ಇಂದಿನಿಂದ ಮೈಸೂರು-ಹೈದರಾಬಾದ್ ಮತ್ತೊಂದು ವಿಮಾನ ಹಾರಾಟ
ಮೈಸೂರು

ಇಂದಿನಿಂದ ಮೈಸೂರು-ಹೈದರಾಬಾದ್ ಮತ್ತೊಂದು ವಿಮಾನ ಹಾರಾಟ

December 28, 2020

ಮೈಸೂರು, ಡಿ.27- ಮೈಸೂರಿನಿಂದ ಹೈದರಾಬಾದ್‍ಗೆ ವಾಯುಮಾರ್ಗದಲ್ಲಿ ಸಂಚರಿಸುವವರಿಗೆ ಸಿಹಿ ಸುದ್ದಿ. ಎರಡೂ ಮಹಾನಗರಗಳ ನಡುವೆ ನಿತ್ಯ ಸಂಚರಿಸಲು ಪ್ರಯಾಣಿಕರಿಗೆ ಮತ್ತೊಂದು ವಿಮಾನ ದೊರೆಯುತ್ತಿದೆ. ಪ್ರಸ್ತುತ ಏರ್ ಇಂಡಿಯಾದ ಅಂಗಸಂಸ್ಥೆ ಅಲಯನ್ಸ್ ಏರ್‍ನ 1 ವಿಮಾನ ಈ ಮಾರ್ಗದಲ್ಲಿ ನಿತ್ಯವೂ ಹಾರಾಟ ನಡೆಸುತ್ತಿದೆ.

ಇಂಡಿಗೊ ಏರ್‍ಲೈನ್ಸ್ ವಿಮಾನ ಮೈಸೂರಿನಿಂದ ನಿತ್ಯ ಬೆಳಗ್ಗೆ 10.50ಕ್ಕೆ (ವಿಮಾನ ಸಂಖ್ಯೆ 6ಇ7956) ಹಾರಾಟ ಆರಂಭಿಸಿ, ಹೈದರಾಬಾದ್ ನಗರವನ್ನು ಮಧ್ಯಾಹ್ನ 12.50ಕ್ಕೆ (2 ಗಂಟೆ ಪ್ರಯಾಣ) ಮುಟ್ಟಲಿದೆ. ಹೈದರಾಬಾದ್‍ನಿಂದ ಬೆಳಗ್ಗೆ 8.35ಕ್ಕೆ ಹೊರಡುವ (6ಇ7955) ವಿಮಾನ ಬೆಳಗ್ಗೆ 10.25ಕ್ಕೆಲ್ಲಾ (1 ಗಂಟೆ 50 ನಿಮಿಷದಲ್ಲಿ) ಮೈಸೂರು ತಲುಪಲಿದೆ. ಅಲಯನ್ಸ್ ಏರ್ ವಿಮಾನ ಮಧ್ಯಾಹ್ನ 2.35ಕ್ಕೆ ಹೈದರಾಬಾದ್ ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ ಮೈಸೂರು ವಿಮಾನ ನಿಲ್ದಾಣದಲ್ಲಿ ಬಂದಿ ಳಿಯಲಿದೆ. ಮತ್ತೆ ರಿಟರ್ನ್ ಜರ್ನಿಯಲ್ಲಿ ರಾತ್ರಿ 8ಕ್ಕೆ ಮೈಸೂರಿನಿಂದ ಹೊರಡುವ ಎಐ 9882 ವಿಮಾನ ರಾತ್ರಿ 10 ಗಂಟೆಗೆ ಹೈದರಾಬಾದ್ ತಲುಪಲಿದೆ.

