ಭಾರತದ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು
News

ಭಾರತದ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು

July 22, 2022

1958ರ ಜೂನ್ 20ರಂದು ಓಡಿಸ್ಸಾದ ಮಯೂರ್ ಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮ ದಲ್ಲಿ ಸಂತಲಿ ಬುಡಕಟ್ಟು ಜನಾಂಗದಲ್ಲಿ ಜನಿಸಿದ ದ್ರೌಪದಿ ಮುರ್ಮು ಅವರ ತಂದೆ ಬಿರಾಂಚಿ ನಾರಾಯಣ್ ತಡು ಮತ್ತು ತಾತಾ ಸರಪಂಚ್ ಆಗಿದ್ದು, ಗ್ರಾಮದ ಮುಖ್ಯಸ್ಥರಾಗಿದ್ದರು. ಮುರ್ಮು ಅವರು ಭುವನೇಶ್ವರದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಬಿಎ ಪದವಿ ಪಡೆದ ನಂತರ ಶಾಲಾ ಶಿಕ್ಷಕಿಯಾಗಿ ನಂತರ ಒಡಿಶಾದ ರಾಯ್ ರಾಂಗ್‍ಪುರದ ವಿದ್ಯಾಸಂಸ್ಥೆಯೊಂದರ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. 1997ರಲ್ಲಿ ಬಿಜೆಪಿ ಸೇರ್ಪಡೆಯಾದ ಅವರು, ಬುಡಕಟ್ಟು ಮೋರ್ಚಾ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದರು. 1997ರಲ್ಲಿ ರಾಯ್‍ರಾಂಗ್‍ಪುರದ ಕೌನ್ಸಿಲರಾಗಿ ಸೇವೆ ಸಲ್ಲಿಸಿದ್ದ ಅವರು, 2000ರಲ್ಲಿ ಒಡಿಶಾ ವಿಧಾನಸಭೆಗೆ ಆಯ್ಕೆಯಾಗಿ ಬಿಜೆಪಿ-ಬಿಜೆಡಿ ಸಮ್ಮಿಶ್ರ ಸರ್ಕಾರದಲ್ಲಿ 2000ದಿಂದ 2002ರವರೆಗೆ ವಾಣಿಜ್ಯ ಮತ್ತು ಸಾರಿಗೆ ಸಚಿವರಾಗಿ 2002ರಿಂದ 2004 ರವರೆಗೆ ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ್ದು, 2007ರಲ್ಲಿ ಒಡಿಶಾ ವಿಧಾನಸಭೆಯಿಂದ ಅತ್ಯುತ್ತಮ ಶಾಸಕಿಯಾಗಿ ನೀಲಕಂಠ ಪ್ರಶಸ್ತಿಗೆ ಭಾಜನರಾದರು. 2014ರಲ್ಲಿ ರಾಯ್‍ರಾಂಗ್‍ಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಬಿಜೆಡಿ ಅಭ್ಯರ್ಥಿ ಎದುರು ಸೋಲನನುಭವಿಸಿದ್ದರು. 2015ರಲ್ಲಿ ಮುರ್ಮು ಅವರನ್ನು ಜಾರ್ಖಂಡ್‍ನ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಯಿತು. 2021ರಲ್ಲಿ ರಾಜ್ಯಪಾಲರ ಅವಧಿ ಮುಗಿದ ನಂತರ ರಾಯ್‍ರಾಂಗ್‍ಪುರದಲ್ಲಿ ಧ್ಯಾನ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಶ್ಯಾಮ್ ಚರಣ್ ಮುರ್ಮು ಎಂಬ ಬ್ಯಾಂಕ್ ಉದ್ಯೋಗಿಯನ್ನು ವಿವಾಹವಾಗಿದ್ದು, 2014ರಲ್ಲಿ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದರು. ಮುರ್ಮು ಅವರ ಓರ್ವ ಮಗ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದರೆ, ಮತ್ತೋರ್ವ ಮಗ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಮುರ್ಮು ಅವರ ಪುತ್ರಿ ಇತಶ್ರೀ ರಗ್ಬಿ ಆಟಗಾರ ಗಣೇಶ್ ಹೆಂಬ್ರಮ್ ಅವರನ್ನು ವಿವಾಹವಾಗಿ ಭುವನೇಶ್ವರದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ವೊಂದರ ಉದ್ಯೋಗಿಯಾಗಿದ್ದಾರೆ.

ಮುರ್ಮು ಅಭಿನಂದಿಸಿದ ಯಶವಂತ್ ಸಿನ್ಹಾ: ದ್ರೌಪದಿ ಮುರ್ಮು ಅವರನ್ನು ಯಶವಂತ್ ಸಿನ್ಹಾ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿನ್ಹಾ, 2022ರ ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರ ಗೆಲುವಿಗೆ ಅಭಿನಂದಿಸುತ್ತೇನೆ. ಅವರ ಗೆಲುವಿನ ಸಂಭ್ರಮಾಚರಣೆಯಲ್ಲಿ ದೇಶದ ನಾಗರಿಕ ರೊಂದಿಗೆ ನಾನೂ ಸೇರಿದ್ದೇನೆ. 15 ನೇ ರಾಷ್ಟ್ರಪತಿಯಾಗಿ ಅವರು ಯಾವುದೇ ಭಯ ಅಥವಾ ಪಕ್ಷಪಾತವಿಲ್ಲದೆ ಸಂವಿಧಾನದ ಪಾಲಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಭಾರತ ಭಾವಿಸುತ್ತದೆ ಎಂದು ತಿಳಿಸಿದ್ದಾರೆ.

Translate »