್ಠ, ನಂಬಿಕಾರ್ಹ ಮಾಹಿತಿ ಏನು? ಎಂದು ನ್ಯಾಯಾಲಯ ಪ್ರಶ್ನಿಸುತ್ತದೆ. ಈ ಕಾರಣಕ್ಕಾಗಿ ನಾನು ಮುಖ್ಯಮಂತ್ರಿ ಆಗಿದ್ದಾಗ ಜಾತಿ ಜನಗಣತಿಗೆ ಕ್ರಮ ವಹಿಸಿದೆ. ದೇಶದಲ್ಲಿ 1931ರಲ್ಲಿ ನಡೆದ ಜಾತಿ ಜನಗಣತಿಯೇ ಕೊನೆಯದು ಎಂದು ತಿಳಿಸಿದರು.

ಬಿಜೆಪಿ ಮೀಸಲಾತಿ ವಿರೋಧಿ: ಓಬಿಸಿ ಪಟ್ಟಿಗೆ ಜಾತಿಗಳನ್ನು ಸೇರಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡುವ ಸಂವಿಧಾನದ 127ನೇ ತಿದ್ದುಪಡಿ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಎಂದಿಗೂ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಪರವಾಗಿ ಇದ್ದವರಲ್ಲ. ಅವರು ಮೀಸಲಾತಿ ಬಗ್ಗೆ ಈ ಹಿಂದೆ ತೆಗೆದುಕೊಂಡಿರುವ ನಿಲುವುಗಳನ್ನು ನೋಡಿದರೆ, ಎಲ್ಲಾ ಹಂತದಲ್ಲೂ ಮೀಸಲಾತಿಗೆ ವಿರೋಧ ಮಾಡಿದ್ದಾರೆ. 1950ರಲ್ಲಿ ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲಾಯಿತು. 102ನೇ ತಿದ್ದುಪಡಿಗೂ ಮುನ್ನ ಹಿಂದುಳಿದ ವರ್ಗಗಳನ್ನು ಗುರುತಿಸುವ ಅಧಿಕಾರ ಆಯಾಯ ರಾಜ್ಯ ಸರ್ಕಾರಕ್ಕೆ ಇತ್ತು. 102ನೇ ತಿದ್ದುಪಡಿ ಮೂಲಕ ಅದನ್ನು ತೆಗೆಯಲಾಯಿತು. ಈಗ ಮತ್ತೆ 127ನೇ ತಿದ್ದುಪಡಿ ಮೂಲಕ ಅದೇ ಅವಕಾಶವನ್ನು ಮತ್ತೆ ಕಲ್ಪಿಸಲಾಗಿದೆ ಎಂದರು. ಸಂವಿ ಧಾನದ 15 ಮತ್ತು 16ನೇ ವಿಧಿ ಪ್ರಕಾರ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಕ್ಕೆ ಮಾತ್ರ ಮೀಸಲಾತಿ ಕಲ್ಪಿಸಲು ಅವಕಾಶವಿದೆ. ಇಲ್ಲಿ ಎಲ್ಲಿಯೂ ಆರ್ಥಿಕವಾಗಿ ಹಿಂದು ಳಿದವರು ಎಂಬ ಪದ ಬಳಸಿಲ್ಲ. ಹಾಗಾಗಿ ಕೇಂದ್ರದ ಬಿಜೆಪಿ ಸರ್ಕಾರ, ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ಕೊಟ್ಟಿರುವುದು ಸಂವಿಧಾನ ವಿರೋಧಿ ಎಂದು ಪ್ರತಿಪಾದಿಸಿದರು.

Translate »