ಮುರುಘಾ ಶರಣರ ವಿರುದ್ಧ ಮೈಸೂರು ನಜರ್‍ಬಾದ್ ಠಾಣೆಯಲ್ಲಿ ಮತ್ತೊಂದು ಪೋಕ್ಸೋ ಪ್ರಕರಣ ದಾಖಲು
ಮೈಸೂರು

ಮುರುಘಾ ಶರಣರ ವಿರುದ್ಧ ಮೈಸೂರು ನಜರ್‍ಬಾದ್ ಠಾಣೆಯಲ್ಲಿ ಮತ್ತೊಂದು ಪೋಕ್ಸೋ ಪ್ರಕರಣ ದಾಖಲು

October 15, 2022

ಮೈಸೂರು, ಅ.14(ಆರ್‍ಕೆ)-ಇಬ್ಬರು ಅಪ್ರಾಪ್ತ ಬಾಲಕಿ ಯರ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಆರೋ ಪದ ಮೇರೆಗೆ ಪೋಕ್ಸೋ ಕಾಯಿ ದೆಯಡಿ ಬಂಧಿತ ರಾಗಿ ಜೈಲು ಸೇರಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮತ್ತೆ ನಾಲ್ವರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋ ಪದ ಮೇರೆಗೆ ಮೈಸೂರಿನ ನಜರ್ ಬಾದ್ ಠಾಣೆಯಲ್ಲಿ ಗುರುವಾರ ರಾತ್ರಿ 11.45ರಲ್ಲಿ ಮತ್ತೊಂದು ಪೋಕ್ಸೋ ಪ್ರಕರಣ ದಾಖಲಾಗಿದ್ದು, ಈ ಪ್ರಕರಣ ವನ್ನು ಇಂದು ಬೆಳಗ್ಗೆ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.

ಕೌಟುಂಬಿಕ ಕಲಹದಿಂದಾಗಿ ಪತಿ ಯನ್ನು ತೊರೆದು, ಮಠದ ದಾಸೋಹ ಭವನದಲ್ಲಿ ಅಡುಗೆ ಸಹಾಯಕಳಾಗಿ ಕೆಲಸ ಮಾಡುತ್ತಿದ್ದ ಮಹಿಳೆಯು ತನ್ನ ಇಬ್ಬರು ಪುತ್ರಿಯರು ಹಾಗೂ ಮತ್ತಿಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಮುರುಘಾ ಶ್ರೀಗಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ತನ್ನ ದೂರಿನಲ್ಲಿ ತಿಳಿಸಿದ್ದು, ಚಿತ್ರದುರ್ಗದ ಅಕ್ಕಮಹಾದೇವಿ ಹಾಸ್ಟೆಲ್‍ನ ವಾರ್ಡನ್ ರಶ್ಮಿ, ಮುರುಘಾ ಮಠದ ಮರಿ ಸ್ವಾಮಿಗಳಾದ ಬಸವಾದಿತ್ಯ, ಪರಮಶಿವಯ್ಯ, ಗಂಗಾಧರಯ್ಯ, ಮುರುಘಾ ಶ್ರೀಗಳ ಸಹಾ ಯಕ ಮಹಾಲಿಂಗ, ಅಡುಗೆ ಭಟ್ಟ ಕರಿಬಸಪ್ಪ ಸೇರಿದಂತೆ 7 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ.

ತನ್ನ ಮಕ್ಕಳು ಹಾಗೂ ಇತರ ಮಕ್ಕಳ ಮೇಲೆ ಶ್ರೀಗಳಿಂದ ಲೈಂಗಿಕ ದೌರ್ಜನ್ಯ ನಡೆದ ವಿಚಾರ ಗೊತ್ತಿದ್ದರೂ ಶ್ರೀಗಳು ಧಾರ್ಮಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಪ್ರಬಲರಾಗಿದ್ದ ಕಾರಣ, ಆರ್ಥಿಕವಾಗಿ ದುರ್ಬಲಳಾಗಿರುವ ನನ್ನ ಮತ್ತು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮತ್ತು ಶ್ರೀಗಳಿಂದ ನಮಗೆ ತೊಂದರೆಯಾ ಗಬಹುದು ಎಂಬ ಭಯದಿಂದ ಪೊಲೀಸರಿಗೆ ದೂರು ನೀಡಿರಲಿಲ್ಲ. ನನ್ನ ಮಕ್ಕಳಂತೆ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಇಬ್ಬರು ಮಕ್ಕಳು ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಸಹಕಾರ ಪಡೆದು ಪೊಲೀಸರಿಗೆ ದೂರು ಸಲ್ಲಿಸಿದ್ದರಿಂದ ನಾನೂ ಚಿತ್ರದುರ್ಗದಲ್ಲಿ ದೂರು ನೀಡುವ ಬದಲು ಮೈಸೂರಿಗೆ ಬಂದು ಒಡನಾಡಿ ಸೇವಾ ಸಂಸ್ಥೆಯವರನ್ನು ಭೇಟಿ ಮಾಡಿ ನಂತರ ದೂರು ಸಲ್ಲಿಸುತ್ತಿರುವುದಾಗಿ ಆಕೆ ತಿಳಿಸಿದ್ದಾಳೆ.

