ರಸ್ತೆ ನಿಯಮ ಉಲ್ಲಂಘಿಸಿದ ವಾಹನಗಳಿಗೆ ಲಾಕ್
ಮೈಸೂರು

ರಸ್ತೆ ನಿಯಮ ಉಲ್ಲಂಘಿಸಿದ ವಾಹನಗಳಿಗೆ ಲಾಕ್

December 28, 2020

ಮೈಸೂರು,ಡಿ.27(ಎಂಟಿವೈ)- ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಓಡಾಡುತ್ತಿದ್ದ ವಾಹನ ಸವಾರರಿಗೆ ಇನ್ನು ಮುಂದೆ ಸಂಕಷ್ಟದ ಸ್ಥಿತಿ ಎದುರಾಗಲಿದ್ದು, ನಿಯಮ ಉಲ್ಲಂಘಿಸಿ ದಂಡ ಪಾವತಿಸದ ವಾಹನಗಳು ನಿಂತರೂ, ಚಲಿಸುತ್ತಿದ್ದರೂ ಸಂಚಾರಿ ಪೊಲೀಸರು ಬೆನ್ನತ್ತಲಿದ್ದಾರೆ.

ನಿಯಮ ಉಲ್ಲಂಘಿಸುವುದನ್ನೇ ಪರಿಪಾಠ ವಾಗಿಸಿಕೊಂಡಿರುವ ವಾಹನ ಸವಾರರಿಗೆ ಬಿಸಿಮುಟ್ಟಿಸಲು ಸಂಚಾರ ಪೊಲೀಸರು ಹೊಸ ಹೊಸ ಮಾರ್ಗ ಹುಡುಕುತ್ತಿದ್ದು, ಇದೀಗ ಪಾರ್ಕಿಂಗ್ ಸ್ಥಳದಲ್ಲಿ ನಿಂತಿರುವ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಒಂದೆಡೆ ವಿವಿಧೆಡೆ ನಾಕಾಬಂಧಿ ಹಾಕಿ ವಾಹನ ತಪಾಸಣೆಯಲ್ಲಿ ತೊಡಗಿದ್ದರೆ, ಮತ್ತೊಂದೆಡೆ ರಸ್ತೆ ಬದಿ ಪಾರ್ಕಿಂಗ್ ಸ್ಥಳದಲ್ಲಿ ನಿಂತಿರುವ ವಾಹನಗಳ ಮೇಲೂ ದೃಷ್ಟಿ ಹಾಯಿಸುತ್ತಿದ್ದಾರೆ. ಈಗಾಗಲೇ ಆಯಾ ಸಂಚಾರ ಠಾಣೆಯ ಇಂಟರ್‍ಸೆಪ್ಟರ್ ವಾಹನದಲ್ಲಿ ರುವ ಎಎಸ್‍ಐ, ಪೇದೆ ಹಾಗೂ ಹೋಮ್‍ಗಾರ್ಡ್‍ವುಳ್ಳ ತಂಡಕ್ಕೆ ಪಾರ್ಕಿಂಗ್ ಸ್ಥಳದಲ್ಲಿ ನಿಂತಿರುವ ವಾಹನಗಳ ತಪಾಸಣೆ ಮಾಡುವ ಹೊಣೆಗಾರಿಕೆ ನೀಡಲಾಗಿದೆ. ಇದರಿಂದ ಮೈಸೂರಿನ ದೇವರಾಜ ಅರಸ್ ರಸ್ತೆ, ಸಯ್ಯಾಜಿರಾವ್ ರಸ್ತೆ, ವಿನೋಬಾ ರಸ್ತೆ, ಅಶೋಕ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ ಸೇರಿದಂತೆ ವಿವಿಧೆಡೆ ರಸ್ತೆ ಬದಿ ನಿಲ್ಲಿಸಿರುವ ವಾಹನಗಳ ಸಂಖ್ಯೆಯನ್ನು ಬ್ಲಾಕ್ ಬೆರಿಯಲ್ಲಿ ತಪಾಸಣೆ ಮಾಡುವ ಮೂಲಕ 5ಕ್ಕಿಂತ ಹೆಚ್ಚು ಕೇಸ್ ಇರುವ ವಾಹನಗಳಿಗೆ ಲಾಕ್ ಮಾಡುತ್ತಿದ್ದಾರೆ. ಪೊಲೀಸರ ಈ ಹೊಸ ನಿಯಮದಿಂದ ಸಂಚಾರಿ ನಿಯಮ ಉಲ್ಲಂಘಿಸಿದ್ದ ದ್ವಿಚಕ್ರ ವಾಹನ, ಕಾರುಗಳ ಮಾಲೀಕರಿಗೆ ದಂಡದ ಹೊರೆ ಬೀಳುತ್ತಿದೆ. ಸಂಚರಿಸುತ್ತಿದ್ದ ವಾಹನವನ್ನು ತಡೆದು ಪರಿಶೀಲಿಸಲು ಪೊಲೀಸರಿಗೆ ದುಸ್ಥರವಾಗಿತ್ತು. ಆದರೆ ಇದೀಗ ನಿಂತ ಸ್ಥಿತಿಯಲ್ಲಿರುವ ವಾಹನಗಳನ್ನು ಸುಲಭವಾಗಿ ತಪಾಸಣೆ ಮಾಡಲಾಗು ತ್ತಿದ್ದು, ದಂಡದ ಮೊತ್ತ ನಿಂತಲ್ಲೇ ಸಂಗ್ರಹಿಸಲು ಸುಲಭವಾಗಿದೆ. 5ಕ್ಕಿಂತ ಹೆಚ್ಚು ಪ್ರಕರಣ ಇರುವ ವಾಹನಗಳು ಕಂಡರೆ ದ್ವಿಚಕ್ರ ವಾಹನಗಳಿಗೆ ಹಿಂಬದಿಯ ಟೈರ್‍ಗೆ ಲಾಕ್ ಮಾಡಿದರೆ, 4 ಚಕ್ರದ ವಾಹನಗಳಿಗೆ ಚಾಲಕರ ಗಮನಕ್ಕೆ ಸುಲಭವಾಗಿ ಬರುವಂತೆ ಮುಂಭಾಗದ ಬಲ ಬದಿಯ ಚಕ್ರಕ್ಕೆ ಲಾಕ್ ಮಾಡಿ, ಸ್ಟಿಕ್ಕರ್ ಅಂಟಿಸಲಾಗುತ್ತಿದೆ. ಒಂದು ವೇಳೆ ಮಾಲೀಕರು ದಂಡ ಪಾವತಿಸದಿದ್ದರೆ ಆ ವಾಹನವನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗುತ್ತದೆ. ದಂಡ ಕಟ್ಟದಿದ್ದರೆ ಶಾಶ್ವತವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

Translate »