ಕೊನೆ ಆಷಾಢ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಭಕ್ತರ ಮಹಾಪೂರ
ಮೈಸೂರು

ಕೊನೆ ಆಷಾಢ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಭಕ್ತರ ಮಹಾಪೂರ

July 23, 2022

ಮೈಸೂರು,ಜು.22(ಎಂಟಿವೈ)-ಪ್ರಸಕ್ತ ಸಾಲಿನ ಆಷಾಢ ಮಾಸದ ಕೊನೆ ಶುಕ್ರವಾರ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದ ವಿಶೇಷ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ನಾಡ ದೇವತೆಯ ದರ್ಶನ ಪಡೆದರು.

ಕಳೆದ ಮೂರು ಆಷಾಢ ಶುಕ್ರವಾರ ಹಾಗೂ ವರ್ಧಂತಿ ಮಹೋತ್ಸವ ದಿನಗಳಿಗಿಂತ ಕೊನೆ ಶುಕ್ರವಾರವಾದ ಇಂದು ಬೆಟ್ಟಕ್ಕೆ ಬಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಶಕ್ತಿ ದೇವತೆಯ ಆರಾಧನೆಯ ಶ್ರೇಷ್ಠ ಆಷಾಢದ ಶುಕ್ರವಾರ ದಂದು ನಾಡದೇವಿಯ ದರ್ಶನ ಪಡೆದರೆ ಒಳಿತಾಗಲಿದೆ ಎಂಬ ಪ್ರತೀತಿ ಮೇರೆಗೆ ಇಂದು ರಾಜ್ಯದ ವಿವಿಧ ಜಿಲ್ಲೆ ಗಳಿಂದ ಭಕ್ತರ ದಂಡೇ ಬೆಟ್ಟಕ್ಕೆ ಹರಿದು ಬಂತು. ಮೋಡ ಕವಿದ ವಾತಾವರಣ, ಆಗಾಗ ತುಂತುರು ಮಳೆ ಬೀಳು ತ್ತಿದ್ದರೂ, ಭಕ್ತರು ಯಾವುದನ್ನು ಲೆಕ್ಕಿಸದೇ ನಾಡದೇವಿಯ ದರ್ಶನ ಪಡೆಯಲು ಉತ್ಸುಕರಾಗಿದ್ದರು. ಇಂದು ಬೆಟ್ಟಕ್ಕೆ ಬಂದವರಲ್ಲಿ ತಮಿಳು ನಾಡು ಸೇರಿದಂತೆ ಹೊರ ರಾಜ್ಯದ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ವಿಶೇಷವಾಗಿತ್ತು.

ಮುಂಜಾನೆಯಿಂದಲೇ ಪೂಜೆ: ದೇವಾ ಲಯದ ಪ್ರಧಾನ ಆಗಮಿಕ ಡಾ.ಎನ್.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಮುಂಜಾನೆ 3.30ರಿಂದಲೇ ಮಹಾನ್ಯಾಸಕ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಅರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ಜರುಗಿದವು. ನಂತರ ಮಹಾಮಂಗಳಾ ರತಿ ಬಳಿಕ ಮುಂಜಾನೆ 5.30ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಬೆಳಗ್ಗೆ 9.30ಕ್ಕೆ ದೇವಾಲ ಯದ ಪ್ರಾಂಗಣದಲ್ಲೇ ಉತ್ಸವ ಮೂರ್ತಿ ಪ್ರದಕ್ಷಿಣೆ ನಡೆಯಿತು. ಸಂಪ್ರದಾಯದಂತೆ ದೇವತೆಗೆ ಪೆÇಲೀಸ್ ಇಲಾಖೆಯಿಂದ ಗಾಡ್ ಆಫ್ ಹಾನರ್(ಗನ್ ಸೆಲ್ಯೂಟ್) ಸಲ್ಲಿಸಲಾಯಿತು. ರಾತ್ರಿ 9.30 ರವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಸಿಂಹವಾಹಿನಿ ಅಲಂಕಾರ: ಆಷಾಢ ಶುಕ್ರವಾರದ ಪೂಜಾ ಮಹೋತ್ಸವದ ಹಿನ್ನೆಲೆ ಯಲ್ಲಿ ಚಾಮುಂಡೇಶ್ವರಿ ದೇವಾ ಲಯದ ಮುಖ್ಯ ದ್ವಾರದಿಂದ ಗರ್ಭ ಗುಡಿಯ ಮುಂಭಾಗದ ಪ್ರಾಂಗಣವನ್ನು ನಾನಾ ಹೂವುಗಳಿಂದ ಅಲಂಕರಿಸಲಾಗಿತ್ತು. ದೇವಿಗೆ ಸಿಂಹವಾಹಿನಿ ಅಲಂಕಾರ ಮಾಡಲಾಗಿತ್ತು. ಗುರುವಾರ ರಾತ್ರಿ 10 ಗಂಟೆಯಿಂದಲೇ ಮೆಟ್ಟಿಲು ಮೂಲಕ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಭಕ್ತರು ರಾತ್ರಿಯಿಡೀ ಸರತಿಯ ಸಾಲಿನಲ್ಲಿ ಜಾಗರಣೆ ಮಾಡಿದರು. ಮುಂಜಾ ನೆಯೇ ದೇವಿಯ ದರ್ಶನ ಪಡೆದರು.

ಮೆಟ್ಟಿಲು ಮೂಲಕ: ವಿವಿಧ ಹರಕೆ ಹೊತ್ತ ಮಹಿಳೆಯರು ಸೇರಿದಂತೆ ಅಪಾರ ಭಕ್ತರು ಗುರುವಾರ ರಾತ್ರಿಯಿಂದ ಶುಕ್ರವಾರ ಸಂಜೆವರೆಗೂ ನಿರಂತರವಾಗಿ ಮೆಟ್ಟಿಲುಗಳ ಮೂಲಕ ಬೆಟ್ಟಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯಲು ಹಾತೊರೆದರು. ಮಳೆ ನಡುವೆಯೂ ಭಕ್ತರು ಮೆಟ್ಟಿಲು ಹತ್ತಿದ್ದು ವಿಶೇಷವಾಗಿತ್ತು. ಕೊನೆ ಶುಕ್ರವಾರವಾದ ಹಿನ್ನೆಲೆಯಲ್ಲಿ ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತುವವರ ಸಂಖ್ಯೆ ಹೆಚ್ಚಾಗಿತ್ತು.

ಪ್ರಸಾದ ವ್ಯವಸ್ಥೆ: ಆಷಾಢ ಶುಕ್ರವಾರದ ಅಂಗವಾಗಿ ಬೆಟ್ಟಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ಪ್ರಸಾದ ವಿನಿಯೋಗಿ ಸಲು ವ್ಯವಸ್ಥೆ ಮಾಡಲಾಗಿತ್ತು. ಇಂದು ಬೆಟ್ಟಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಎಸ್.ಎ. ರಾಮದಾಸ್, ನಟ ದರ್ಶನ್ ಸೇರಿದಂತೆ ಇನ್ನಿತರರು ದೇವಿಯ ದರ್ಶನ ಪಡೆದರು.

Translate »