ಕೌಟುಂಬಿಕ ಕಲಹದಿಂದ ಕಳೆದ 10 ವರ್ಷಗಳ ಹಿಂದೆ ಪತಿಯನ್ನು ತೊರೆದು ಪೋಷಕರ ಆಶ್ರಯದಲ್ಲಿ ಇರುವ ತಾನು ಕಳೆದ 7 ವರ್ಷದಿಂದ ಮುರುಘಾ ಮಠದ ದಾಸೋಹ ಭವನದಲ್ಲಿ ಅಡುಗೆ ಸಹಾಯಕಳಾಗಿ ಕೆಲಸ ಮಾಡುತ್ತಿರುವುದಾಗಿ ದೂರಿನಲ್ಲಿ ತಿಳಿಸಿರುವ ಮಹಿಳೆಯು, ಪತಿಯ ಆಶ್ರಯವೂ ಇಲ್ಲದೆ, ಪೋಷಕರೂ ಕೂಡ ಆರ್ಥಿಕವಾಗಿ ಹಿಂದುಳಿದವರಾಗಿದ್ದರಿಂದ 2016ರಲ್ಲಿ 1ನೇ ತರಗತಿ ಮತ್ತು 3ನೇ ತರಗತಿಗೆ ತನ್ನಿಬ್ಬರು ಹೆಣ್ಣು ಮಕ್ಕಳನ್ನು ಮುರುಘಾ ಮಠದ ಆಶ್ರಯದಲ್ಲಿರುವ ಅಕ್ಕಮಹಾದೇವಿ ವಸತಿ ಶಾಲೆಗೆ ಸೇರಿಸಿದ್ದಾಗಿ ತಿಳಿಸಿದ್ದಾಳೆ.

2020ರಲ್ಲಿ ಕೋವಿಡ್ ರಜೆ ಇದ್ದ ವೇಳೆ ವಾರ್ಡನ್ ರಶ್ಮಿ ಅವರು, ತನ್ನ ಇಬ್ಬರು ಮಕ್ಕಳನ್ನು ಮುರುಘಾ ಶ್ರೀಗಳ ಖಾಸಗಿ ಕೊಠಡಿಗೆ ಯಾವುದಾದರೂ ಕಾರಣ ನೀಡಿ ಕಳುಹಿಸುತ್ತಿದ್ದರು. ಮಕ್ಕಳು ಒಪ್ಪದಿದ್ದರೆ ಬಸವಾದಿತ್ಯ, ಪರಮಶಿವಯ್ಯ, ಗಂಗಾಧರಯ್ಯ ಅವರುಗಳು ಮಕ್ಕಳನ್ನು ಹೆದರಿಸಿ ಮುರುಘಾ ಶ್ರೀಗಳ ಕೊಠಡಿಗೆ ಕಳುಹಿಸುತ್ತಿದ್ದರು. ಮಕ್ಕಳನ್ನು ಶ್ರೀಗಳ ಬಳಿಗೆ ಕರೆದೊಯ್ಯುತ್ತಿದ್ದ ಮಹಾಲಿಂಗ ಮತ್ತು ಕರಿಬಸಪ್ಪ ಕೊಠಡಿಯೊಳಗೆ ಮಕ್ಕಳನ್ನು ಬಿಟ್ಟ ನಂತರ ಯಾರೂ ಬಾರದ ಹಾಗೆ ಬಾಗಿಲಲ್ಲಿ ಕಾವಲು ಕಾಯುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿರುವ ಮಹಿಳೆಯು, ಶ್ರೀಗಳಿಂದ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ನನ್ನ ಮಕ್ಕಳು ಮತ್ತು 10ನೇ ತರಗತಿ ವ್ಯಾಸಂಗ ಮಾಡುತ್ತಿರುವ 15 ವರ್ಷದ ಬಾಲಕಿ ಹಾಗೂ 9ನೇ ತರಗತಿಯ 14 ವರ್ಷದ ಬಾಲಕಿ ಕೂಡ ತನಗೆ ತಿಳಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತನ್ನ ಮಕ್ಕಳು ಋತುಮತಿಯಾಗುವವರೆಗೂ ಶ್ರೀಗಳು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಮಹಿಳೆಯ ದೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಚಂದ್ರಕುಮಾರ್ ಅವರು, ಹಾಜರುಪಡಿಸಿದ ನೊಂದ ಬಾಲಕಿ ಮತ್ತು ಆಕೆಯ ತಾಯಿಯ ಆಪ್ತ ಸಮಾಲೋಚನಾ ವರದಿಯ ನ್ನಾಧರಿಸಿ ಮುರುಘಾ ಶರಣರು ಸೇರಿದಂತೆ 7 ಮಂದಿ ವಿರುದ್ಧ ಪೋಕ್ಸೋ ಕಾಯಿದೆ ಯಡಿ ಪ್ರಕರಣ ದಾಖಲಿಸಿಕೊಂಡ ನಜರ್‍ಬಾದ್ ಠಾಣೆ ಪೊಲೀಸರು ಇಂದು ಬೆಳಗ್ಗೆ ಈ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾಯಿಸಿದ್ದಾರೆ.

Translate »