ಲಾಭ ತರುವ ಮಾರ್ಗ: ಇಂಡಿಗೊ ಕಂಪನಿಯ ಅಧಿಕಾರಿಗಳು ಕೆಲ ದಿನಗಳ ಹಿಂದೆ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದು ಹೈದರಾಬಾದ್-ಮೈಸೂರು ನಡುವಿನ ವಿಮಾನ ಸಂಚಾರಕ್ಕಿರುವ ಬೇಡಿಕೆ, ಆದಾಯ ಗಳಿಕೆ ಮೊದಲಾದ ವಿಚಾರಗಳ ಅಧ್ಯಯನ ನಡೆಸಿದ್ದರು. ಈ ಮಾರ್ಗದಲ್ಲಿ ಮತ್ತೊಂದು ವಿಮಾನ ಹಾರಾಟ ನಡೆಸಿದರೆ ಲಾಭವಾಗುತ್ತದೆ ಎಂಬುದು ಸ್ಪಷ್ಟವಾದ ಬಳಿಕ ಮತ್ತೊಂದು ವಿಮಾನ ಸಂಚಾರಕ್ಕೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಮಂಡಕಳ್ಳಿಯಲ್ಲಿನ ಮೈಸೂರು ವಿಮಾನ ನಿಲ್ದಾಣದ ಅಧಿ ಕಾರಿಗಳು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಹೆಚ್ಚಿದ ಬೇಡಿಕೆ: ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಜನರು ಮೈಸೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ಫೋಸಿಸ್ ಸೇರಿದಂತೆ ಐಟಿ ಕಂಪನಿಗಳಲ್ಲಿ ನೌಕರಿ ಯಲ್ಲಿದ್ದಾರೆ. ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಚೇರಿ ಕೆಲಸ, ವಾಣಿಜ್ಯೋದ್ಯಮ ಚಟುವಟಿಕೆಗಳಿಗಾಗಿ ಎರಡೂ ನಗರಗಳ ನಡುವೆ ಹೆಚ್ಚು ಸಂಚರಿಸುವವರಿ ದ್ದಾರೆ. ಹಾಗಾಗಿ ಈ ಮಾರ್ಗದಲ್ಲಿ ವಿಮಾನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದರಿಂದಲೇ ಇಂಡಿಗೊ ಕಂಪನಿ ಮತ್ತೊಂದು ವಿಮಾನ ಸಂಚಾರ ಆರಂಭಿಸಲು ಮನಸ್ಸು ಮಾಡಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಶೇ.80 ಆಸನ ಭರ್ತಿ: ನಾಗರಿಕ ವಿಮಾನ ಯಾನ ಕ್ಷೇತ್ರದ `ಪ್ರಾದೇಶಿಕ ಸಂಪರ್ಕ ಯೋಜನೆ’ (ಆರ್‍ಸಿಎಸ್) ಮತ್ತು `ಉಡೇ ದೇಶ್ ಕಾ ಆಮ್ ನಾಗರಿಕ್’ (ಯುಡಿಎಎನ್ -ಉಡಾನ್) ಯೋಜನೆಗಳ ಉತ್ತೇಜನದಿಂದಾಗಿ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ವಿಮಾನಗಳ ಸಂಚಾರ ನಡೆಯುತ್ತಿದೆ. ಮೈಸೂರಿನಿಂದ ಬೆಂಗಳೂರು, ಮಂಗಳೂರು, ಬೆಳಗಾವಿ, ಚೆನ್ನೈ, ಹೈದರಾಬಾದ್, ಗೋವಾ, ಕೊಚ್ಚಿ ನಗರಗಳಿಗೂ ವಿಮಾನ ಸಂಪರ್ಕವಿದೆ. ಇದರಿಂದ ಮೈಸೂರಿನ ನಾಗರಿಕರು, ವಾಣಿಜ್ಯೋದ್ಯಮಿಗಳಿಗೆ. ಪ್ರವಾಸಿಗರಿಗೆ ಹೆಚ್ಚಿನ ವಿಮಾನ ಸೌಲಭ್ಯ ದೊರಕಿದಂತಾಗಿದೆ. ಈ ಮಾರ್ಗಗಳಲ್ಲಿ ವಿಮಾನಗಳಿಗೆ ಬೇಡಿಕೆ ಎಷ್ಟಿದೆ ಎಂದರೆ ಮೈಸೂರಿನಿಂದ ಹೊರಡುವ, ಮೈಸೂರಿಗೆ ಆಗಮಿಸುವ ಪ್ರತಿ ವಿಮಾನದಲ್ಲೂ ಶೇ.75-80ರಷ್ಟು ಆಸನಗಳು ಭರ್ತಿಯಾಗಿರುತ್ತವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

Translate »