- ಕೋವಿಡ್ ನಿಯಮಾನುಸಾರ ನೆರವೇರಿದ ಅಂತ್ಯಕ್ರಿಯೆ
- ಜೂ.24ರಂದು ಕೆ.ಆರ್.ನಗರದ ವೃದ್ಧ ಮೃತಪಟ್ಟಿದ್ದರು
ಮೈಸೂರು,ಜೂ.28(ಎಂಟಿವೈ)- ಮೈಸೂರಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಎಲ್ಲರಲ್ಲೂ ಆತಂಕ ಮನೆ ಮಾಡುತ್ತಿರುವ ಬೆನ್ನಲ್ಲೇ ಸೋಂಕಿನಿಂದ ಬಳಲುತ್ತಿದ್ದ 70 ವರ್ಷದ ವೃದ್ಧರೊಬ್ಬರು ಶನಿವಾರ ರಾತ್ರಿ ಸಾವಿಗೀಡಾಗಿದ್ದಾರೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ.
ವಯೋ ಸಹಜ ಉಸಿರಾಟದ ಸಮಸ್ಯೆ ಎಸ್‍ಎಆರ್‍ಐ (Severe Acute Respiratory Illness) ನಿಂದ ಬಳಲುತ್ತಿದ್ದ ಮೈಸೂರಿನ ಕಲ್ಯಾಣಗಿರಿ ನಿವಾಸಿ 70 ವರ್ಷದ ವೃದ್ಧರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಕಳೆದ ನಾಲ್ಕೈದು ದಿನದಿಂದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗಂಭೀರ ಪರಿಸ್ಥಿತಿಯಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದರಿಂದ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಒಂದೆಡೆ ಕೊರೊನಾ ಸೋಂಕು, ಮತ್ತೊಂದೆಡೆ ಜ್ವರ, ಕೆಮ್ಮು, ಕಫ, ತೀವ್ರ ಉಸಿರಾಟದ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ವೈದ್ಯರು ಈ ಪ್ರಕರಣವನ್ನು ಸವಾ ಲಾಗಿ ಸ್ವೀಕರಿಸಿ ಚಿಕಿತ್ಸೆ ನೀಡಿದ್ದರೂ ಸ್ಪಂದಿಸದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಈ ಪ್ರಕರಣದಿಂದ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 2ಕ್ಕೆ ಏರಿದೆ. ಜೂ.24ರಂದು ಕೆ.ಆರ್.ನಗರದ 87 ವರ್ಷದ ವೃದ್ದರೊಬ್ಬರು ಮೃತಪಟ್ಟಿದ್ದರು.
ಮದ್ಯರಾತ್ರಿಯೇ ಶವ ಸಂಸ್ಕಾರ: ಕೊರೊನಾ ಸೋಂಕಿನಿಂದ ವೃದ್ದ ಮೃತಪಟ್ಟ ಹಿನ್ನೆಲೆಯಲ್ಲಿ ಸೋಂಕು ಇತರರಿಗೆ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮದ್ಯರಾತ್ರಿ 1.30ರಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಕೋವಿಡ್-19 ನಿಯಮಾನುಸಾರ ಪಿಪಿಇ ಕಿಟ್ ದರಿಸಿ, ಮೂರ್ನಾಲ್ಕು ಮಂದಿ ಕುಟುಂಬಸ್ಥರ ಸಮ್ಮುಖದಲ್ಲಿ ವಿಧಿವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇಂದು 18 ಹೊಸ ಪ್ರಕರಣ, 32 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್: ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ವಾಪಸ್ಸಾಗುತ್ತಿರುವವರಲ್ಲಿ ಕೊರೊನಾ ಸೋಂಕು ದೃಡಪಡುತ್ತಿದ್ದು, ಮೈಸೂರಿಗರಿಗೆ ತೀವ್ರ ತಲೆನೋವು ತಂದಿತ್ತಿದೆ. ಭಾನುವಾರ 8 ಮಹಿಳೆಯರೂ ಸೇರಿದಂತೆ 18 ಮಂದಿಯಲ್ಲಿ ಕೊರೊನಾ ಸೋಂಕು ದೃಡಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 255ಕ್ಕೆ ಏರಿದೆ. ಇಂದು 32 ಮಂದಿ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಡಿಸ್ಚಾರ್ಜ್ ಆದವರ ಸಂಖ್ಯೆ 164ಕ್ಕೆ ಹೆಚ್ಚಳವಾಗಿದೆ. ಪ್ರಸ್ತುತ 89 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಪತ್ತೆಯಾದ 18 ಮಂದಿ ಹೊಸ ಸೋಂಕಿತರಲ್ಲಿ ನಾಲ್ವರು ಸೋಂಕಿತ ವ್ಯಕ್ತಿಗಳಿಂದ ಸಂಪರ್ಕ ಹೊಂದಿದ್ದರೆ, 4 ಮಂದಿಗೆ ಎಸ್‍ಎಆರ್‍ಐ, 4 ಮಂದಿಗೆ ಐಎಲ್‍ಐ, ಇಬ್ಬರಲ್ಲಿ ಅಸ್ತಮಾ, ಓರ್ವ ಗರ್ಭಿಣಿ ಹಾಗೂ ಇಬ್ಬರು ಬೆಂಗಳೂರಿಂದ ಬಂದವರಾಗಿದ್ದಾರೆ.
