ಯಾವುದೇ ಕೈಗಾರಿಕೆ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲೇಬೇಕು
News

ಯಾವುದೇ ಕೈಗಾರಿಕೆ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲೇಬೇಕು

July 23, 2022

ಬೆಂಗಳೂರು, ಜು.22(ಕೆಎಂಶಿ)- ಸ್ಥಳೀಯರು ಮತ್ತು ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಹೊಸ ನೀತಿಗೆ ರಾಜ್ಯ ಸಚಿವ ಸಂಪುಟ ಹಸಿರು ನಿಶಾನೆ ನೀಡಿದೆ.
ಸಭೆಯ ನಂತರ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ, ಯಾವುದೇ ಕೈಗಾರಿಕೆ ತಾನು ಹೂಡುವ ಬಂಡವಾಳಕ್ಕೆ ಅನುಗುಣವಾಗಿ ಉದ್ಯೋಗ ಸೃಷ್ಟಿ ಮಾಡಿ ಕೊಳ್ಳಬೇಕು. ಸೃಷ್ಟಿಯಾಗುವ ಎಲ್ಲಾ ಹಂತದ ಹುದ್ದೆಗಳನ್ನು ಸ್ಥಳೀಯರು ಮತ್ತು ಕನ್ನಡಿಗರಿಗೇ ನೀಡಬೇಕು. ಅಷ್ಟೇ ಅಲ್ಲ ಇನ್ನು ಮುಂದೆ ಯಾವುದೇ ಕೈಗಾರಿಕೆ ತನ್ನ ಉದ್ಯಮ ವನ್ನು ವಿಸ್ತರಿಸುವ ಸಂದರ್ಭದಲ್ಲೂ ಅದೇ ಪ್ರಮಾಣದಲ್ಲಿ ಹೊಸ ಉದ್ಯೋಗ ಸೃಷ್ಟಿಯಾಗಬೇಕು. ಉದಾಹರಣೆಗೆ 100 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿ, ತನ್ನ ಸಂಸ್ಥೆಯನ್ನು ವಿಸ್ತರಿಸಿದರೆ ಸರ್ಕಾರ ನಿಗದಿಪಡಿಸಿದ
ಪ್ರಮಾಣದಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಯಾಗಬೇಕು. ಅವು ನಮ್ಮವರಿಗೇ ದೊರೆಯಬೇಕು. ರಾಜ್ಯದಲ್ಲಿ ದಿನದಿಂದ ದಿನಕ್ಕೆ ನಿರುದ್ಯೋಗ ಸಮಸ್ಯೆ ಆಗಾಧ ಪ್ರಮಾಣದಲ್ಲಿ ಬೆಳೆಯುತ್ತಿದೆ. ಇರುವ ಉದ್ಯೋಗಗಳು ಬೇರೆ ರಾಜ್ಯದ ಯುವಕರ ಪಾಲಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿರುವುದಲ್ಲದೆ, ಮುಂದಿನ 2025 ರವರೆಗೂ ಈ ನೀತಿ ಜಾರಿಯಲ್ಲಿರುತ್ತದೆ ಎಂದರು.

ರಸಗೊಬ್ಬರ ದಾಸ್ತಾನು: ರಸಗೊಬ್ಬರ ದಾಸ್ತಾನಿಗಾಗಿ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಗೆ ತಲಾ ರೂ. 200 ಕೋಟಿಗಳ ದುಡಿಯುವ ಬಂಡವಾಳ ಸಾಲ ನೀಡುವುದಾಗಿ ರಾಜ್ಯ ಸರ್ಕಾರದ ಖಾತ್ರಿಪಡಿಸಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

81 ಶಿಕ್ಷಾ ಬಂಧಿಗಳ ಬಿಡುಗಡೆ: 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ‘ಅಜಾದಿ ಕಾ ಅಮೃತ್’ ಮಹೋತ್ಸವ ಪ್ರಯುಕ್ತ ಕೇಂದ್ರ ಸರ್ಕಾರದ ಮಾರ್ಗಸೂಚಿ ಅಡಿಯಲ್ಲಿ 81 ಅರ್ಹ ನಿರ್ಧಿಷ್ಟ ವರ್ಗದ ಶಿಕ್ಷ ಬಂಧಿಗಳನ್ನು ಮೊದಲನೇ ಹಂತದಲ್ಲಿ ಬಿಡುಗಡೆ ಮಾಡಲು ಅನುಮತಿ ನೀಡಲಾಗಿದೆ. ಕೆಲವು ಷರತ್ತುಗಳನ್ನು ವಿಧಿಸಿ, ಜೀವಾವಧಿ ಶಿಕ್ಷೆಗೆ ಒಳಪಟ್ಟವರು ಇದರ ಲಾಭ ಪಡೆದುಕೊಳ್ಳಲಿದ್ದಾರೆ ಎಂದರು. ಅವರ ಸನ್ನಡತೆಯ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆ ಇದಾಗಿರುತ್ತದೆ.

ರೇಷ್ಮೆ ಇಲಾಖೆಯು ಸಮಗ್ರ ಗಣಕೀಕರಣ ಮಾಡಲು 15 ಕೋಟಿ ರೂ.ಗಳ ಅಂದಾಜಿಗೆ ಸಮ್ಮತಿ ನೀಡಲಾಗಿದೆ ಜಲಜೀವನ್ ಮಿಷನ್ ಯೋಜನೆಯಡಿ ಕೊಪ್ಪಳ, ಬೆಳಗಾವಿ, ಚಾಮರಾಜನಗರ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳ ಜನವಸತಿಗಳಲ್ಲಿ ಕುಡಿಯುವ ನೀರು ಕಲ್ಪಿಸುವ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಡಿ ದರ್ಜೆ ನೌಕರರ ನೇಮಕಾತಿ: ರಾಜ್ಯದ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 1142 ಡಿ ದರ್ಜೆಯ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಉನ್ನತ ಶಿಕ್ಷಣ ಇಲಾಖೆಗೆ ಅನುಮತಿ ನೀಡಲಾಗಿದೆ ಎಂದರು.

ಉಚಿತ ಶೂ, ಸಾಕ್ಸ್ ವಿತರಣೆ: ಶೈಕ್ಷಣಿಕ ಸಾಲಿಗೆ ವಿದ್ಯಾ ವಿಕಾಸ ಯೋಜನೆಯಡಿ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಾಕ್ಸ್, ಅಥವಾ ಸ್ಯಾಂಡಲ್‍ಗಳ ವಿತರಣೆಗೆ ರೂ. 132.00 ಕೋಟಿ ಅನುದಾನದಲ್ಲಿ ವಿತರಿಸಲು ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದರು.

Translate »