ವಿವಿಧ ರಾಜ್ಯ ಮೈಸೂರಿಗೆ ವಾಪಸ್ಸಾಗಿರುವ 2,632 ಮಂದಿ ಕ್ವಾರಂಟೇನ್‍ನಲ್ಲಿದ್ದಾರೆ. ಅವರಲ್ಲಿ 195 ಮಂದಿ 7 ದಿನಗಳ ಫೆಸಿಲಿಟಿ ಕ್ವಾರಂಟೇನ್‍ನಲ್ಲೂ, 2,437 ಮಂದಿ 14 ದಿನಗಳ ಹೋಮ್ ಕ್ವಾರಂಟೇನ್‍ನಲ್ಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಇದುವರೆಗೂ 11666 ಮಂದಿ ಮೇಲೆ ನಿಗಾ ಇಡಲಾಗಿತ್ತು. ಅವರಲ್ಲಿ 8945 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. ಇದುವರೆಗೆ 19469 ಮಂದಿ ಕಫ, ಗಂಟಲಿನ ದ್ರವ ಪರೀಕ್ಷೆ ಮಾಡಲಾಗಿತ್ತು. ಅವರಲ್ಲಿ 19214 ಮಂದಿಯ ಸ್ಯಾಂಪಲ್ ನೆಗೆಟಿವ್ ಬಂದಿದೆ. 255 ಪಾಸಿಟಿವ್ ಆಗಿತ್ತು. ಅದರಲ್ಲಿ 164ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
9 ಹೊಸ ಕಂಟೇನ್ಮೆಂಟ್ ಜೋನ್: ಇಂದು ಪತ್ತೆಯಾದ ಎಲ್ಲಾ 18 ಮಂದಿ ಹೋಮ್ ಕ್ವಾರಂಟೇನ್‍ನಲ್ಲಿದ್ದರು. ಈ ಹಿನ್ನೆಲೆಯಲ್ಲಿ ಸೋಂಕಿತರ ಪತ್ತೆಯಾದ ಮನೆ ಒಳಗೊಂ ಡಂತೆ ಹೊಸ ಕಂಟೇನ್ಮೆಂಟ್ ಜೋನ್ ಆಗಿ ಘೋಷಿಸಲಾಗಿದೆ. ಮೈಸೂರಿನ ರಾಘವೇಂದ್ರ ನಗರದ 4ನೇ ಕ್ರಾಸ್, ರಾಮಕೃಷ್ಣನಗರದ 16ನೇ ಕ್ರಾಸ್, ಮೈಸೂರಿನ ಉದಯಗಿರಿಯ ಕ್ವಾಬ ಮಸ್ಜಿದ್ ರಸ್ತೆ 5ನೇ ಕ್ರಾಸ್, ಸ್ಟೋನ್ ಪಾರ್ಕ್ ಬಳಿ, ಜೆ.ಪಿ.ನಗರದ 23ನೇ ಮೇನ್, ಡಿ ಬ್ಲಾಕ್, ಮೈಸೂರಿನ ಲಲಿತಮಹಲ್ ನಗರ, 9ನೇ ಕ್ರಾಸ್, ಗೌಸಿಯಾನಗರದ ಸುಲ್ತಾನ್ ರಸ್ತೆಯ 2ನೇ ಕ್ರಾಸ್, ಕೆ.ಆರ್.ನಗರದ ಹಂಪಾಪುರದ ದುರ್ಗಾಪರಮೇಶ್ವರಿ ದೇವಾಲಯದ ರಸ್ತೆ ಹಾಗೂ ಕೆ.ಆರ್.ನಗರದ ಬಸವರಾಜಪುರದಲ್ಲಿ ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಈ ಜೋನ್‍ನಲ್ಲಿ ಮನೆಯಿಂದ ಯಾರು ಹೊರ ಬರದಂತೆ ಸೂಚನೆ ನೀಡಲಾಗಿದ್ದು, ಪಹರೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ನಿಯಮ ಉಲ್ಲಂಘಿಸಿ ಯಾರಾದರೂ ಹೊರ ಬಂದರೆ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯರಿಗೆ ಎಚ್ಚರಿಸಲಾಗಿದೆ